ಇನ್ನಾದರೂ ಚಲಿಸಲಿ ಜನಕಲ್ಯಾಣದ ರಥ...

Innaadaroo chalisali Janakalyaanada Ratha

14-02-2020

ಕದಡಿದ ನೀರು ಅಂತೂ ಇಂತೂ ತಿಳಿಯಾಗಿದೆ. ಈ ಮೊದಲು ಕಾಂಗ್ರೆಸ್‍-ಜೆಡಿಎಸ್‍ ತೆಕ್ಕೆಯಲ್ಲಿದ್ದು, ‘ಅನಿವಾರ್ಯ ಕಾರಣ’ಗಳಿಂದಾಗಿ ತಂತಮ್ಮ ಪಕ್ಷ ತೊರೆದು ಬಿಜೆಪಿಯ ಮಡಿಲು ಸೇರಿ, ಉಪಚುನಾವಣೆಯಲ್ಲೂ ಗೆದ್ದು ಶಾಸಕರೆನಿಸಿಕೊಂಡವರಿಗೆ ಯಥೋಚಿತ ಮಂತ್ರಿಗಾದಿ ನೀಡಲಾಗಿದೆ. ಹಲವು ತಿಂಗಳ ಕಾಲ ನಡೆದಿದ್ದ ‘ರಂಗ್‍ಬಿರಂಗಿ’ ರಾಜಕೀಯ ಪ್ರಹಸನಗಳಿಗೆ ಹೀಗಾದರೂ ತೆರೆಬಿದ್ದಿರುವುದನ್ನು ಕಂಡು ಶ್ರೀಮಾನ್‍ ಶ್ರೀಸಾಮಾನ್ಯನೂ ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರಬಹುದು!

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್‍-ಕಾಂಗ್ರೆಸ್‍ ಸಮ್ಮಿಶ್ರ ಸರ್ಕಾರದ ಕೆಲವೊಂದು ನಡೆಗಳು ಹಾಗೂ ಕಾರ್ಯವೈಖರಿಯನ್ನು ಪ್ರಶ್ನಿಸಿ ಉಭಯ ಪಕ್ಷಗಳ ಬರೋಬ್ಬರಿ 16 ಶಾಸಕರು ಕಳೆದ ವರ್ಷದ ಜುಲೈ ಆಸುಪಾಸಿನಲ್ಲಿ ರಾಜೀನಾಮೆ ನೀಡಿದಾಗ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದ್ದು ನಿಜ. ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡುತ್ತಿಲ್ಲ, ಶಾಸಕರ ಕಾರ್ಯನಿರ್ವಹಣೆಯಲ್ಲಿ ಸಮ್ಮಿಶ್ರ ಸರ್ಕಾರದ ಕೆಲ ‘ಪ್ರಭಾವಿಗಳು’ ಮೂಗು ತೂರಿಸುತ್ತಿದ್ದಾರೆ ಎಂಬುದು ಈ ವೇಳೆ ಅತೃಪ್ತರ ಆರೋಪವಾಗಿದ್ದರೆ, ರಾಜೀನಾಮೆ ನೀಡಿರುವ ಮಂದಿ ಬಿಜೆಪಿ ಸೇರಿ ಮಂತ್ರಿಗಿರಿ ಪಡೆಯುವ ಹುನ್ನಾರವಿಟ್ಟುಕೊಂಡಿದ್ದಾರೆ ಎಂಬುದು ದೋಸ್ತಿ ಸರ್ಕಾರದ ನಾಯಕರ ಕೂರಂಬು ಆಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.

ತರುವಾಯದಲ್ಲಿ, ಹೀಗೆ ರಾಜೀನಾಮೆ ನೀಡಿದ ಶಾಸಕರಿಗೆ ಸ್ಪೀಕರ್‍ ಅವರು ಅನರ್ಹತೆಯ ಕಿರೀಟ ತೊಡಿಸಿದ್ದು, ಅತೃಪ್ತ ಶಾಸಕರು ಸುಪ್ರೀಂಕೋರ್ಟ್‍ ಮೊರೆಹೋಗಿದ್ದು ಮತ್ತು ಇಷ್ಟೂ ಕಾಲಾವಧಿಯಲ್ಲಿ ನಡೆದ ರಾಜಕೀಯ ನಾಟಕಗಳನ್ನು ಜನಸಾಮಾನ್ಯರು ಅನಿವಾರ್ಯವಾಗಿ ಕಣ್ತುಂಬಿಕೊಳ್ಳಬೇಕಾಗಿ ಬಂದಿದ್ದು ಇವನ್ನೆಲ್ಲ ಬಿಡಿಸಿ ಹೇಳಬೇಕಿಲ್ಲ.

ಈ ಎಲ್ಲ ಬೆಳವಣಿಗೆಗಳು ಸಮರ್ಥನೀಯವೋ ಅಲ್ಲವೋ ಅದು ಬೇರೆ ಮಾತು. ಒಟ್ಟಿನಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಸ್ಥಿರತೆ ಒದಗಿದೆ ಎಂದು ಸದ್ಯಕ್ಕೆ ಅಂದುಕೊಳ್ಳಬಹುದು. ಹಾಗಂತ ಸರ್ಕಾರದ ಸಹಭಾಗಿಗಳು, ಅದರಲ್ಲೂ ವಿಶೇಷವಾಗಿ ಹೊಸದಾಗಿ ಮಂತ್ರಿಗಿರಿಯ ಭಾಗ್ಯ ಕಂಡವರು ಮೈಮರೆತು ಕೂರದೆ ಜನಕಲ್ಯಾಣದತ್ತ ಗಮನ ಹರಿಸಲಿ ಎಂಬುದೇ ಸಹೃದಯರ ಆಶಯ ಮತ್ತು ನಿರೀಕ್ಷೆ.

ಕಾರಣ, ಕರ್ನಾಟಕವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ‘ರೈತ ಅನ್ನದಾತ, ಈ ದೇಶದ ಬೆನ್ನೆಲುಬು’ ಎಂದೇನೋ ಸಭೆ-ಸಮಾರಂಭಗಳಲ್ಲಿ ತೌಡು ಕುಟ್ಟಲಾಗುತ್ತದೆ; ಆದರೆ ಈ ಅನ್ನದಾತನ ಹೊಟ್ಟೆಯು ಬೆನ್ನಿಗಂಟಿಕೊಂಡು ಯಾವುದೋ ಕಾಲವಾಗಿದೆ. ಸಕಾಲಕ್ಕೆ ಮಳೆಯಿಲ್ಲ, ಮಳೆ ಬಂದರೆ ಬೆಳೆಯಿಲ್ಲ, ಬೆಳೆ ಬಂದರೆ ಬೆಂಬಲಬೆಲೆ ಇಲ್ಲ, ಕೃಷಿ ಉತ್ಪನ್ನಗಳನ್ನು ಕಾಪಿಟ್ಟುಕೊಳ್ಳಲು ಸಮರ್ಥವಾದ ಧಾನ್ಯದ ಉಗ್ರಾಣಗಳಿಲ್ಲ, ಹಣ್ಣು-ತರಕಾರಿಗಳನ್ನು ಕೆಡದಂತೆ ಶೇಖರಿಸಿಡಲು ಶೈತ್ಯಾಗಾರಗಳಿಲ್ಲ- ಇವು ನಮ್ಮ ಕೃಷಿಬಂಧುಗಳು ಎದುರಿಸುತ್ತಿರುವ ಸರಣಿ-ಸಮಸ್ಯೆಗಳು. ಇಷ್ಟು ಸಾಲದೆಂಬಂತೆ ಮಧ್ಯವರ್ತಿಗಳ ಕಾಟ ಬೇರೆ!

ಇನ್ನು, ಯುವಪೀಳಿಗೆಯ ವಿಷಯಕ್ಕೆ ಬಂದರೆ, ಅವರ ಕಂಗಳಲ್ಲಿ ಭರವಸೆಯ ಜ್ಯೋತಿ ಮಾಯವಾಗಿ ಯಾವುದೋ ಕಾಲವಾಗಿದೆ. ದುಡಿಯಲು ತವಕಿಸುತ್ತಿರುವ ಕೈಗಳು ಸಾಕಷ್ಟಿದ್ದರೂ, ಸೂಕ್ತ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯಾಗದ ಪರಿಣಾಮ ಯುವಶಕ್ತಿ ಅಕ್ಷರಶಃ ಸೊರಗುತ್ತಿದೆ. ಅರಣ್ಯದ ಒತ್ತುವರಿ ಸದ್ದಿಲ್ಲದೆ ಮುಂದುವರಿದಿದೆ. ದೇಶಕ್ಕೆ ಸ್ವಾತಂತ್ರ್ಯ ದಕ್ಕಿ ದಶಕಗಳೇ ಆಗಿದ್ದರೂ, ನೀರು-ರಸ್ತೆ-ವಿದ್ಯುಚ್ಛಕ್ತಿಯಂಥ ಮೂಲಭೂತ ಸೌಕರ್ಯಗಳನ್ನೇ ಕಾಣದ ಹಳ್ಳಿಗಳ ಸಂಖ್ಯೆ ಸಾಕಷ್ಟಿದೆ.

ಇಲ್ಲಿ ಉಲ್ಲೇಖಿಸಿರುವುದು ಕೈಬೆರಳೆಣಿಕೆಯ ಸಮಸ್ಯೆಗಳನ್ನಷ್ಟೇ; ಕೆದಕುತ್ತ ಹೋದರೆ ಇನ್ನೂ ಹೇರಳ ಸಿಕ್ಕಾವು. ಸರ್ಕಾರ ಮತ್ತು ಅದರ ಸಹಭಾಗಿಗಳು, ಎಲ್ಲ ಪಕ್ಷಗಳಿಗೆ ಸೇರಿದ ಶಾಸಕರು ಈ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ, ಜನಕಲ್ಯಾಣದ ರಥವನ್ನು ಅಭಿವೃದ್ಧಿ ಪಥದಲ್ಲಿ ಎಳೆಯುವ ಸಂಕಲ್ಪ ತೊಡಲಿ. ತನ್ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲಿ.


ಸಂಬಂಧಿತ ಟ್ಯಾಗ್ಗಳು

Karnataka Govt New Cabinet Development Public welfare


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ