ಬಿಎಸ್ ವೈ ಬದಲಾಯಿಸಿದರೆ ಸಿ.ಟಿ ರವಿ ಸಿಎಂ?

C T Ravi and B S Yediyurappa

18-11-2019

ನಾಲ್ಕು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಯಡಿಯೂರಪ್ಪ ಓಡಾಡುತ್ತಿದ್ದರೂ ಅತೃಪ್ತರನ್ನು ಬಿಜೆಪಿಗೆ ಸೇರಿಸಿಕೊಂಡ ಮೇಲೆ ಅವರನ್ನು ಗೆಲ್ಲಿಸುವ ಸಾಧ್ಯತೆ ಇದೆಯೇ? ಇಲ್ಲವೇ? ಎಂಬ ಬಗ್ಗೆ ಒಂದಿಷ್ಟು ಚಿಂತೆಯಿಲ್ಲದಂತೆ ಮಾತನಾಡುವ ಬಿಎಸ್ ವೈ, ತನ್ನ ಸ್ಥಾನಕ್ಕೆ ಯಾವುದೇ ರೀತಿಯಲ್ಲಿ ಕುತ್ತು ಬರುವುದಿಲ್ಲ, ಹಾಗೆ ಬಂದರೂ ಅದನ್ನು ಹೇಗಾದರೂ ನಿಭಾಯಿಸಿ, ತಾವೇ ಮುಖ್ಯಮಂತ್ರಿಯಾಗಿ ಮುಂದುವರೆಯುವ ದೃಢ ನಿರ್ಧಾರವನ್ನು ಮಾಡಿದಂತಿದೆ.

ಆದರೆ ಬಿಜೆಪಿಯೊಳಗೆ ಆರ್ ಎಸ್ ಎಸ್ ಪ್ರೇರಣೆಯೊಂದಿಗೆ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿರುವುದು ಇವರ ಗಮನಕ್ಕೆ ಹೇಗೆ ಬಾರದೇ ಇದೆಯೋ.. ಅಥವಾ ಬಂದರೂ ಅದರ ಬಗ್ಗೆ ಅವರು ಏಕೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿಬಿಟ್ಟಿದೆ. ಒಂದೆಡೆ, ಬಿಎಸ್ ವೈ ಅವರು ವಯೋಸಹಜ ಸಮಸ್ಯೆಗಳ ಕಾರಣದಿಂದಾಗಿ ಆಡಳಿತ ನಡೆಸಲು ಸಾಧ್ಯವಾಗದೇ ಸುಸ್ತಾಗಿಬಿಟ್ಟಿದ್ದಾರೆ, ಅವರಿಗೆ ಮರೆವು ಜಾಸ್ತಿಯಾಗಿದೆ. ಅವರಿಗೆ ಏಕಾಗ್ರತೆಯ ಕೊರತೆ ಇದೆ, ಅವರಿಗೆ ಆಡಳಿತ ನಡೆಸಲು ಸಾಮರ್ಥ್ಯ ಇಲ್ಲ... ಈ ಕಾರಣಗಳಿಂದಾಗಿ ಅವರೇ ಸ್ಥಾನವನ್ನು ತ್ಯಜಿಸಿ ರಾಜ್ಯಪಾಲ ಹುದ್ದೆಗೆ ವರ್ಗಾವಣೆಗೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದರೆ, ಇನ್ನೊಂದೆಡೆ ಅವರ ಜಾತಿಮೋಹ, ಅಧಿಕಾರ ಮೋಹ ಮತ್ತು ಹಣದ ಮೋಹದ ಕಾರಣದಿಂದಾಗಿ ಬಿಜೆಪಿ ಹೆಸರು ಹಾಳಾಗುತ್ತಿದೆ, ಹೇಗಾದರೂ ಮಾಡಿ ಅವರನ್ನು ಕೆಳಗಿಳಿಸಿ ಬಿಜೆಪಿ ಮಾನವನ್ನು ಕಾಪಾಡಬೇಕು ಎಂಬ ಸಬೂಬಿನೊಂದಿಗೆ ಅವರನ್ನು ಕೆಳಗಿಳಿಸುವ ಪ್ರಯತ್ನ ಬಿಜೆಪಿಯಲ್ಲಿ ಎಗ್ಗಿಲ್ಲದೇ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ. ಅವರ ಮಗ ಕೇಂದ್ರದ ಮಂತ್ರಿ ಅಥವಾ ಕರ್ನಾಟಕದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ. ಆರ್ ಎಸ್ ಎಸ್ ಗೆ ನಿಷ್ಠರಾದ ಒಬ್ಬರನ್ನು ಸಿಎಂ ಆಗಿ ಮಾಡಲಾಗುತ್ತದೆ. ಯಡಿಯೂರಪ್ಪನವರು ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಗುಸುಗುಸುಗಳ ಹಿಂದೆ ಆರ್ ಎಸ್ ಎಸ್ ಕೈವಾಡವೂ ಇದ್ದಂತೆ ಕಂಡುಬಂದರೆ ಆಶ್ಚರ್ಯವಿಲ್ಲ.

ಆದರೆ ಇಲ್ಲಿ ನಿಜವಾಗಿಯೂ ಆಶ್ಚರ್ಯಕರ ವಿಷಯವೆಂದರೆ ಬಿಎಸ್ ವೈ ನಿರ್ಗಮಿಸಿದರೆ ಅವರ ಸ್ಥಾನಕ್ಕೆ ಆಗಮಿಸುವುದು ಭಜರಂಗದಳದ ಮಾಜಿ ನಾಯಕ, ಹಾಲಿ ಶಾಸಕ ಮತ್ತು ಬಿಜೆಪಿ ಮಂತ್ರಿ ಸಿ.ಟಿ ರವಿ ಎನ್ನುವ ಊಹೆ. ಮಂತ್ರಿಗಿರಿ ಕೊಟ್ಟಾಗಲೂ ರಾಜಕೀಯವಾಗಿ ಪ್ರಯೋಜನಕ್ಕಿಲ್ಲದ ಖಾತೆಗಳನ್ನು ಪಡೆದ ಸಿ.ಟಿ.ರವಿ ಗೆ ಮುಖ್ಯಮಂತ್ರಿ ಸ್ಥಾನ ಹೇಗೆ ಕೊಡುತ್ತಾರೋ ಗೊತ್ತಿಲ್ಲ. ಆದರೆ ಸಿ.ಟಿ.ರವಿ ಅವರನ್ನು ಬಿಎಸ್ ವೈ ಪ್ರತಿಸ್ಪರ್ಧಿ ಎಂಬಂತೆ ಬಿಂಬಿಸಿ, ಸಿ.ಟಿ.ರವಿ ಬಗ್ಗೆ ಯಡಿಯೂರಪ್ಪ ಅವರ ದ್ವೇಷ ಹೆಚ್ಚು ಮಾಡಿ, ಸಿ.ಟಿ.ರವಿ ಅವರನ್ನು ರಾಜಕೀಯವಾಗಿ ಮುಗಿಸುವ ಮೊದಲ ಭಾಗವೇ ಇದು ಎನ್ನುವ ಅನುಮಾನ ದಟ್ಟವಾಗಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Cm C.T.Ravi RSS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ