ಭಿನ್ನಮತ ಶಮನಕ್ಕೆ ಸಿಎಂ ಬ್ರಹ್ಮಾಸ್ತ್ರ!

BS Yediyurappa

05-02-2020

ಬೆಂಗಳೂರು: ಸಂಪುಟ ವಿಸ್ತರಣೆಯ ವಿಷಯ ಬಿಜೆಪಿಯಲ್ಲಿ ಭಿನ್ನಮತದ ಕಾರ್ಮೋಡ ಏಳಿಸುತ್ತಿದ್ದಂತೆಯೇ ಸಮ್ಮೋಹನಾಸ್ತ್ರ ಪ್ರಯೋಗಿಸಿರುವ ಸಿಎಂ ಯಡಿಯೂರಪ್ಪ ಜೂನ್ ತಿಂಗಳಲ್ಲಿ ಸಂಪುಟ ಪುನಾರಚನೆ ಮಾಡುತ್ತೇನೆ. ಹಿರಿಯರನ್ನು ಮಂತ್ರಿ ಮಾಡುತ್ತೇನೆ ಎನ್ನುವ ಮೂಲಕ ವಾತಾವರಣವನ್ನು ತಿಳಿಗೊಳಿಸಿದ್ದಾರೆ.

ಬಿಜೆಪಿಯಲ್ಲಿ ಎದ್ದಿದ್ದ ಮೂಲ-ವಲಸಿಗರ ನಡುವಣ ಕದನ ಸೋಮವಾರ ತಾರಕಕ್ಕೇರುತ್ತಿದ್ದಂತೆಯೇ ರಾತ್ರೋ ರಾತ್ರಿ ಮಹತ್ವದ ಸಭೆ ನಡೆಸಿದ ಯಡಿಯೂರಪ್ಪ,ಭಿನ್ನಮತವನ್ನು ನಿಲ್ಲಿಸಿ,ಜೂನ್ ತಿಂಗಳಲ್ಲಿ ನಡೆಯಲಿರುವ ಸಂಪುಟ ಪುನಾರಚನೆಯವರೆಗೆ ಮೌನವಾಗಿರಿ ಎಂದು ಸಮಾಧಾನಿಸಿದರು.

ವಲಸಿಗರಿಗೆ ಸಂಪುಟದಲ್ಲಿ ಹತ್ತು ಸ್ಥಾನ ನೀಡುವುದು,ಅದೇ ಕಾಲಕ್ಕೆ ಮೂಲ ಬಿಜೆಪಿಗರ ಪಟ್ಟಿಯಲ್ಲಿ ಸಿ.ಪಿ.ಯೋಗೇಶ್ವರ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಮೂಲ ಬಿಜೆಪಿಗರು ತಕರಾರು ತೆಗೆದಿದ್ದರು.

ಯೋಗೇಶ್ವರ್ ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಿರುವಾಗ ಅವರನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ.ಯಾಕೆಂದರೆ ಪಕ್ಷದಲ್ಲಿ ಗೆದ್ದವರಿಗಿಂತ ಸೋತವರಿಗೆ ಬೆಲೆ ಹೆಚ್ಚು ಎಂಬ ಸಂದೇಶ ರವಾನೆಯಾಗುತ್ತದೆ.

ಅದೇ ರೀತಿ ವಲಸಿಗರಿಗೆ ಕಡಿಮೆ ಸ್ಥಾನಗಳನ್ನು ಕೊಡಿ.ಮೂಲ ಬಿಜೆಪಿ ನಾಯಕರಿಗೆ ಸಂಪುಟದಲ್ಲಿ ಆದ್ಯತೆ ನೀಡಿ ಎಂದು ರೇಣುಕಾಚಾರ್ಯ ಅಂಡ್ ಗ್ಯಾಂಗು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿತ್ತು.

ರಾತ್ರಿ ನಡೆಸಿದ ಸಭೆಯಲ್ಲಿ ಮಾತುಕತೆ ನಡೆಸಿದ ಯಡಿಯೂರಪ್ಪ,ಇದು ಹೈಕಮಾಂಡ್ ಬಯಕೆಯಂತೆ ನಡೆಯುತ್ತಿರುವ ವಿಸ್ತರಣೆ.ಅದೇ ರೀತಿ ಸರ್ಕಾರ ಬರಲು ಕಾರಣರಾದವರಿಗೆ ಅನಿವಾರ್ಯವಾಗಿ ಮಂತ್ರಿಗಿರಿ ನೀಡಲೇಬೇಕಾದ ಸಂದರ್ಭ.

ಹೀಗಾಗಿ ಅವರನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ.ಅದೇ ರೀತಿ ಪಕ್ಷದ ವತಿಯಿಂದ ಯಾರು ಮಂತ್ರಿಗಳಾಗಬೇಕು?ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ.ಅದರ ವಿರುದ್ಧ ನೀವು ಕೂಗಿದರೆ ಇದರ ಹಿಂದಿರುವುದು ನಾನೇ ಎಂಬ ಸಂದೇಶ ರವಾನೆಯಾಗುತ್ತದೆ.ಹೀಗಾಗಿ ಭಿನ್ನಮತದ ಆಟ ಬೇಡ ಎಂದು ಯಡಿಯೂರಪ್ಪ ನೇರವಾಗಿ ಹೇಳಿದರು.

ಮೂಲ ಬಿಜೆಪಿಗರಿಗೆ ಹೆಚ್ಚು ಸ್ಥಾನ ನೀಡಬೇಕು ಎಂಬ ಮನಸ್ಸು ನನಗೂ ಇದೆ.ಆದರೆ ಸರ್ಕಾರ ಬರಲು ಕಾರಣರಾದವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲವಲ್ಲ?ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ನಮ್ಮ ಸರ್ಕಾರವೇ ಬರುತ್ತಿರಲಿಲ್ಲ.

ಆದ್ದರಿಂದ ಜೂನ್ ತಿಂಗಳ ತನಕ ಕಾಯಿರಿ. ಪಕ್ಷ ಬೆಳೆಸಲು ಕಾರಣರಾದವರನ್ನು, ಮೂಲ ಬಿಜೆಪಿಗರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮನಸ್ಸು ನನಗೂ ಇದೆ. ಜೂನ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಸಂಪುಟ ಪುನರ್ರಚನೆ ನಡೆಯಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BS Yediyurappa BJP cabinet C P Yogeshwar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ