ಸೋಮಶೇಖರ್ ವಿರುದ್ಧ ಹರಿಹಾಯ್ದ ಕೈ ಮುಖಂಡರು

S T Somashekar

30-09-2019

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕುರಿತು ಹಗುರ ಹೇಳಿಕೆ ನೀಡಿರುವ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬೆಂಗಳೂರಿನ ಕಾಂಗ್ರೆಸ್ ಮುಖಂಡರು ಹರಿಹಾಯ್ದಿದ್ದಾರೆ.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಕಾಂಗ್ರೆಸ್ ಅಧ್ಯಕ್ಷ ಜಿ.ಕೃಷ್ಣಪ್ಪ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ  ಸಾವಿರಾರು ಕೋಟಿ ಅನುದಾನ ಪಡೆದುಕೊಂಡಿದ್ದ ಎಸ್.ಟಿ. ಸೋಮಶೇಖರ್ ಇಂದು ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಪಕ್ಷಕ್ಕೆ ದ್ರೋಹ ಮಾಡಿದವರು  ಅನರ್ಹರಾಗಿ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದು ಸರಿಯಲ್ಲ. ದಿನೇಶ್ ಗುಂಡೂರಾವ್ ಜಿಲ್ಲಾಧ್ಯಕ್ಷರಾಗಿ ವಿವಿಧ ಹುದ್ದೆಗಳನ್ನ ನಿಭಾಯಿಸಿ ಈಗ ಅಧ್ಯಕ್ಷರಾಗಿದ್ದಾರೆ. ಇಂತವರ ಬಗ್ಗೆ ಕೀಳು ಪದ ಬಳಕೆ ಮಾಡಿದ್ದು ಸರಿಯಲ್ಲ ಎಂದು ಎಸ್.ಟಿ.ಸೋಮಶೇಖರ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಮಾತನಾಡಿ, ಕಳ್ಳನನ್ನ ಕಳ್ಳ ಎಂದು ಕರೆಯುವುದು ತಪ್ಪಲ್ಲ. ಹಾಗೆಯೇ ಅನರ್ಹ ಶಾಸಕರನ್ನು  ಅನರ್ಹ ಎಂದು ಉಚ್ಚರಿಸುವದರಲ್ಲಿ ತಪ್ಪೇನು ಎಂದು ಎಸ್.ಟಿ.ಸೋಮಶೇಖರ್ ಅವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಬಿಡಿಎ ಅಧ್ಯಕ್ಷರೂ ಆದ ಎಸ್.ಟಿ.ಸೋಮಶೇಖರ್, ಎಲ್ಲವನ್ನ ಅನುಭವಿಸಿ ಈಗ ಪಕ್ಷದ್ರೋಹಿಯಾಗಿದ್ದಾರೆ. ಮುಂದಿನ ದಿನದಲ್ಲಿ ಸೋಮಶೇಖರ್ ಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಮೇಯರ್ ಚುನಾವಣೆಯನ್ನು ಮುಂದಕ್ಕೆ ಹಾಕುವ ಯತ್ನ ನಡೆದಿದೆ. ಬಿಬಿಎಂಪಿ ವಿವಿಧ ಯೋಜನೆಗಳ ಅನುದಾನವನ್ನು ಸರ್ಕಾರ ಕಡಿತ ಮಾಡಿರುವುದು ಸರಿಯಲ್ಲ. 1200 ಕೋಟಿ ರೂ. ವೈಟ್ ಟ್ಯಾಪಿಂಗ್ ಅನುದಾನದ ಹಣವನ್ನು  ಅನರ್ಹ ಶಾಸಕರಿಗೆ ನೀಡಿರುವ ಸರ್ಕಾರದ ಕ್ರಮ ಖಂಡನೀಯ ಎಂದರು.

ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಎಸ್ ಟಿ ಸೋಮಶೇಖರ್ ಕೆಪಿಸಿಸಿ ಅಧ್ಯಕ್ಷರ ಕುರಿತು ಅಸಂವಿಧಾನಿಕ ಪದ ಬಳಕೆ ಮಾಡಿರುವುದು ಸರಿಯಲ್ಲ. ಮೊದಲು ಅವರು ಯಾವ ಸ್ಥಿತಿಯಲ್ಲಿದ್ದರು ಎನ್ನುವುದನ್ನು ಅರಿತು ಮಾತನಾಡಬೇಕು. ಕಾಂಗ್ರೆಸ್ ಅವರಿಗೆ ಐದು ಬಾರಿ ಟಿಕೆಟ್ ನೀಡಿತ್ತು. ಅದರಲ್ಲಿ ಸಿದ್ದರಾಮಯ್ಯರ ಆಶೀರ್ವಾದದಿಂದ ಎರಡನೇ ಬಾರಿ ಶಾಸಕರಾದರು. ಈಗ ಅವರೇ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಇದು ಸೋಮಶೇಖರ್ ಹಿರಿತನಕ್ಕೆ ಒಳ್ಳೆಯದಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

S T Somashekar Dinesh Gundurao KPCC Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ