ಖತರ್ನಾಕ್ ಸಾಫ್ಟ್ವೇರ್ ಇಂಜಿನಿಯರ್ ಅಂದರ್

Engineer Arrest

18-10-2019

ಬೆಂಗಳೂರು: ಇನ್ಸ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ತನ್ನ ಸಹೋದ್ಯೋಗಿ ಸ್ನೇಹಿತೆಯ ಫೋಟೋಗೆ ಅನ್ಯವ್ಯಕ್ತಿಯೊಂದಿಗೆ ಸಂಬಂಧ ಕಲ್ಪಿಸುವ ಬರಹಗಳನ್ನು ಹಾಕಿ ಕಿರುಕುಳ ನೀಡುತ್ತಿದ್ದ ಖತರ್ನಾಕ್ ಸಾಫ್ಟ್‌ವೇರ್ ಇಂಜಿನಿಯರ್‌ರೊಬ್ಬ ಸಿಸಿಬಿ ಸೈಬರ್ ಕ್ರೈಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಮಾಡಬಾರದ ಕೆಲಸಕ್ಕೆ ಕೈಹಾಕಿದ್ದ ಬೆಳ್ಳಂದೂರಿನ ಯಮಲೂರಿನ ನಿತಿನ್ ಆಚಾರಿ (೨೫)ಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕೊಂಡಕುಳಿ ಮೂಲದ ಆರೋಪಿಯು ಬೆಳ್ಳಂದೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಸೀನಿಯರ್ ಆಗಿದ್ದನು.ಕಂಪನಿಗೆ ಹೊಸದಾಗಿ ಸೇರಿದ್ದ ಕಿರಿಯವಳಾದ ಯುವತಿಯ ಜೊತೆ ಪರಿಚಯವಾಗಿ ನಂತರ, ಸ್ನೇಹಕ್ಕೆ ತಿರುಗಿತ್ತು.ವೈಯಕ್ತಿಕ ಕಾರಣಗಳಿಂದ ಯುವತಿಯು ಆ ಕಂಪನಿ ತೊರೆದು, ಬೇರೊಂದು ಕಂಪನಿಗೆ ಸೇರಿಕೊಂಡಿದ್ದಳು.
ಈ ವೇಳೆ ಹೊಸದಾಗಿ ಸೇರಿದ ಕಂಪನಿಯ ಸಹೋದ್ಯೋಗಿಗಳೊಂದಿಗೆ ಇರುವ ಕ್ಷಣಗಳನ್ನು ನೋಡಿ ಸಹಿಸದ ಆರೋಪಿ ನಿತಿನ್ ಆಚಾರಿ, ಆಕ್ರೋಶಗೊಂಡು ಅನ್ಯವ್ಯಕ್ತಿಯ ಹೆಸರಲ್ಲಿ ಜಿ ಮೇಲ್ ಐಡಿ ಸೃಷ್ಟಿಸಿ ಅದನ್ನು ಬಳಸಿಕೊಂಡು ಇನ್ಸ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದು ಹಂತಹಂತವಾಗಿ ಖಾತೆಯ ಹೆಸರನ್ನು ಬದಲಾಯಿಸಿಕೊಂಡು ಯುವತಿಯ ಭಾವಚಿತ್ರಗಳನ್ನು ಇನ್ಸ್‌ಸ್ಟಾಗ್ರಾಂ ಖಾತೆಯಿಂದ ಡೌನ್ ಲೋಡ್ ಮಾಡಿಕೊಂಡು ತಾನು ಸೃಷ್ಟಿಸಿದ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡುತ್ತ, ಯುವತಿಗೆ ಕಿರಿಕಿರಿ ಮಾಡುತ್ತ ಅನ್ಯ ವ್ಯಕ್ತಿಯ ಜೊತೆ ಸಂಬಂಧ ಕಲ್ಪಿಸುವಂತೆಹ ಬರಹಗಳನ್ನು ಹಾಕುತ್ತಿದ್ದ.ಈ ಸಂಬಂಧ ಪ್ರಕರಣ ದಾಖಲಿಸಿದ ಸೈಬರ್ ಕ್ರೈಂ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಫೋಟೋಗಳು, ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ವೇಳೆ, ಇತರರು ಡೌನ್ ಲೋಡ್ ಮಾಡಲಾಗದಂತೆ, ಸುರಕ್ಷಾ ಸೆಟ್ಟಿಂಗ್‌ಗಳನ್ನು ಅಳವಡಿಸಿಕೊಂಡು ತಮ್ಮ ಖಾಸಗಿ ಮಾಹಿತಿ ದುರುಪಯೋಗವಾಗದಂತೆ ತಡೆಯಲು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Software Engineer Arrest Instagram


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ