ಜಾತಿ ಗಣತಿ ವರದಿ ತಿರಸ್ಕರಿಸಲು ಚಿಂತನೆ

Vidhana Soudha

03-10-2019

ಬೆಂಗಳೂರು: ರಾಜ್ಯದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಈ ಜಾತಿ ಗಣತಿಯನ್ನು ನಡೆಸಲಾಗಿತ್ತು. ಈ ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿರಲಿಲ್ಲ. ಜಾತಿ ಗಣತಿ ವರದಿ ಬಿಡುಗಡೆಯಾದರೆ ಅದು ಜನರ ಆಕ್ರೋಶಕ್ಕೆ ಕಾರಣವಾಗಿ ರಾಜಕೀಯವಾಗಿ ತೊಂದರೆಗೆ ಸಿಲುಕಬೇಕಾಗುತ್ತದೆ ಎಂಬ ಭೀತಿಯಿಂದ ಸಿದ್ದರಾಮಯ್ಯ ಸರ್ಕಾರ ಜಾತಿ ಗಣತಿ ನಡೆಸಿದ್ದರೂ ಆ ವರದಿಯನ್ನು ಬಿಡುಗಡೆ ಮಾಡುವ ಧೈರ್ಯ ತೋರಿರಲಿಲ್ಲ. ಜಾತಿ ಗಣತಿ ವರದಿ ಧೂಳು ತಿನ್ನುತ್ತ ಬಿದ್ದಿದೆ.

ನಂತರ ಬಂದ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸಹ ಜಾತಿಗಣತಿ ವರದಿ ಗೊಡವೆಗೆ ಹೋಗಿರಲಿಲ್ಲ. ಈ ವರದಿ ಬಿಡುಗಡೆ ಜೇನುಗೂಡಿಗೆ ಕೈ ಹಾಕಿದಂತೆ ಎಂಬುದನ್ನು ಅರಿತಿದ್ದ ರಾಜಕೀಯ ನಾಯಕರು ವರದಿ ಬಿಡುಗಡೆ ಧೈರ್ಯ ಮಾಡಿರಲಿಲ್ಲ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸುಮಾರು 190 ಕೋಟಿ ರೂ. ವೆಚ್ಚ ಮಾಡಿ ಈ ಜಾತಿ ಗಣತಿಯನ್ನು ಸಿದ್ಧ ಮಾಡಿತ್ತು. ಈ ಜಾತಿ ಗಣತಿ ವೈಜ್ಞಾನಿಕವಾಗಿ ನಡೆದಿಲ್ಲ, ಜಾತಿ ಗಣತಿ ಬಿಡುಗಡೆ ಮಾಡಬಾರದು ಎಂದು ಆಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಒತ್ತಾಯ ಮಾಡಿತ್ತು. ಈ ಜಾತಿ ಗಣತಿಯನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಜಾತಿ ಗಣತಿಗೆ ಮೊದಲಿನಿಂದಲೂ ವಿರೋಧವಾಗಿದ್ದ ಬಿಜೆಪಿ, ಈಗ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾತಿ ಗಣತಿ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ. ಈ ಜಾತಿ ಗಣತಿಯನ್ನು ಒಪ್ಪದೆ ಸಮಗ್ರ ವರದಿಯನ್ನು ತಿರಸ್ಕರಿಸುವ ಬಗ್ಗೆ ಸರ್ಕಾರದ ಉನ್ನತ ಮಟ್ಟದಲ್ಲಿ ಚಿಂತನೆಗಳು ನಡೆದಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ ವರದಿ ತಿರಸ್ಕಾರದ ಬಗ್ಗೆ ಅಧಿಕೃತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.


ಸಂಬಂಧಿತ ಟ್ಯಾಗ್ಗಳು

Vidhana Soudha Congress BS Yediyurappa BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ