ನಮ್ಮ ಮೆಟ್ರೋ ಎರಡನೆ ಹಂತದ ಮಾರ್ಗಕ್ಕೆ 690 ಮರಗಳು ಬಲಿ ?

Kannada News

13-06-2017 219

ಬೆಂಗಳೂರು:- ನಮ್ಮ ಮೆಟ್ರೋ ಮೊದಲ ಹಂತ ಸಂಪೂರ್ಣವಾಗಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಯೋಜನೆ ಚುರುಕುಗೊಂಡಿದ್ದು, ಗೊಟ್ಟಿಗೆರೆ-ನಾಗವಾರ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಯಾಗಲಿರುವ 690 ಮರಗಳನ್ನು ತೆರವುಗೊಳಿಸಲು ಮುಂದಾಗಿದೆ. ಎರಡನೇ ಹಂತದ 21.25 ಕಿ.ಮೀ. ಉದ್ದದ ಗೊಟ್ಟಿಗೆರೆ-ನಾಗವಾರ ನಡುವಿನ ಎತ್ತರಿಸಿದ ಮಾರ್ಗದ ನಿರ್ಮಾಣಕ್ಕೆ 438 ಹಾಗೂ ಸುರಂಗ ಮಾರ್ಗದ ಕಾಮಗಾರಿಗೆ 252 ಮರಗಳನ್ನು ಗುರುತಿಸಲಾಗಿದ್ದು, ಒಟ್ಟಾರೆ ಈ ಮಾರ್ಗ ನಿರ್ಮಾಣಕ್ಕಾಗಿ 690 ಮರಗಳು ಬಲಿಯಾಗಲಿವೆ. ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍ಸಿಲ್) ಸಿದ್ಧಪಡಿಸಿರುವ 426 ಪುಟಗಳ ಪರಿಸರ ಪರಿಣಾಮ ನಿರ್ಧರಣಾ ಅಧ್ಯಯನ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಬಹುತೇಕ ನಿಲ್ದಾಣ ಮತ್ತು ಡಿಪೋ ನಿರ್ಮಾಣಕ್ಕಾಗಿಯೇ ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಅದರಲ್ಲೂ ಕೊತ್ತನೂರು ಬಳಿ 33 ಎಕರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಡಿಪೋಗಾಗಿ ಸುಮಾರು 120 ಮರಗಳನ್ನು ಕಡಿಯಬೇಕಾಗುತ್ತದೆ. ಉಳಿದಂತೆ ಮಾರ್ಗದುದ್ದಕ್ಕೂ ಬರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. ಉದ್ದೇಶಿತ ಕಾರಿಡಾರ್ ನಲ್ಲಿ 7 ಕಿ.ಮೀ. ಎತ್ತರಿಸಿದ ಮತ್ತು 13.8 ಕಿ.ಮೀ. ಸುರಂಗ ಮಾರ್ಗ ಬರುತ್ತದೆ. ಈ ಪೈಕಿ ಎತ್ತರಿಸಿದ ಮಾರ್ಗದ ಮಧ್ಯದಿಂದ ಎರಡೂ ಕಡೆ 19 ಮೀ. ಅಗಲ ಮತ್ತು 140 ಮೀ. ಎತ್ತರದಲ್ಲಿ ಹಾಗೂ ಸುರಂಗ ಮಾರ್ಗದ ಮಧ್ಯದಿಂದ 20 ಮೀ. ಅಗಲ ಮತ್ತು 200 ಮೀ. ಎತ್ತರದಲ್ಲಿ ಬರುವ ಮರಗಳನ್ನು ಗುರುತಿಸಿ, ತೆರವುಗೊಳಿಸಲಾಗುತ್ತಿದೆ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ