ತಣ್ಣಗಾದ ಡಿಕೆಶಿ

Tannagaada DK Shivakumar

13-02-2020

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಂಬಂಧವಾಗಿ ರಾಜ್ಯ ಕಾಂಗ್ರೆಸ್‍ ನಾಯಕರಲ್ಲಿ ಭಿನ್ನಮತ ಹೊಗೆಯಾಡುತ್ತಿರುವುದು ಗೊತ್ತಿರುವ ಸಂಗತಿಯೇ. ಈ ಹಿನ್ನೆಲೆಯಲ್ಲಿ ಮುಗುಮ್ಮಾಗಿದ್ದ ಕಾಂಗ್ರೆಸ್‍ ಹೈಕಮಾಂಡ್‍, ದೆಹಲಿ ವಿಧಾನಸಭಾ ಚುನಾವಣೆಯ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿತ್ತು.

ಕೆಪಿಸಿಸಿ ಅಧ್ಯಕ್ಷಗಿರಿಗೆ ಡಿ.ಕೆ. ಶಿವಕುಮಾರ್‍ ಹೆಸರು ಬಹುತೇಕ ಅಂತಿಮಗೊಂಡಿದ್ದರೂ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧವಾಗಿ ಜಾರಿ ನಿರ್ದೇಶನಾಲಯ (ಇ.ಡಿ.) ಡಿ.ಕೆ.ಶಿ. ಬೆನ್ನುಬಿದ್ದಿರುವುದನ್ನು ಮುಂದುಮಾಡಿಕೊಂಡು ಕೆಲ ಕಾಂಗ್ರೆಸ್ಸಿಗರು ಇದಕ್ಕೆ ಅಪಸ್ವರವೆತ್ತಿದ್ದಾರೆ ಎನ್ನುವುದೀಗ ಬಹಿರಂಗ ಗುಟ್ಟು. ಸಾಲದೆಂಬಂತೆ, ಇ.ಡಿ. ಅಧಿಕಾರಿಗಳು ಪ್ರಕರಣ ಸಂಬಂಧವಾಗಿ ಡಿ.ಕೆ.ಶಿ ತಾಯಿಯವರನ್ನು ಇತ್ತೀಚೆಗೆ ಅವರ ನಿವಾಸದಲ್ಲೇ ಸುಮಾರು ಎಂಟು ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಅಧಿಕಾರಿಗಳು ಶಿವಕುಮಾರ್‍ ಅವರನ್ನು ಮತ್ತೊಂದು ಸುತ್ತಿನ ವಿಚಾರಣೆಗೆ ಒಳಪಡಿಸಬಹುದು ಎಂಬ ಗ್ರಹಿಕೆಯೂ ಇದೆ. ಜತೆಗೆ, ಕೆಪಿಸಿಸಿ ಅಧ್ಯಕ್ಷಗಾದಿಗೆ ನೇಮಕಾತಿಯ ಸಂಬಂಧವಾಗಿ ಬಹಿರಂಗವಾಗಿ ಮಾತನಾಡದಿರುವಂತೆ ಹೈಕಮಾಂಡ್‍ನಿಂದ ಆಣತಿ ಬಂದಿದೆ ಎನ್ನಲಾಗಿದೆ. ಜತೆಗೆ ಕನಕಪುರ ತಾಲೂಕಿನ ಕಪಾಲಿ ಬೆಟ್ಟದಲ್ಲಿ ಯೇಸುವಿನ ಪ್ರತಿಮೆ ನಿರ್ಮಾಣಕ್ಕೆ ಡಿಕೆಶಿ ಶಿಲಾನ್ಯಾಸ ಕೈಗೊಂಡಿದ್ದು ಹಲವು ಸುತ್ತುಗಳ ವಿವಾದಕ್ಕೆ ಕಾರಣವಾಗಿದೆ.  

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್‍ ಅವರು ಕೆಪಿಸಿಸಿ ಗಾದಿ ಮತ್ತಿತರ ವಿಷಯಗಳ ಬದಲಿಗೆ ಸ್ವಂತದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಕಡೆಗೆ ಗಮನ ಕೊಡುವುದು ಒಳ್ಳೆಯದು ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

DK Shivakumar High command KPCC ED


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ