ಕೈ ಪಾಳಯದಲ್ಲಿ ‘ಐಟಿ’ ಆತಂಕ!

IT Department

17-10-2019

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಡಿಕೆಶಿ ಹಾಗೂ ಪರಮೇಶ್ವರ್ ಅವರ ವಿರುದ್ಧ ಐಟಿ ದಾಳಿ ನಡೆದ ನಂತರ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ದಿಗಿಲು ಶುರುವಾಗಿದ್ದು ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧ ಐಟಿ ಮುಗಿಬೀಳಬಹುದು ಎಂದು ಕೈ ಪಾಳೆಯದ ಹಲ ನಾಯಕರಲ್ಲಿ ಆತಂಕ ಶುರುವಾಗಿದೆ.

ಈ ಹಿಂದೆ ವಿವಿಧ ಸರ್ಕಾರಗಳಲ್ಲಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದವರು, ಪ್ರಮುಖ ಖಾತೆಗಳನ್ನು ಹೊಂದಿದವರು, ಅಧಿಕಾರದ ನಡುಮನೆಯಲ್ಲಿ ಪ್ರಭಾವಿಗಳಾಗಿದ್ದ ಅನೇಕರ ಮೇಲೆ ಐಟಿ ಕಣ್ಣಿಟ್ಟಿದ್ದು ಅದರ ಕಣ್ಣಿಗೆ ತಾವೂ ಬಿದ್ದಿರಬಹುದು ಎಂದು ಕಾಂಗ್ರೆಸ್‍ನ ಹಲವು ನಾಯಕರು ಗಾಬರಿಗೊಂಡಿದ್ದಾರೆ.

ಕೆಲ ನಾಯಕರಿಗೆ ಈಗಾಗಲೇ ಐಟಿ ನೋಟೀಸುಗಳು ತಲುಪಿದ್ದು ಇಂತಿಂತಹ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೀವು ಆದಾಯ ತೆರಿಗೆ ಘೋಷಣೆ ಪತ್ರದಲ್ಲಿ ಏನನ್ನೂ ಹೇಳಿಲ್ಲ. ಯಾವ ಕಾರಣಕ್ಕಾಗಿ ಈ ಕುರಿತು ಮಾಹಿತಿ ನೀಡಿಲ್ಲ? ಇದರ ವಹಿವಾಟಿನ ವಿವರಗಳ ಬಗ್ಗೆ ನಿಮ್ಮ ಬಳಿ ಇರುವ ದಾಖಲೆಗಳನ್ನು ಒದಗಿಸಿ ಎಂದು ಐಟಿ ಇಲಾಖೆ ಹೇಳಿದೆ ಎನ್ನಲಾಗಿದೆ.

ದಾಖಲೆಗಳ ಸಮೇತ ಐಟಿ ತಮಗೆ ನೀಡಿರುವ ನೋಟೀಸುಗಳಿಗೆ ಉತ್ತರಿಸುವುದು ಹೇಗೆ? ಎಂಬ ಚಿಂತೆಯಲ್ಲಿರುವ ಹಲ ನಾಯಕರಿಗೆ ಐಟಿ ಕುಣಿಕೆಯಿಂದ ಬಚಾವಾಗುವುದು ಹೇಗೆ? ಅನ್ನುವುದೇ ಚಿಂತೆಯಾಗಿದೆ.

ಇದೇ ಮೂಲಗಳ ಪ್ರಕಾರ ಹಿಂದೆ ರಾಜಧಾನಿ ಬೆಂಗಳೂರಿನ ಕೆ.ಆರ್.ಪುರಂ ಸೇತುವೆ ಬಳಿ ಎರಡು ಟ್ರಕ್ ಭರ್ತಿ ಹೊಸ ನೋಟುಗಳು ಸಿಕ್ಕ ಪ್ರಕರಣ ಅದು ಹೇಗೋ? ಮುಚ್ಚಿ ಹೋಗಿತ್ತು. ಪ್ರತ್ಯಕ್ಷದರ್ಶಿಗಳು ಇದ್ದರೂ ಅಂತಹ ಘಟನೆ ನಡೆದೇ ಇಲ್ಲ ಎಂದು ತಿಪ್ಪೆ ಸಾರಿಸಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಐಟಿ ಇಲಾಖೆ ಹಲವರ ಬಳಿ ಮಾಹಿತಿ ಸಂಗ್ರಹಿಸಿ ಅದರ ಒಳಸುಳಿಗಳನ್ನು ಬಿಡಿಸತೊಡಗಿದ್ದು ಆ ಪ್ರಕರಣ ಹಲವರ ಪಾಲಿಗೆ ಉರುಳಾಗುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ.

ಐವತ್ತು ಕೋಟಿ ರೂಗೂ ಮೀರಿದ ಹಣದ ವಹಿವಾಟು ಮಾಡಿರುವ ಪ್ರಕರಣಗಳು, ಆ ಕುರಿತು ನಿಯಮ ಪಾಲನೆಯಾಗಿಲ್ಲ ಎಂಬ ಮಾಹಿತಿ ಆಧಾರದ ಮೇಲೆ ಐಟಿ ಕೈ ಪಾಳೆಯದ ಹಲವು ನಾಯಕರ ಮೇಲೆ ಕಣ್ಣಿಟ್ಟಿದ್ದು ಈ ಅಂಶ ಸಹಜವಾಗಿಯೇ ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.

ಈಗಾಗಲೇ ಐಟಿ ಕೈಗೆ ಸಿಕ್ಕಿ ಬಿದ್ದಿರುವ ನಾಯಕರೊಬ್ಬರ ಜತೆ ವಹಿವಾಟು ನಡೆಸಿದ ರಾಜ್ಯಸಭಾ ಸದಸ್ಯರೊಬ್ಬರ ಬಗ್ಗೆ ಐಟಿ ತನಿಖೆ ಆರಂಭಿಸಿದ್ದು ಗಾಬರಿಗೊಂಡಿರುವ ಸದರಿ ರಾಜ್ಯಸಭಾ ಸದಸ್ಯರು ತಮ್ಮನ್ನು ಹೇಗಾದರೂ ಬಚಾವು ಮಾಡಿ ಎಂದು ಪ್ರಭಾವಿಗಳ ಮೊರೆ ಹೋಗಿದ್ದಾರೆ.

ದಿಲ್ಲಿ ಮಟ್ಟದಲ್ಲೇ ಪ್ರಭಾವಿಗಳಾಗಿರುವ ಕಾಂಗ್ರೆಸ್ ನಾಯಕರ ಮೇಲೆ ಕಣ್ಣಿಟ್ಟಿರುವ ಐಟಿ ರಾಜ್ಯದ ಹಲ ಕಾಂಗ್ರೆಸ್ ನಾಯಕರ ಮೇಲೂ ಕಣ್ಣಿಟ್ಟಿದ್ದು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಬಿದ್ದವರು ಮತ್ತೊಂದು ಪಕ್ಷದ ಮೇಲೆಕೆ ಧಾಳಿ ಮಾಡುತ್ತಿಲ್ಲ ಎಂದು ಅಬ್ಬರಿಸಿ,ಬೊಬ್ಬಿರಿದರೆ ಏನೂ ಪ್ರಯೋಜನವಿಲ್ಲ ಎಂದು ಅದಾಗಲೇ ಸಿಗ್ನಲ್ ರವಾನಿಸಿದೆ.

ಐಟಿ ತನಿಖೆಯಲ್ಲಿ ಬಯಲಿಗೆ ಬಂದವರು ಯಾವುದೋ ಒಂದು ಪಕ್ಷದವರು ಎಂಬುದು ತಪ್ಪು. ಬದಲಿಗೆ ಹಲ ಪಕ್ಷಗಳ ನಾಯಕರ ವಿರುದ್ಧ ಐಟಿ ಧಾಳಿ ನಡೆದಿದೆ.ನಡೆಯುತ್ತದೆ.ಹೀಗಾಗಿ ವಿಷಯವನ್ನು ಮರೆ ಮಾಚಲು ರಾಜಕೀಯ ಬೆರೆಸಲು ಹೋದರೆ ಆ ಕುರಿತು ಗಮನ ಹರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದೆ ಎಂದು ಮೂಲಗಳು ವಿವರ ನೀಡಿವೆ.


ಸಂಬಂಧಿತ ಟ್ಯಾಗ್ಗಳು

IT Congress Tax Raid


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ