ಶ್ವೇತಪತ್ರ ಹೊರಡಿಸಲು ಪರಮೇಶ್ವರ್ ಆಗ್ರಹ

G Parameshwar Statement

10-10-2019

ಬೆಂಗಳೂರು: ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದರೆ ಯಾವುದೇ ತೊಂದರೆಯಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಬಗ್ಗೆ ನಿಖರ ಮಾಹಿತಿ ಇಲ್ಲ. ನಮ್ಮ ಸಂಸ್ಥೆ ಮೇಲೆ ದಾಳಿ ಮಾಡಿದರೆ ಸ್ವಾಗತ. ಎಲ್ಲಾ ರೀತಿಯ ದಾಖಲೆಗಳನ್ನು ಪರಿಶೀಲಿಸಲಿ. ಹಾಗೆಯೇ ಅವರ ಸಲಹೆಯಂತೆ ನಡೆದುಕೊಳ್ಳಲಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಅತ್ಯಂತ ಭೀಕರ ನೆರೆ ಉಂಟಾಗಿದೆ. ಜನ ಜಾನುವಾರಗಳ ಪ್ರಾಣ ಹಾನಿ, ಆಸ್ತಿ ಪಾಸ್ತಿ ಹಾನಿ ಸಂಭವಿಸಿದೆ, ಕೇಂದ್ರದಿಂದ ಪರಿಹಾರ ಪಡೆಯಲು ರಾಜ್ಯದಿಂದ ಪಕ್ಷಾತೀತವಾಗಿ ನಿಯೋಗ ತೆಗೆದುಕೊಂಡು ಹೋಗುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿಲ್ಲ. ಈ ಬಗ್ಗೆ ಸದನದಲ್ಲಿ ದನಿ ಎತ್ತಲಿದ್ದೇವೆ ಎಂದರು.

ರೈತರ ಸಾಲಮನ್ನಾವನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ, ಕೇವಲ ಲೆಕ್ಕಾನುದಾನದಿಂದ ಹಣ ಬಿಡುಗಡೆ ಆಗದು. ಈ ಅಧಿವೇಶನದಲ್ಲಿ ಬಜೆಟ್‍ಗೆ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದರು.

ಪಿಡಬ್ಲ್ಯೂಡಿ ಇಲಾಖೆಯಿಂದ ಬಿಡುಗಡೆಯಾಗಿದ್ದ ಕೆಲ ಯೋಜನೆಗಳನ್ನು ಈ ಸರಕಾರ ತಡೆಹಿಡಿದಿರುವುದು ಸರಿಯಲ್ಲ. ಸರಕಾರದಿಂದ ಆದೇಶ ಆಗಿರುವ ಯೋಜನೆ ತಡೆಯಿಡಿಯಲು ಸಾಧ್ಯವಿಲ್ಲ. ರಾಜ್ಯದ ಬೊಕ್ಕಸದಲ್ಲಿ ಹಣವಿಲ್ಲವೆಂದು ಕೆಲ ಸಚಿವರುಗಳು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ರಾಜ್ಯ ಸರಕಾರದ ಹಣಕಾಸಿನ ಸ್ಥಿತಿಗತಿ ಬಗ್ಗೆ ಕೂಡಲೇ ಶ್ವೇತ ಪತ್ರ ಹೊರಡಿಸಿ, ಹಣವಿಲ್ಲವೆಂದು ಹೇಳಲಿ ಎಂದು ಒತ್ತಾಯಿಸಿದರು.

ಒಬ್ಬಬ್ಬ ಸಚಿವರು ಹಣಕಾಸಿನ ಸ್ಥಿತಿ ಗತಿ ಬಗ್ಗೆ ಒಂದೊಂದು ರೀತಿಯ ಅಭಿಪ್ರಾಯ ಹೊರಹಾಕುತ್ತಿದ್ದಾರೆ, ಜನಸಾಮಾನ್ಯರಿಗೆ ವಾಸ್ತವತೆ ತಿಳಿಯಬೇಕಿದ್ದರೆ ಕೂಡಲೇ ಶ್ವೇತಪತ್ರ ಹೊರಡಿಸಲಿ ಎಂದರು.

ವಿಧಾನಸಭೆ ಅಧಿವೇಶನ ಚಿತ್ರೀಕರಿಸಲು ಮಾಧ್ಯಮಗಳ ನಿರ್ಬಂಧ ಖಂಡನೀಯ. ಅಧಿವೇಶನದಲ್ಲಿ ಚರ್ಚೆಯಾಗುವ ವಿಚಾರವನ್ನು ಜನರಿಂದ ಮುಚ್ಚಿಡುವ ಅಗತ್ಯವೇನಿದೆ. ಯಾವ ಕಾರಣಕ್ಕಾಗಿ ಬಿಜೆಪಿ ಸರಕಾರ ಈ ನಿರ್ಧಾರ ಮಾಡಿದ್ದಾರೆ ತಿಳಿದಿಲ್ಲ. ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲಾಗಿದೆ. ಈ ವಿಷಯವನ್ನು ಸಹ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುತ್ತದೆ ಎಂದರು.

ನಾನು ವಿರೋಧ ಪಕ್ಷದ ನಾಯಕ ಸ್ಥಾನದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ತಲೆ ಬಾಗುತ್ತೇವೆ. ವಿರೋಧ ಪಕ್ಷದ ನಾಯಕರ ಆಯ್ಕೆಯಲ್ಲಿ ಯಾವ ನಾಯಕರೂ ವಿರೋಧ ಮಾಡಿಲ್ಲ. ಅವರೂ ಅರ್ಹರು ಹಾಗೂ ಅನುಭವದ ಮೇಲೆ ನನಗೂ ಸ್ಥಾನ ನೀಡಿ ಎಂದು ಎಚ್.ಕೆ. ಪಾಟೀಲ್ ಕೇಳಿದ್ದರೆ ವಿನಃ ವಿರೋಧವಲ್ಲ. ಕಾಂಗ್ರೆಸ್‍ನಲ್ಲಿ ಮೂಲ ಅಥವಾ ವಲಸಿಗರು ಎಂಬ ಬೇಧವಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್‍ನ ನಿರ್ಧಾರದಂತೆ ನಾವೆಲ್ಲಾ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Parameshwar Congress Session Siddharamaih


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ