ಮಂಗಳ ಗೌರಿ ಗಂಡನಿಗೆ ಶಿಕ್ಷೆ ಯಾವಾಗ?

Mangalagowri Maduve serial

12-12-2019

ಕಲರ್ಸ್ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿರುವ ಮಂಗಳ ಗೌರಿ ಮದುವೆ ಮಹಿಳಾ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪುಟ್ಟಗೌರಿ ಮದುವೆ ಸೀರಿಯಲ್ ನ ಎರಡನೇ ಅವತಾರವಾಗಿರುವ ಈ ಸೀರಿಯಲ್ ಪುಟ್ಟಗೌರಿ ಸೀರಿಯಲ್ ನಲ್ಲೆ ಆರಂಭವಾಗಿ ಈಗ ಸ್ವತಂತ್ರ ವಾಗಿ ನಡೆಯುತ್ತಿದೆ.

ಪುಟ್ಟಗೌರಿ ಮದುವೆ ಬಾಲ್ಯ ವಿವಾಹದ ಬಗ್ಗೆ ಇದ್ದರೂ, ಅದು ಬಾಲ್ಯ ವಿವಾಹವನ್ನು ವಿರೋಧಿಸುತ್ತದೆ ಎನ್ನುತ್ತಲೇ ಬಾಲ್ಯ ವಿವಾಹ ಎಷ್ಟೊಂದು ಪವಿತ್ರ ಎಂಬಂತೆ ಆ ಸೀರಿಯಲ್ ನನ್ನ ನಡೆಸಿಕೊಂಡು ಹೋದರು. ಸತ್ತ ವ್ಯಕ್ತಿ ಬದುಕಿ ಬರುವುದು, ಚಿತ್ರವಿಚಿತ್ರ ಸನ್ನಿವೇಶಗಳು, ಆಸಕ್ತಿ ಇಲ್ಲದ ಗಂಡನೊಂದಿಗೆ ಆತ ಪ್ರಜ್ಞೆ ತಪ್ಪಿದಾಗ ನಾಯಕಿ ಬಲವಂತವಾಗಿ ಕೂಡಿ ಆನಂತರ ಗರ್ಭವತಿಯಾಗುವುದು, ಪುರುಷ ಪೊಲೀಸರು ನಾಯಕಿಯನ್ನು ನಗರದ ಸ್ಟೇಷನ್ ನಲ್ಲಿ ಹೊಡೆಯುವುದು ಹೀಗೆ ಮೂರ್ಖತನದ ಪರಮಾವಧಿ ಎನ್ನುವಂತೆ ಆ ಸೀರಿಯಲ್ ಇದ್ದರೂ ವಿಪರೀತ ಮುಗ್ಧತೆಯೊಂದಿಗೆ ಅನೇಕ ಮಹಿಳಾ ವೀಕ್ಷಕರು ಸೀರಿಯಲ್ ಅನ್ನು ತಪ್ಪದೇ ನೋಡಿದರು.

ಒಬ್ಬ ಗಂಡನಿಗೆ ಇಬ್ಬರು ಹೆಂಡಿರು ಇರುವುದು ಸರ್ವೇ ಸಾಮಾನ್ಯ ಎಂಬ ಸತ್ಯವನ್ನು ಮಹಿಳೆಯರು ಅರಗಿಸಿ ಕೊಳ್ಳುತ್ತಿದ್ದಂತೆಯೇ ಬಾಲ್ಯವಿವಾಹ ಒಂದು ಪವಿತ್ರ ಬಂಧನ, ತಾಳಿ ಕಟ್ಟಿದಾಕ್ಷಣ ಒಬ್ಬ ಮಹಿಳೆ ತಾಳಿ ಕಟ್ಟಿದವನ ದಾಸಿ ಆಗಿ ತನ್ನ ಜೀವನದಲ್ಲಿ ಸ್ವಂತ ಬುದ್ದಿಯನ್ನು ಬಿಟ್ಟು ಬದುಕಬೇಕು ಎಂಬ ಸಿದ್ಧಾಂತವನ್ನು ಸಾರಲಾಯಿತು. ಹಾಗೂ ಹೀಗೂ ಆ ಸೀರಿಯಲ್ ಮುಗಿಯುತ್ತಿದ್ದಂತೆಯೆ ವೀಕ್ಷಕರ ಇಂಥಾ ವಿಕೃತ ವೀಕ್ಷಣಾ ಚಪಲಗಳನ್ನು ಗಮನಿಸಿದ ಚಾನಲ್ ನವರು ಇನ್ನೊಂದು ಬಾಲ್ಯವಿವಾಹದ ಕಥೆಯನ್ನುಅದರೊಳಗೆ ಆರಂಭಿಸಿ ಅದನ್ನು ಮಂಗಳಗೌರಿ ಮದುವೆ ಎಂದು ಕರೆದು ಮುಂದುವರಿಸುತ್ತಿದ್ದಾರೆ.

ಪುಟ್ಟಗೌರಿ ಮದುವೆಯಲ್ಲಿ ಮುಗ್ಧ ಹುಡುಗಿ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹವಾದಳು ಮತ್ತು ಅದಕ್ಕೆ ಸಂಪ್ರದಾಯ ಮತ್ತು ಊಳಿಗಮಾನ ಪದ್ದತಿಗಳು ಕಾರಣವಾದುವು ಎಂದರೆ, ಮಂಗಳ ಗೌರಿ ಸೀರಿಯಲ್ ನ ನಾಯಕಿ ಊರೆಲ್ಲಾ ಮಾತಾಡುವವಳಾಗಿದ್ದರೂ ಏನೋ ಮೂಢನಂಬಿಕೆ ಮತ್ತು ಜನರ ಬಲವಂತಕ್ಕೆ ಎಂಬಂತೆ ಒಬ್ಬ ಐಪಿಎಸ್ ಆಫೀಸರ್ ಕೈಯಲ್ಲಿ ತಾಳಿ ಕಟ್ಟಿಸಿಕೊಳ್ಳುತ್ತಾಳೆ.ಅಷ್ಟೇ ನೆಪ ಸಾಕು ಎಂಬಂತೆ ತಾಳಿ ಕಟ್ಟುವ ಐಪಿಎಸ್ ಆಫೀಸರ್ ಗೆ ಅಪ್ರಾಪ್ತ ವಯಸ್ಸಿನ ಹುಡುಗಿಗೆ ತಾಳಿ ಕಟ್ಟುವುದು ತಪ್ಪಲ್ಲ ಎಂದು ಗೊತ್ತೇ ಇದ್ದಂತಿಲ್ಲ. ಆತನ ಸ್ಟೇಷನ್ ನಲ್ಲಿ ಇರುವ ಪೇದೆಗಳೂ ಕೂಡ ಮೂರ್ಖ ಶಿಖಾಮಣಿಗಳಂತೆ ವಯಸ್ಕ ಮತ್ತು ಅಪ್ರಾಪ್ತೆಯ ಮದುವೆಯನ್ನು ಹಾಡಿ ಹೊಗಳುತ್ತಿರುತ್ತಾರೆ. ಅವರು ಮುದ್ದಾಡಲಿ ಎಂದು ಹಪಹಪಿಸುತ್ತಿರುತ್ತಾರೆ. ಈ ಐಪಿಎಸ್ ಅಧಿಕಾರಿ ಮನೆಯಲ್ಲೊಂದು ಬೀದಿಯಲ್ಲಿ ಇನ್ನೊಂದು ಎನ್ನುವಂತೆ ಬಹಳ ದಿನಗಳ ಕಾಲ ತಾನು ಪ್ರೀತಿಸಿದ ಇನ್ನೊಬ್ಬಳು ಹುಡುಗಿಯಿಂದ ಮಂಗಳಗೌರಿಯ ಬಗ್ಗೆ ವಿಷಯ ಮುಚ್ಚಿಟ್ಟು ಮೋಸ ಮಾಡುತ್ತಿರುತ್ತಾನೆ.

ತಾಳಿ ಕಟ್ಟಿಸಿಕೊಂಡ ಮಂಗಳ ಗೌರಿ ಬಂದು ತನ್ನ ವಯಸ್ಕ ಗಂಡನ ಮನೆಯಲ್ಲೇ ಇರುತ್ತಾಳೆ ಮಾತ್ರವಲ್ಲದೆ ಅನೇಕ ಅವಮಾನಗಳನ್ನೂ ಅನುಭವಿಸುತ್ತಾಳೆ. ಅವಳ ಮಾನವನ್ನು ಕಾಪಾಡಲು ಆಕೆಯ ಪೊಲೀಸ್ ಗಂಡ ರೌಡಿಗಳ ಮಟ್ಟಕ್ಕೂ ಇಳಿಯುತ್ತಾನೆ. ಆಕೆ ಅಪ್ರಾಪ್ತೆ ಎಂದು ಅವರ ಮಧ್ಯೆ ಲೈಂಗಿಕ ಸಂಬಂಧವಿರುವುದಿಲ್ಲವಷ್ಟೆ. ಆದರೆ ಇನ್ನೆಲ್ಲಾ ನಡೆಯುತ್ತಿರುತ್ತದೆ. ತಬ್ಬಿ ಮುದ್ದಾಡುವುದು ಒಬ್ಬರಿಗೊಬ್ಬರು ಬಿಸಿ ಏರಿಸುವುದು, ಸರಸ ಸಲ್ಲಾಪ ನಡೆಸುವುದು ಎಲ್ಲಾ ಇರುತ್ತದೆ. ಅಪ್ರಾಪ್ತೆಯೊಂದಿಗೆ ವಯಸ್ಕನ ಯಾವುದೇ ಸರಸದ ವರ್ತನೆಯೇ ಪೊಕ್ಸೋ ಕಾಯ್ದೆಯಡಿ ಬರುತ್ತದೆ ಎಂಬುದು ಆ ಪೊಲೀಸಪ್ಪನಿಗೆ ಗೊತ್ತೇ ಇಲ್ಲ!

ಈ ಐಪಿಎಸ್ ಅಧಿಕಾರಿಯ ನಡವಳಿಕೆ ನೋಡಿದರೆ ಆತ ಒಬ್ಬ ಫೇಕ್ ಐಪಿಎಸ್ ಎಂದು ಅನ್ನಿಸದೆ ಇರದು. ಇತ್ತೀಚೆಗಂತೂ ಸೀರಿಯಲ್ ನಲ್ಲಿ ಈ ಐಪಿಎಸ್ ಪೊಲೀಸಪ್ಪ ಮನೆಯಲ್ಲಿ ಅಪ್ರಾಪ್ತೆಯನ್ನುಗಂಡನ ಸೋಗಿನಲ್ಲಿ ಮುದ್ದಾಡಿ, ತನ್ನ ಸ್ಟೇಷನ್ ನಲ್ಲಿ ಕಾನೂನಿನ ಅಪರಾವತಾರದಂತೆ ಅತ್ಯಾಚಾರಿಗಳ ವಿರುದ್ಧ ಹರಿಹಾಯುತ್ತಿರುತ್ತಾನೆ. ಅಪ್ರಾಪ್ತೆಯೊಂದಿಗಿನ ಮದುವೆ ಮದುವೆಯೇ ಅಲ್ಲ ಎಂಬ ಕನಿಷ್ಠ ಪ್ರಜ್ಞೆ ಆ ಐಪಿಎಸ್ ಗಾಗಲಿ ಅಥವಾ ಆ ಸೀರಿಯಲ್ ಗೆ ಕಥೆ ಬರೆದವರಿಗಾಗಲಿ, ಚಾನಲ್ ನ ಮಾಲೀಕರಿಗಾಗಲಿ ಗೊತ್ತಿದ್ದಂತಿಲ್ಲ. ತಾನು ಜೈಲಿಗೆ ಕಳಿಸಬೇಕೆಂದಿರುವ ಪಾಪಿಗಳೊಂದಿಗೆ ಪುಟ್ಟಾಗೌರಿ ಸೀರಿಯಲ್ ನ ಐಪಿಎಸ್ ಹೀರೊ ಕೂಡ ಯಾವಾಗ ಜೈಲು ಸೇರುತ್ತಾನೆ ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ.

ಇದು ಸೀರಿಯಲ್, ಬರಿ ಒಂದು ಕಾಲ್ಪನಿಕ ಕಥೆ ಎಂದು ಸೀರಿಯಲ್ ನಿರ್ಮಾಪಕರು ಪುಂಗಿ ಬಿಡಬಹುದು. ಆದರೆ ಈ ರೀತಿ ಜನರನ್ನು ತಪ್ಪು ದಾರಿಗೆ ಎಳೆಯುವುದು ಅಪರಾಧ ಎಂದು ಅವರಿಗಲ್ಲದಿದ್ದರೂ Viacom ಕಂಪನಿಗಾದ್ರೂ ಗೊತ್ತಿರಬೇಕಲ್ಲ, ಇಲ್ಲದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದಲ್ಲ ಎಂದು ಕಾನೂನಿನ ಅರಿವಿರುವ ಜನರು ಕೇಳುತ್ತಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Colors Kannada Serial Managalagowri Maduve POCSO


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ