ಇವರು ಶಾಂತಿಯಿಂದ ಬದುಕಬೇಕೆನ್ನುವುದು ದೇವರ ಆಸೆಯಂತೆ!

Nityananada

23-11-2019

ಬೆಂಗಳೂರು: ದೇಶಬಿಟ್ಟು ವಿದೇಶಕ್ಕೆ ಹೋಗಿಲ್ಲ ಶಾಂತಿಯಿಂದ, ನೆಮ್ಮದಿಯಿಂದ ಬದುಕಲು ನನಗೆ ಸ್ವಲ್ಪ ಸ್ಥಳಬೇಕು, ಅದಕ್ಕಾಗಿ ಹಿಮಾಲಯದಲ್ಲಿದ್ದೇನೆ ಎಂದು ಬಂಧನದ ಭೀತಿಯಲ್ಲಿರುವ ಬಿಡದಿಯ ನಿತ್ಯಾನಂದ ಆಶ್ರಮದ ಸ್ವಾಮಿ ನಿತ್ಯಾನಂದ ಅವರು ಸ್ಪಷ್ಟಪಡಿಸಿದ್ದಾರೆ.
ಜಗತ್ತಿನಲ್ಲಿ ನಾನು ಜೀವಂತವಾಗಿ ಬದುಕಬೇಕು, ನನ್ನ ಉಸಿರು ಇರಬೇಕು ಎಂದು ದೇವರುಗಳಾದ ಪರಮಶಿವ, ಮಹಾಕಾಳಿ, ಕಾಲಭೈರವೇಶ್ವರರ ಇಚ್ಛೆಯಾಗಿದೆ. ದೇವರುಗಳಿಗೆ ನಾನು ಈ ಭೂಮಿಯಲ್ಲಿ ಬದುಕಬೇಕು ಎಂಬ ಬಯಕೆಯೂ ಇದೆ, ದೇವರುಗಳ ಆಶಯದಂತೆ ನಾನು ಈ ಲೋಕದಲ್ಲಿ ಇರುತ್ತೇನೆ ಎಂದಿದ್ದಾರೆ.
ದೇಶ ಬಿಟ್ಟು ಓಡಿ ಹೋಗಿದ್ದೇನೆ ಎಂಬ ವರದಿಗಳನ್ನು ವೀಡಿಯೊ ಸಂದೇಶದಲ್ಲಿ ಅಲ್ಲಗಳೆದಿರುವ ಸ್ವಾಮಿ ನಿತ್ಯಾನಂದ,ಈ ದೇಶದಲ್ಲಿ ನ್ಯಾಯ ಸಿಗುವುದು ತಡವಾಗುತ್ತದೆ. ನ್ಯಾಯಕ್ಕೂ ಖರ್ಚು ಮಾಡಬೇಕು ಎಂದು ನಿತ್ಯಾನಂದ ದೂರಿದ್ದಾರೆ.
ಹಿಂದೂ ಧರ್ಮದ ವಿರೋಧಿಗಳು ಹಾಗೂ ದೇಶ ವಿರೋಧಿ ಶಕ್ತಿಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ನಾನು ನನ್ನ ಆಶ್ರಮದಲ್ಲಿ ಧರ್ಮಪ್ರವಚನ, ಧರ್ಮ ಬೋಧನೆ ಬಿಟ್ಟರೆ ಬೇರೆ ಚಟುವಟಿಕೆ ಮಾಡುವುದಿಲ್ಲ, ಮಕ್ಕಳಿಗಾಗಲಿ, ನನ್ನ ಶಿಷ್ಯರಿಂದಾಗಲಿ ಯಾವುದೇ ತೊಂದರೆ ನೀಡಿಲ್ಲ ಎಂದು ಹೇಳಿರುವ ಅವರು ಕೆಲವು ವರದಿಗೆ ಕಪೋಲಕಲ್ಪಿತ ಎಂದು ನಿತ್ಯಾನಂದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಭಕ್ತರ ಸಂಪರ್ಕ

ಪ್ರತಿದಿನ ಬೆಳಿಗ್ಗೆ ಸತ್ಸಂಗದ ಮೂಲಕ ನನ್ನ ಭಕ್ತರ ಸಂಪರ್ಕದಲ್ಲಿರುತ್ತೇನೆ, ಸತ್ಸಂಗದ ನಂತರ ನಾನು ಯಾವುದೇ ಶಿಷ್ಯರ ಜತೆ ಪ್ರತ್ಯೇಕ ಆಲೋಚನೆ, ಮಾತು ಇರುವುದಿಲ್ಲ ಎಂದು ನಿತ್ಯಾನಂದ ಹೇಳಿ ತಮ್ಮ ಆಶ್ರಮದಲ್ಲಿ ಮಕ್ಕಳಿಗೆ ಹಿಂಸೆ ನೀಡಲಾಗುತ್ತಿದೆ ಎಂಬುದನ್ನು ತಳ್ಳಿ ಹಾಕಿದ್ದಾರೆ.
ಕೆಲ ಹಿಂದೂ ಧರ್ಮ ವಿರೋಧಿಗಳು ನನ್ನ ಶಿಷ್ಯರಿಗೆ ತೊಂದರೆ ಕೊಡುತ್ತಿದ್ದಾರೆ. ನಾನಂತೂ ಯಾರಿಗೂ ತೊಂದರೆ ಕೊಟ್ಟಿಲ್ಲ, ಯಾರನ್ನೂ ಬಲವಂತವಾಗಿ ನನ್ನ ಆಶ್ರಮದಲ್ಲಿ ಇರಿಸಿಕೊಂಡಿಲ್ಲ. ಎಲ್ಲ ಶಿವನಿಚ್ಚೆಯಂತೆ ನಡೆಯುತ್ತಿದೆ. ಸತ್ಯ ಸದ್ಯದಲ್ಲೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ವೇದಾಂತಿಯಂತೆ ನಿತ್ಯಾನಂದ ಮಾತನಾಡಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರು ಮೂಲದ ಪೋಷಕರು ನಿತ್ಯಾನಂದಸ್ವಾಮಿ ತಮ್ಮ ಮಕ್ಕಳನ್ನು ಗುಜರಾತ್‌ನ ಆಶ್ರಮದಲ್ಲಿ ಬಲವಂತವಾಗಿ ಆಶ್ರಮದಲ್ಲಿರಿಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಗುಜರಾತ್‌ನ ಗಾಂಧಿ ನಗರದಲ್ಲಿರುವ ನಿತ್ಯಾನಂದನ ಆಶ್ರಮದ ಮೇಲೆ ದಾಳಿ ನಡೆಸಿ ಆತನ ಇಬ್ಬರು ಶಿಷ್ಯರನ್ನು ಬಂಧಿಸಿದ್ದರು. ಈ ಘಟನೆಯ ಬಳಿಕ ನಿತ್ಯಾನಂದ ನಾಪತ್ತೆಯಾಗಿದ್ದ, ಈತ ವಿದೇಶಕ್ಕೆ ಪರಾರಿಯಾಗಿರುವ ಮಾತುಗಳು ಕೇಳಿ ಬಂದಿದ್ದವು.
ಬಂಧನಕ್ಕೆ ಕ್ರಮ
ಈ ನಡುವೆ ಸ್ವಯಂಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದ ದೇಶ ತೊರೆದಿದ್ದಾನೆ. ಅಗತ್ಯ ಬಿದ್ದಲಿ ಸೂಕ್ತ ಕಾನೂನು ಕ್ರಮಗಳ ಮೂಲಕ ಆತನನ್ನು ವಶಕ್ಕೆ ಪಡೆಯಲಾಗುವುದು, ಈ ಸಂಬಂಧ ವಿದೇಶಾಂಗ ಸಚಿವಾಲಯದ ಜತೆ ಸಂಪರ್ಕದಲ್ಲಿರುವುದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ಆತ ದೇಶ ತೊರೆದಿದ್ದಾನೆ. ನಿತ್ಯಾನಂದನನ್ನು ಇಲ್ಲಿ ಹುಡುಕುವುದು ಸಮಯ ವ್ಯರ್ಥಮಾಡಿದಂತೆ ಎಂದು ಅಹಮದಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ. ಅನಾರಿ ಹೇಳಿದ್ದಾರೆ.
ಮಕ್ಕಳನ್ನು ಅಪಹರಿಸಿ ಅಕ್ರಮವಾಗಿ ವಶಲ್ಲಿರಿಸಿಕೊಂಡ ಆರೋಪದ ಮೇಲೆ ಕಳೆದ ಬುಧವಾರವಷ್ಟೆ ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ನಿತ್ಯಾನಂದನ ಇಬ್ಬರು ಶಿಷ್ಯೆಯಂದಿರನ್ನು ಬಂಧಿಸಿದ್ದರು.
ಅಕ್ರಮ ಚಟುವಟಿಕೆ
ಈ ಪ್ರಕರಣದ ಬೆನ್ನು ಹತ್ತಿದ ಗುಜರಾತ್ ಪೊಲೀಸರು, ಆತನ ಬಂಧನಕ್ಕೆ ಬಲೆ ಬೀಸಿದ್ದು, ವಿದೇಶಕ್ಕೆ ಪರಾರಿಯಾಗಿರುವ ನಿತ್ಯಾನಂದನನ್ನು ವಶಕ್ಕೆ ಪಡೆಯಲು ವಿದೇಶಾಂಗ ಸಚಿವಾಲಯದ ಜತೆ ಗುಜರಾತ್ ಪೊಲೀಸರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಸ್ವಾಮಿ ನಿತ್ಯಾನಂದನ ಆಶ್ರಮದಲ್ಲಿ ಅಕ್ರಮ ಚಟುವಟಿಕೆಗಳು ನಡೆದಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕರಿ ಆರ್.ವಿ ಅನಾರಿ ಹೇಳಿದರು.
ಆಶ್ರಮದಲ್ಲಿ ಚಿಕ್ಕ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡಿರುವ ಬಗ್ಗೆ, ಮತ್ತು ಆಶ್ರಮಕ್ಕಾಗಿ ಸಂಗ್ರಹಿಸಿರುವ ದೇಣಿಗೆ ಎಲ್ಲದ್ದರ ಬಗ್ಗೆಯೂ ತನಿಖೆ ನಡೆದಿದೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Nityananda God man Bidadi Himalaya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ