ವಚನಾನಂದ; ಬಿಜೆಪಿಗೂ ಸೈ-ಕಾಂಗ್ರೆಸ್ ಗೂ ಜೈ?

Vachanananda

16-01-2020

ಕೆಲವೇ ವರ್ಷಗಳ ಹಿಂದೆ ಹೃಷಿಕೇಶದಲ್ಲಿ ಯೋಗ ಕಲಿತು ಬೆಂಗಳೂರಿಗೆ ಬಂದಿದ್ದ ಈ ವ್ಯಕ್ತಿಗೆ, ಆ ಟಿವಿ ಚಾನಲ್ ಯೋಗ ಕಾರ್ಯಕ್ರಮ ನಡೆಸಿಕೊಡುವ ಅವಕಾಶ ನೀಡಿತ್ತು. ಇವರು ಖಾವಿ ಧರಿಸಿದ್ದರು ಅನ್ನುವುದಷ್ಟೇ, ಇವರಿಗೂ ಯೋಗ ಕಲಿಸುವ ಇತರೆಯವರೆಗೂ ಇದ್ದ ವ್ಯತ್ಯಾಸ. ಟಿವಿ ಚಾನಲ್ ಗಳಲ್ಲಿ ಯೋಗ ಹೇಳಿಕೊಟ್ಟೇ ದೇಶದಲ್ಲಿ ಹೆಸರಾಗಿ, ಸಾಮ್ರಾಜ್ಯ ಕಟ್ಟಿಕೊಂಡ ಬಾಬಾ ರಾಮ್ ದೇವ್ ರೀತಿಯಲ್ಲೇ ಇವರೂ ಕೂಡ ಟಿವಿಯಲ್ಲಿ ಯೋಗ ಹೇಳಿಕೊಟ್ಟು ಒಂದಿಷ್ಟು ಹೆಸರಾದರು. ‘ಶ್ವಾಸ ಗುರು’ ಎಂದು ಕರೆದುಕೊಳ್ಳುತ್ತಿದ್ದ ಇವರು ‘ಯೋಗಿ ವಚನ್’ ಕೂಡ ಆಗಿದ್ದರು. ಖಾವಿಧಾರಿಯಾಗಿದ್ದರೂ ಅಂತಹ ಸಾತ್ವಿಕ ಕಳೆಯೇನೂ ಇವರಲ್ಲಿ ಕಾಣುತ್ತಿರಲಿಲ್ಲ, ಬದಲಿಗೆ, ನಾನು ದೊಡ್ಡದಾಗಿ ಬೆಳೆಯಬೇಕು, ನನ್ನದೇ ಒಂದು ಸಾಮ್ರಾಜ್ಯ ಕಟ್ಟಬೇಕು ಎಂಬ ಆಸೆಯಷ್ಟೇ ಕಾಣುತ್ತಿತ್ತು. ಬೆಂಗಳೂರಿನಲ್ಲಿ ತಮ್ಮ ಯೋಗ ಸಂಸ್ಥೆ ಆರಂಭಿಸಿದ ವಚನಾನಂದ, ರಾಜ್ಯಮಟ್ಟದ ಸರ್ಕಾರಿ ಪ್ರಾಯೋಜಿತ ಯೋಗ ಕಾರ್ಯಕ್ರಮಗಳ ಮೂಲಕವೂ ತಮ್ಮ ಮೌಲ್ಯ ಹೆಚ್ಚಿಸಿಕೊಂಡರು. ಆ ಬಳಿಕ, ರಾಜ್ಯದ ಹಲವಾರು ಮಠಗಳಿಗೆ ಎಡತಾಕುತ್ತಾ ಸ್ನೇಹ, ಸಂಪರ್ಕ ಸಾಧಿಸಲು ಹೆಣಗಾಡುತ್ತಿದ್ದರು. ಹಲವಾರುಬಾರಿ ತಮಗೆ ಮಾತನಾಡಲು ಮೈಕ್ ಸಿಕ್ಕಾಗೆಲ್ಲ ದೇಶದಲ್ಲಿ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಯ ‘ಭಕ್ತನಂತೆ’ ಬಡಬಡಿಸುತ್ತಿದ್ದರು. ಅಂತಿಮವಾಗಿ, ಹರಿಹರದ ಪಂಚಮಸಾಲಿ ಮಠದಲ್ಲಿ ಪ್ರತಿಷ್ಠಾಪನೆಗೊಂಡು ಸ್ವಘೋಷಿತ ‘ಜಗದ್ಗುರು’ವಾದರು. ಭಾರೀ ಪ್ರಚಾರ ಪ್ರಿಯರಾಗಿರುವ ಇವರು, ಹರ ಜಾತ್ರೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ, ಅದಕ್ಕೆ ಸಿಎಂ ಯಡಿಯೂರಪ್ಪನವರನ್ನೂ ಆಹ್ವಾನಿಸಿದ್ದರು. ಸಾವಿರಾರು ಜನರು ಸೇರಿದ್ದ ಬಹಿರಂಗ ವೇದಿಕೆಯ ಮೇಲಿನಿಂದಲೇ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿಸಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೊಬ್ಬೆ ಹಾಕಿದರು. ಆದರೆ, ವಚನಾನಂದರ ಮಾತಿನಿಂದ ಬೇಸರಗೊಂಡ ಯಡಿಯೂರಪ್ಪನವರು ‘ಸ್ವಾಮಿಗಳು ಸಲಹೆ ನೀಡಬಹುದಷ್ಟೇ ಹೊರತು ಬೆದರಿಕೆ ಹಾಕಬಾರದು’ ಎಂದು ಹೇಳುವ ಮೂಲಕ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆ ಬಳಿಕ, ಒಬ್ಬ ಸನ್ಯಾಸಿಯಾಗಿ ವಚನಾನಂದರು ನಡೆದುಕೊಂಡ ರೀತಿಯ ಬಗ್ಗೆ ಹಲವು ಮಠಾಧೀಶರು ಆಕ್ಷೇಪ ವ್ಯಕ್ತಪಡಿಸಿದ್ದರು. ಮಠಾಧೀಶರಿಗೇಕೆ ರಾಜಕೀಯ ಉಸಾಬರಿ ಎಂದು ರಾಜ್ಯದ ನಾಗರಿಕರೂ ಆಕ್ರೋಶ ವ್ಯಕ್ತಪಡಿಸಿದ್ದರು. ಹೇಗೋಮಾಡಿ ಬೆಳೆಯಬೇಕು, ಪ್ರಭಾವಶಾಲಿಯಾಗಬೇಕು, ಮೆರೆಯಬೇಕು ಎಂಬೆಲ್ಲ ಹುಮ್ಮಸ್ಸು ಹಾಗೂ ಧಾವಂತದಲ್ಲಿರುವಂತೆ ಕಂಡುಬರುವ ಈ ವ್ಯಕ್ತಿ, ಬಿಜೆಪಿ ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದ ಉನ್ನತ ನಾಯಕರ ಜೊತೆಗೂ ಸಂಪರ್ಕ ಇಟ್ಟುಕೊಂಡಿದ್ದಾರಂತೆ. ಇದನ್ನು ನೋಡಿದರೆ, ತಮ್ಮ ವರ್ಚಸ್ಸು ಹೆಚ್ಚಾಗಬೇಕು ಮತ್ತು ತಮ್ಮ ಮಠಕ್ಕೆ ತಮ್ಮ ತನು ಮನ ಧನ ಕೊಡುವ ಬೆಂಬಲಿಗರಿಗೆ ಲಾಭಮಾಡಿಕೊಡಬೇಕು ಎಂಬುದಷ್ಟೇ ಈ ವ್ಯಕ್ತಿಯ ಗುರಿಯಿದ್ದಂತೆ ಕಾಣುತ್ತದೆ.  ಯೋಗ ಅಂದರೆ ಕೇವಲ ದೈಹಿಕ ವ್ಯಾಯಾಮ ಅಲ್ಲ, ಅದು ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಕಲಿಸುತ್ತದೆ ಅನ್ನುವುದು ಎಲ್ಲರ ನಂಬಿಕೆ. ಆದರೆ, ಯೋಗ ಗುರುವಾಗಿ ಬೆಳಕಿಗೆ ಬಂದು, ಪೀಠಾಧಿಪತಿಯಾಗಿ ಪರಿವರ್ತನೆಗೊಂಡಿರುವ ಈ ವ್ಯಕ್ತಿಯ ಅಪರಿಪಕ್ವ ನಡವಳಿಕೆ ಇದಕ್ಕೊಂದು ಅಪವಾದವಾಗಿದೆ.


ಸಂಬಂಧಿತ ಟ್ಯಾಗ್ಗಳು

Vachanananda Spiritual God man Yoga


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ