ಬ್ಯಾಂಕುಗಳ ಸಾಲದ ಮರುಪಾವತಿ ಒಂದು ತಿಂಗಳಲ್ಲೇ ಶೇ 50 ರಷ್ಟು ಇಳಿಕೆ !

Kannada News

13-06-2017

ಬೆಂಗಳೂರು:- ಸಾಲ ಮನ್ನಾ ನಿರೀಕ್ಷೆಯಲ್ಲಿರುವ ರೈತರು, ಸಾಲ ಮರುಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದು ಎಲ್ಲಿ ಬ್ಯಾಂಕ್‍ಗಳು ಹಣ ಕಡಿತ ಮಾಡಿಕೊಳ್ಳುತ್ತಾರೆ ಎಂಬ ಭಯದಿಂದ ಅವರ ಖಾತೆಯಲ್ಲಿದ್ದ ಅಲ್ಪಸ್ವಲ್ಪ ಹಣವನ್ನೆಲ್ಲಾ ಹಿಂಪಡೆಯುತ್ತಿರುವುದು ಕಂಡುಬಂದಿದೆ. ರೈತರು ಬಾಕಿ ಹಣ ಮರುಪಾವತಿಸಲು ಹಿಂದೇಟು ಹಾಕುತ್ತಿರುರಿಂದ ಬ್ಯಾಂಕುಗಳ ಸಾಲದ ಮರುಪಾವತಿ ಪ್ರಮಾಣ ಕಡಿಮೆಯಾಗಿದ್ದು ಒಂದು ತಿಂಗಳಲ್ಲೇ ಪಾವತಿಯಾಗದ ಹಣದ ಪ್ರಮಾಣ ಶೇಕಡಾ 50ರಷ್ಟು ಇಳಿಕೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಒಟ್ಟಾರೆ ದೇಶದಲ್ಲಿ ಬ್ಯಾಂಕುಗಳಲ್ಲಿ ರೈತರ ಸಾಲ 10 ಲಕ್ಷ ಕೋಟಿ ರೂ. ಇದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸಭೆ ನಡೆಸಿ ರೈತರ ಸಾಲ ಮನ್ನಾ ಹೊರೆಯನ್ನು ಆಯಾ ರಾಜ್ಯಗಳೇ ಭರಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಇದು ರೈತರ ಆಸೆಗೆ ತಣ್ಣೀರೆರಚಿದೆ. ಆದರೂ ಆಯಾ ರಾಜ್ಯಗಳು ಸಾಲ ಮನ್ನಾ ಮಾಡಬಹುದು ಎಂಬ ಆಸೆ ರೈತರಲ್ಲಿ ಇನ್ನೂ ಮನೆ ಮಾಡಿದೆ. ಬ್ಯಾಂಕುಗಳು ನಮ್ಮ ಸಾಲದ ಖಾತೆಗಳಿಂದ ಹಣ ಕಳೆದುಕೊಳ್ಳುತ್ತಾರೆ ಎಂಬ ಹೆದರಿಕೆಯಿಂದ ರೈತರು ತಮ್ಮ ಖಾತೆಗಳಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಈಗಾಗಲೇ ರೈತರ ಸಾಲ ಮನ್ನಾ ಘೋಷಿಸಲಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ರೈತರ ಸಾಲ ಮನ್ನಾಕ್ಕೆ ತೀವ್ರ ಒತ್ತಡ ಇದೆ. ಆಂಧ್ರದಲ್ಲಿ ರೈತರ ಬಾಕಿ ಹಣ ಪಡೆದುಕೊಳ್ಳುವುದು ಬಹಳ ಕಷ್ಟ ಎಂದು ಆಂಧ್ರ ಪ್ರದೇಶದ ಎರಡು ಪ್ರಮುಖ ಬ್ಯಾಂಕುಗಳ ಅಧ್ಯಕ್ಷರು ಹೇಳಿದ್ದಾರೆ. 2014ರ ವಿಧಾನಸಭಾ ಚುನಾವಣೆಯ ಬಳಿಕ ಅಧಿಕಾರಕ್ಕೆ ಬಂದ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಒಟ್ಟು 40 ಸಾವಿರ ಕೋಟಿ ರೂ.ರೈತರ ಸಾಲವನ್ನು ಮನ್ನಾ ಮಾಡಿದೆ. ಇದರಿಂದ ಬ್ಯಾಂಕುಗಳ ಒಟ್ಟಾರೆ ಸಾಲ ನೀಡುವ ಸಾಮರ್ಥ್ಯವೂ ಕಡಿಮೆಯಾಗಿದೆ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಎಸ್‍ಬಿಐನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಕೂಡ ಸಾಲ ಮನ್ನಾದಿಂದ ಬ್ಯಾಂಕ್ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದರು. ರೈತರಿಗೆ ಸಹಾಯ ಮಾಡುವುದು ಅನಿವಾರ್ಯ ಆದರೆ ಅದು ಬ್ಯಾಂಕ್ ವ್ಯವಹಾರದ ಮೇಲೆ ಪರಿಣಾಮ ಬೀರಬಾರದು. ಸಾಲದ ಶಿಸ್ತನ್ನು ಮುರಿಯಬಾರದು ಎಂದು ಹೇಳಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ