ಮತ್ತೆ ರಾಜೀನಾಮೆ ಪರ್ವ ಪುನಾರಂಭ!

Bjp and JDS

28-09-2019

ಬೆಂಗಳೂರು: ರಾಜ್ಯದಲ್ಲಿನ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿರುವ ಅನರ್ಹ ಶಾಸಕರು ಒಟ್ಟಿಗೆ ಕೇಸರಿ ಪಾಳಯಕ್ಕೆ ಸೇರಿಕೊಳ್ಳಲು ಸಿದ್ಧತೆ ನಡೆಸಿರುವಾಗಲೇ ಜೆಡಿಎಸ್ - ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಮಲದ ಕೈ ಹಿಡಿಯಲು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಾಜೀನಾಮೆ ಪರ್ವಕ್ಕೆ ಚಾಲನೆ ದೊರೆಯಲಿದೆ.

ಭಾನುವಾರದಿಂದ ನವರಾತ್ರಿ ಉತ್ಸವಗಳು ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ರಾಜೀನಾಮೆ ಪರ್ವದ ಜೊತೆಗೆ, ಬಿಜೆಪಿ ಕಮಲ ಮುಡಿಯಲು ಪೈಪೋಟಿ ನಡೆಯುವ ಸಾಧ್ಯತೆಗಳಿವೆ. ಅ. 21ಕ್ಕೆ ನಿಗದಿಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಅನರ್ಹ ಶಾಸಕರು, ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಒಂದು ವೇಳೆ ಚುನಾವಣೆ ನಡೆದಿದ್ದರೆ, ಈ ಎಲ್ಲಾ ಶಾಸಕರು, ಕಮಲದ ಚಿನ್ಹೆಯಡಿ ಸ್ಪರ್ಧಿಸುವ ಸಾಧ್ಯತೆಗಳಿದ್ದವು. ಉಪಚುನಾವಣೆ ಘೋಷಣೆಯಾಗುವ ಮುನ್ನ ಬಿಜೆಪಿ ಸೇರ್ಪಡೆಯಾಗಲು ಜೆಡಿಎಸ್‍ನ ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ಎಸ್.ಆರ್. ಶ್ರೀನಿವಾಸ್ ಸೇರಿದಂತೆ, ಐದಾರು ಮಂದಿ ಶಾಸಕರು ಸಿದ್ಧತೆ ನಡೆಸಿದ್ದರು.

ಉಪಚುನಾವಣೆ ಘೋಷಣೆಯಾಗಿದ್ದರಿಂದ ಸೇರ್ಪಡೆ ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿತ್ತಾದರೂ, ಇದೀಗ ಮತ್ತೊಮ್ಮೆ ಸದ್ದು ಮಾಡುವಂತಾಗಿದೆ. ಬಳ್ಳಾರಿಯ ಮಾಜಿ ಶಾಸಕ ಅನಿಲ್ ಲಾಡ್ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನೆಡೆ ಉಂಟಾಗಲಿದೆ. ಅನಿಲ್ ಲಾಡ್ ಅವರು ಸದ್ಯದಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸೇರ್ಪಡೆಗೆ ಮುಹೂರ್ತ ನಿಗದಿಪಡಿಸುವ ಸಾಧ್ಯತೆಗಳು ಇವೆ

 ಈ ನಡುವೆ ಕಾಂಗ್ರೆಸ್‍ನ ನಿಷ್ಠಾವಂತ ಶಾಸಕರೆಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ಯು.ಟಿ. ಖಾದರ್, ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಂಬ ಸ್ಫೋಟಕ ಸುದ್ದಿ ಹೊರಬಿದ್ದಿರುವುದು ಕಾಂಗ್ರೆಸ್ ಪಾಳಯವನ್ನು ಅಲುಗಾಡಿಸುವಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಮಾಡಿ ಚರ್ಚೆ ನಡೆಸಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಾಂಗ್ರೆಸ್‍ನಿಂದ ಬಿಜೆಪಿಗೆ ಜಿಗಿಯಲು ಹತ್ತಾರು ಮುಖಗಳು ಕಸರತ್ತು ನಡೆಸಿರುವಾಗಲೇ ಖಾದರ್ ಕೂಡ ಇದೇ ಹಾದಿ ಹಿಡಿಯುವ ಸೂಚನೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಎರಡೂ ಪಕ್ಷಗಳ ನಾಯಕರ ಬಗ್ಗೆ ಒಳಗೊಳಗೇ ಅಸಮಾಧಾನಗೊಂಡಿದ್ದ ಹಲವಾರು ಶಾಸಕರು ಇದೀಗ ಮೈ ಚಳಿ ಬಿಟ್ಟು 'ತಮ್ಮ ಹಿತ ಕಾಯುವ' ಪಕ್ಷದತ್ತ ಮುಖಮಾಡಿದ್ದಾರೆ. ತಮ್ಮ ತಮ್ಮ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ತಾವು ಯಾವುದೇ ಪಕ್ಷದಲ್ಲಿ ಗೂಟ ಹೊಡೆದುಕೊಂಡು ಕೂರುವ ಅಗತ್ಯವೇ ಬರುವುದಿಲ್ಲ. ಅಧಿಕಾರ ನಡೆಸುತ್ತಿರುವ ಪಕ್ಷದ ಕೈ ಹಿಡಿದರೆ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವನ್ನಾದರೂ ಬಿಡುಗಡೆ ಮಾಡಿಸಬಹುದು ಎಂಬ ಮನಃಸ್ಥಿತಿಗೆ ತಲುಪಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಕಮಲದ ಹೂ ಮುಡಿಯಲು ಕಾತುರರಾಗಿದ್ದಾರೆ.

ಆಪರೇಷನ್ ಕಮಲದ ಮೂಲಕ ಜೆಡಿಎಸ್ - ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಾಯಕರು ನಡೆಸಿದ ಪ್ರಯತ್ನಗಳನ್ನು ಟೀಕಿಸುತ್ತಿದ್ದ ಶಾಸಕರಿಗೆ ಇದೀಗ ಅದೇ ಪಕ್ಷದ ಬಗ್ಗೆ ಪ್ರೀತಿ ಹೆಚ್ಚಾಗುತ್ತಿರುವುದು ರಾಜ್ಯ ರಾಜಕಾರಣ ವಲಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಉಪಚುನಾವಣೆ ರದ್ದಾಗಿರುವುದರಿಂದ ನಿರಾಳಭಾವದಲ್ಲಿರುವ ಅನರ್ಹ ಶಾಸಕರು ತಮ್ಮ ಭವಿಷ್ಯವನ್ನು ಬಿಜೆಪಿಯಲ್ಲೇ ಕಂಡುಕೊಳ್ಳಲು ನಿರ್ಧರಿಸಿದ್ದಾರೆ. ಮುಂದೊಮ್ಮೆ ಎದುರಾಗಲಿರುವ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವ ದೃಢ ನಿಲುವಿಗೆ ಬಂದಾಗಿದೆ. ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿದ್ದು, ಅಲ್ಲಿನ ಶಾಸಕರು ಪಕ್ಷ ಬಿಡಲು ತುದಿಗಾಲ ಮೇಲೆ ನಿಂತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BJP JDS Congress Resignation


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ