ಯಡಿಯೂರಪ್ಪಗೆ ಹೈಮಾಂಡ್ ನಿಂದ ಗ್ರೀನ್ ಸಿಗ್ನಲ್

BS Yediyurappa

28-01-2020

ಬೆಂಗಳೂರು: ರಾಜ್ಯ ಸಚಿವ ಸಂಪುಟದಲ್ಲಿ ಬಿಜೆಪಿ ಮೂಲದ ಏಳು ಮಂದಿಗೆ ಅವಕಾಶ ನೀಡಿ, ಉಳಿದಂತೆ ನಿಮಗೆ ಬೇಕಾದ ದಿನ ಸಂಪುಟ ವಿಸ್ತರಣೆ ಮಾಡಿಕೊಳ್ಳಿ ಎಂದು ಪಕ್ಷದ ಹೈಕಮಾಂಡ್ ವರಿಷ್ಟರು ಸಿಎಂ ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಡ್ಡಗಾಲು ಎಂಬ ಮಾತು ಪದೇ ಪದೇ ಕೇಳಿ ಬರಲು ಅವಕಾಶ ನೀಡಬೇಡಿ. ಸರ್ಕಾರ ರಚನೆಯಾಗಲು ಕಾರಣರಾದವರಿಗೂ ನ್ಯಾಯ ಕೊಡಿ, ರಾಜ್ಯದಲ್ಲಿ ಪಕ್ಷ ಬೆಳೆಯಲು ಕಾರಣರಾದ ಸ್ವಪಕ್ಷೀಯರಿಗೂ ನ್ಯಾಯ ಕೊಡಿ ಎಂದು ವರಿಷ್ಟರು ಹೇಳಿದ್ದಾರೆ.

ಇದರ ಪರಿಣಾಮವಾಗಿ ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ಯಾವತ್ತು ವಿಸ್ತರಣೆ ಮಾಡಬೇಕು ಎಂಬ ವಿಷಯದಲ್ಲಿ ಗೊಂದಲಕ್ಕೆ ಸಿಲುಕಿದ್ದು ಬೀಸುವ ದೊಣ್ಣೆಯಿಂದ ಪಾರಾದರೆ ಸಾಕು ಎಂದು ಹಪಹಪಿಸತೊಡಗಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ವಲಸೆ ಬಂದ ಹದಿನೇಳು ಮಂದಿಯಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವಂತಾಯಿತು.ಈ ಪೈಕಿ ಕೇವಲ ಹನ್ನೊಂದು ಮಂದಿಗೆ ಮಾತ್ರ ಅವಕಾಶ ನೀಡಿದರೆ ಉಳಿದವರ ವಿಷಯದಲ್ಲಿ ನ್ಯಾಯ ನೀಡಿದಂತಾಗುವುದಿಲ್ಲ ಎಂದು ಯಡಿಯೂರಪ್ಪ ಹಿಂದಿನಿಂದ ವಾದಿಸುತ್ತಾ ಬಂದಿದ್ದರು.

ಹದಿನೇಳು ಮಂದಿಯ ಪೈಕಿ ಕನಿಷ್ಟ ಹದಿಮೂರು ಮಂದಿಗಾದರೂ ಮಂತ್ರಿಗಿರಿ ನೀಡಬೇಕು. ಇಲ್ಲವೇ ವಚನ ದ್ರೋಹಿ ಎಂಬ ಹಣೆಪಟ್ಟಿಯನ್ನು ನಾನು ಹೊರಬೇಕು. ಹೀಗಾಗಿ ಹದಿಮೂರು ಪ್ಲಸ್ ಐದು ಸೂತ್ರದಡಿ ಸಂಪುಟ ವಿಸ್ತರಿಸಲು ಅವಕಾಶ ಕೊಡಿ ಎಂದು ಯಡಿಯೂರಪ್ಪ ವರಿಷ್ಟರಿಗೆ ವಿವರಿಸಿದ್ದರು.

ಆದರೆ ವರಿಷ್ಟರು ಮಾತ್ರ,ಸರ್ಕಾರ ರಚಿಸಲು ಬೇರೆ ಪಕ್ಷಗಳಿಂದ ಬಂದ ಶಾಸಕರು ಹೇಗೆ ಕಾರಣವೋ?ಹಾಗೆಯೇ ಸ್ವಪಕ್ಷದವರೂ ಕಾರಣ. ಹೀಗಾಗಿ ಹನ್ನೊಂದು ಪ್ಲಸ್ ಏಳು ಸೂತ್ರದ ಆಧಾರದ ಮೇಲೆ ಸಂಪುಟ ವಿಸ್ತರಿಸಿ ಎಂದು ಹೇಳಿದ್ದಾರೆ. ಮಂತ್ರಿಗಿರಿಗೆ ಅರ್ಹರಾದವರ ದಂಡೇ ಪಕ್ಷದಲ್ಲಿದೆ.  ಆದರೂ ಬಹುತೇಕರು ಪಕ್ಷದ ನಡೆಗೆ ಅಡ್ಡವಾಗಬಾರದು ಎಂಬ ಕಾರಣಕ್ಕಾಗಿ ಬಂಡಾಯದಂತಹ ಕಾರ್ಯಕ್ಕೆ ಮುಂದಾಗುತ್ತಿಲ್ಲ.ಹಾಗಂತ ನಾವು ಸುಮ್ಮನಿರಲೂ ಸಾಧ್ಯವಾಗದು ಎಂಬುದು ವರಿಷ್ಟರ ಮಾತು.

ಬೇರೆ ಪಕ್ಷಗಳಿಂದ ಬಂದ ಎಲ್ಲರಿಗೂ ಮಂತ್ರಿಗಿರಿ ಕೊಡುವ ಅಗತ್ಯವೇನಿಲ್ಲ.ನೀವೇ ಅವರ ಮನವೊಲಿಸಿ.ಯಾವುದಾದರೂ ನಿಗಮ ಮಂಡಳಿಗಳ ಅಧ್ಯಕ್ಷರಾಗುವಂತೆ ಹೇಳಿ.ಹಾಗೆ ಮಾಡದಿದ್ದರೆ ಸರ್ಕಾರದಲ್ಲಿ ಬಿಜೆಪಿಯವರಿಗಿಂತ ಹೊರಗಿನಿಂದ ಬಂದವರಿಗೇ ಹೆಚ್ಚು ಆದ್ಯತೆ ಎಂಬ ಅಸಮಾಧಾನ ಶುರುವಾಗುತ್ತದೆ.

ಈ ಅಸಮಾಧಾನ ಬಹುಕಾಲ ಮುಂದುವರಿದರೆ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬೇಡಿ. ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದರೆ ಹೊರಗಿನಿಂದ ಎಷ್ಟು ಜನರನ್ನು ಕರೆದುಕೊಂಡು ಬಂದರೂ ಪ್ರಯೋಜನವೇನೂ ಇಲ್ಲ.

ಹೀಗಾಗಿ ಹನ್ನೊಂದು ಪ್ಲಸ್ ಏಳು ಸೂತ್ರದ ಆಧಾರದ ಮೇಲೆ ಸಚಿವ ಸಂಪುಟ ರಚಿಸಿ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೇ ಸೂಚನೆ ನೀಡಿದ್ದು ಇದರ ಪರಿಣಾಮವಾಗಿ ಮುಂದೇನು?ಎಂದು ಯಡಿಯೂರಪ್ಪ ಅವರು ಯೋಚಿಸುವಂತಾಗಿದೆ.

ಇದುವರೆಗೆ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಅಡ್ಡಗಾಲು ಹಾಕುತ್ತಿದೆ ಎಂದು ಸಚಿವಾಕಾಂಕ್ಷಿಗಳನ್ನು ಸಮಾಧಾನ ಮಾಡಲಾದರೂ ಸಾಧ್ಯವಿತ್ತು.ಆದರೆ ಈಗ ಅದೂ ಸಾಧ್ಯವಿಲ್ಲದಂತಾಗಿದ್ದು ತಾವು ಹೇಳಿದ ಸೂತ್ರದನುಸಾರ ನಿಮಗೆ ಇಚ್ಚೆ ಬಂದ ದಿನ ಸಂಪುಟ ವಿಸ್ತರಿಸಿ ಎಂದು ವರಿಷ್ಟರು ಸಂಪುಟ ವಿಸ್ತರಣೆಯ ಚೆಂಡನ್ನು ಯಡಿಯೂರಪ್ಪ ಅವರ ಅಂಗಳಕ್ಕೇ ಹಾಕಿ ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BS Yediyurappa BJP High command Amith Shah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ