ಪ್ರವಾಹ ಪೀಡಿತ ಸ್ಥಳಗಳಿಗೆ ಜನಪ್ರತಿನಿಧಿಗಳ ದೌಡು

Karnataka Flood

22-10-2019

ಬೆಂಗಳೂರು: ರಾಜ್ಯದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪುನ: ವರುಣನ ರುದ್ರನರ್ತನ ಆರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಮಂತ್ರಿಗಳು ಪ್ರವಾಹಪೀಡಿತ ಪ್ರದೇಶಗಳಿಗೆ ಬುಧವಾರ ದೌಡಾಯಿಸಲಿದ್ದಾರೆ.

ಪುನ: ಇದ್ದಕ್ಕಿದ್ದಂತೆ ಶುರುವಾಗಿರುವ ಮಳೆಯ ರಭಸ ಭೀಕರವಾಗಿದ್ದು ಪುನ: ಲಕ್ಷಕ್ಕೂ ಹೆಚ್ಚು ಜನ ಬೀದಿಗೆ ಬಿದ್ದಿದ್ದು ಪರಿಹಾರ ಕಾರ್ಯಕ್ಕಾಗಿ ಸರ್ಕಾರ ತಡಕಾಡುವ ಸ್ಥಿತಿ ನಿರ್ಮಾಣವಾಗಿದೆ.ಬಿಜಾಪುರ, ಬಾಗಲಕೋಟೆ, ಬೆಳಗಾಂ, ಹಾವೇರಿ, ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದ್ದು ತಕ್ಷಣದ ಪರಿಹಾರ ಕ್ರಮಗಳಿಗೆ ಗಮನ ನೀಡುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ:ಮಳೆಯ ಬಿರುಸಿಗೆ ರಾಜ್ಯದ ಬಹುತೇಕ ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.ಅದನ್ನು ಖುದ್ದಾಗಿ ವೀಕ್ಷಿಸಿ ಪರಿಹಾರ ಕಾರ್ಯಕ್ಕೆ ಬಿರುಸು ನೀಡಲು ಸಂಪುಟದ ಎಲ್ಲ ಸಚಿವರು ಪ್ರತ್ಯೇಕ ತಂಡಗಳಲ್ಲಿ ರಚಿಸಿಕೊಂಡು ದೌಡಾಯಿಸಲಿದ್ದಾರೆ ಎಂದರು.

ರಾಜ್ಯದ ಶಾಲಾ ಮಕ್ಕಳಿಗೆ ಇನ್ನೊಂದು ಜತೆ ಸಮವಸ್ತ್ರವನ್ನು ನೀಡಲು ಇಂದಿನ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಅವರು,ಈ ಹಿಂದೆ ಶಾಲಾ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ನೀಡಲಾಗಿತ್ತು.ಆದರೆ ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಇನ್ನೊಂದು ಜತೆ ಸಮವಸ್ತ್ರ ನೀಡುವಂತೆ ಸೂಚಿಸಿದೆ ಎಂದರು.

ರಾಜಧಾನಿ ಬೆಂಗಳೂರಿನ ಮಹಿಳೆಯರ  ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ನೆರವಿನ 667 ಕೋಟಿ ರೂಪಾಯಿಗಳ 24*7 ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು ಇದರಲ್ಲಿ ಕೇಂದ್ರ ಸರ್ಕಾರ ಶೇಕಡಾ ಅರವತ್ತರಷ್ಟು ಅನುದಾನವನ್ನು ನೀಡಲಿದೆ.ರಾಜ್ಯ ಸರ್ಕಾರ ಶೇಕಡಾ ನಲವತ್ತರಷ್ಟು ಅನುದಾನವನ್ನು ಒದಗಿಸಲಿದೆ ಎಂದರು.

ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ರಾಜಧಾನಿಯಾದ್ಯಂತ ಸುರಕ್ಷಿತ ದೀಪಗಳು,ಸಿಸಿ  ಟಿವಿ ಕ್ಯಾಮೆರಾಗಳು,ಅಪಾಯದ ಸಂಕೇತಗಳನ್ನು ನೀಡುವ ಉಪಕರಣಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ  ಎಂದು ವಿವರಿಸಿದರು.

ರಾಜ್ಯದ ಪಟ್ಟಣಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಹತ್ತು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದ ಅವರು,ಅಭಿವೃದ್ಧಿ ಕಾರ್ಯಗಳಿಗಾಗಿ 400 ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆಯಲು ಕೃಷಿ ಇಲಾಖೆಗೆ ಖಾತರಿ ನೀಡಲಾಗಿದೆ ಎಂದರು.

 

ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಹದಿನೈದು ಕೋಟಿ ರೂಪಾಯಿ ಸಾಲ ಪಡೆಯಲು ಅನುಮತಿ ನೀಡಲಾಗಿದೆ.ಹಾಗೆಯೇ ಕೃಷಿ ಸಹಕಾರ ಮಹಾಮಂಡಳದಲ್ಲಿರುವ ಐನೂರು ರೂ ಷೇರು ಬಂಡವಾಳವನ್ನು 50 ಕೋಟಿ ರೂಗಳಷ್ಟು ಹೆಚ್ಚಳ ಮಾಡಲು ಒಪ್ಪಿಗೆ ಸೂಚಿಸಲಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೆಟ್ರಿಕ್ ಪೂರ್ವ ಶಾಲೆಗಳು,ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಮೈಸೂರು ಸ್ಯಾಂಡಲ್ ಸೋಪು,ಪೌಡರು,ಟೂಥ್ ಪೇಸ್ಟು,ಕೊಬ್ಬರಿ ಎಣ್ಣೆ ಒದಗಿಸಲು 16.2 ಕೋಟಿ ರೂಪಾಯಿ ಒದಗಿಸಲು ತೀರ್ಮಾನಿಸಲಾಗಿದೆ.

ಕೆ.ಆರ್.ಪೇಟೆ,ಹುಣಸೂರು,ಕೆ.ಆರ್.ಪುರಂ ಸೇರಿದಂತೆ ರಾಜ್ಯದ ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್ 11 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ನಗರಗಳೇ ನೀತಿ ಸಂಹಿತೆಯ ವ್ಯಾಪ್ತಿಗೆ ಬಂದರೆ,ಗ್ರಾಮೀಣ ಪ್ರದೇಶವನ್ನು ಮುಖ್ಯವಾಗಿ ಹೊಂದಿರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳೇ ನೀತಿ ಸಂಹಿತೆಯ ವ್ಯಾಪ್ತಿಗೆ ಬರುತ್ತವೆ ಎಂದು ಹೇಳಿದರು.

ಕಾನೂನು ಇಲಾಖೆ ಒಂದು ನಿಯಮವನ್ನು ರೂಪಿಸಿದರೆ ಇಂಗ್ಲೀಷ್ ನಲ್ಲಿ ಬಳಕೆ ಮಾಡಲು ರಾಜ್ಯಪಾಲರು ಅನುಮತಿ ನೀಡಬೇಕಿತ್ತು.ಹಾಗೆಯೇ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿದರೂ ರಾಜ್ಯಪಾಲರ ಅನುಮತಿ ಪಡೆಯಬೇಕಿತ್ತು.ಆದರೆ ಇನ್ನು ಮುಂದೆ ಕನ್ನಡದಿಂದ ಇಂಗ್ಲೀಷ್‍ಗೆ ಮತ್ತು ಇಂಗ್ಲೀಷ್‍ನಿಂದ ಕನ್ನಡಕ್ಕೆ ತರ್ಜುಮೆ ಮಾಡಲು ಅನುಮತಿ ಪಡೆಯಬೇಕಿಲ್ಲ.ಇದಕ್ಕಾಗಿ ಸಂಬಂಧಪಟ್ಟ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು.

ದಾವಣಗೆರೆ ಜಿಲ್ಲೆ ಹೊನ್ನಾಗಿ ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಉಪವಿಭಾಗವನ್ನು ಸೃಷ್ಟಿಸಲು ಒಪ್ಪಿಗೆ ನೀಡಲಾಗಿದೆ.ಚಿತ್ರದುರ್ಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ 25 ಕೋಟಿ ರೂಪಾಯಿ ನೀಡಲಾಗಿದೆ ಎಂದು ವಿವರಿಸಿದರು.

ಈ ಹಿಂದೆ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಪಡೆದಿದ್ದ ಐನೂರು ಕೋಟಿ ರೂಪಾಯಿಗಳ ಸಾಲವನ್ನು ಈಗ ಬಡ್ಡಿ ಸಮೇತ ಪಾವತಿಸಬೇಕಿದ್ದು ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಗಳ ಹೊಸ ಸಾಲ ಪಡೆಯಲು ಸಂಬಂಧಪಟ್ಟ ಇಲಾಖೆಗೆ ಗ್ಯಾರಂಟಿ ನೀಡಲಾಗಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Rain Flood BS Yediyurappa Government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ