‘ನಿತ್ಯಾನಂದ ಆಶ್ರಮದಲ್ಲಿ ಮಕ್ಕಳ ಮೇಲೆ ದೌರ್ಜನ್ಯ’!?

Nityananda

27-09-2019

2018 ರಲ್ಲಿ ಕೆನಡಾಕ್ಕೆ ಪರಾರಿಯಾಗಲು ನಿತ್ಯಾನಂದ ಪ್ರಯತ್ನ ಮಾಡಿದ್ದು ಈಗ ಬೆಳಕಿಗೆ ಬಂದಿದೆ. ಅವರ ಆಗಿನ ಪ್ರಿಯಶಿಷ್ಯೆಯಾಗಿದ್ದ ಮಾ ನಿತ್ಯ ಸುದೇವಿ ಮೂಲಕ ನಿತ್ಯನಂದ ಕೆನಡಾ ದೇಶಕ್ಕೆ ರಾಜಕೀಯ ಆಶ್ರಯ ಪಡೆಯಲು ತಯಾರಿ ನಡೆಸಿದ್ದರು ಎಂದು ಮಾಹಿತಿ ಹೊರಬಿದ್ದಿದೆ. ನಿತ್ಯನಂದರ ಪಟ್ಟ ಶಿಷ್ಯೆಯರ ಪೈಕಿ ಒಬ್ಬರಾಗಿದ್ದ ಮಾ ನಿತ್ಯ ಸುದೇವಿ ಕೆನಡಾ ದೇಶದ ಪ್ರಜೆಯಾಗಿದ್ದು ಅವರ ನಿಜವಾದ ಹೆಸರು ಸಾರಾ ಸ್ಟೈಫನಿ ಲ್ಯಾಂಡ್ರಿ ಎಂದು. ಸಾರಾ ರನ್ನು ಕೆನಡಾ ದೇಶದ ಸರ್ಕಾರದೊಂದಿಗೆ ಗುಪ್ತವಾಗಿ ಮಾತುಕತೆ ನಡೆಸಿ, ನಿತ್ಯಾನಂದ ಭಾರತದಿಂದ ಕೆನಡಾಕ್ಕೆ ಪರಾರಿಯಾಗಲು ಅನುಕೂಲಗಳನ್ನು ಮಾಡಲು ಮತ್ತು ಅದಕ್ಕೆ ಬೇಕಾಗಿರುವ ಇನ್ನಿತರ ವ್ಯವಸ್ಥೆಗಳನ್ನು ಸಿದ್ಧಪಡಿಸಲು ಕಳುಹಿಸಲಾಗಿತ್ತು. ಆದರೆ ಆನಂತರ ಆಶ್ರಮದಲ್ಲಿ ನಡೆಯುತ್ತಿದ್ದ ಅನೇಕ ಅಕ್ರಮಗಳ ಬಗ್ಗೆ ಮಾಹಿತಿ ಸಿಕ್ಕಿ ನಂತರ ತಾವು ಆಶ್ರಮದಿಂದ ಮತ್ತು ನಿತ್ಯಾನಂದರಿಂದ ದೂರವಿರುವುದಾಗಿ ಸಾರಾ ಅವರೇ ಒಂದು ಯುಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಆಶ್ರಮದಲ್ಲಿ ಅನೇಕ ಅಕ್ರಮಗಳು ನಡೆಯುತ್ತಿದ್ದುದು ಮಾತ್ರವಲ್ಲದೇ ಮಕ್ಕಳ ದುರ್ಬಳಕೆಯಾಗುತ್ತಿತ್ತು. ಹಾಗೆಯೇ ಆಶ್ರಮದ ಮುಖ್ಯಸ್ಥರು ಹೇಳಿದ ರೀತಿ ನಡೆದುಕೊಳ್ಳದ ಮಕ್ಕಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎಂದೂ ಹೇಳಿದ್ದಾರೆ. ಇಷ್ಟು ವರ್ಷಗಳ ಕಾಲ ಆಶ್ರಮದ ಹಾಗೂ ನಿತ್ಯಾನಂದರ ಪರವಾಗಿ ಮಾತನಾಡಿದ್ದಕ್ಕೆ ಕ್ಷಮೆಯಾಚಿಸಿದ್ದಲ್ಲದೇ ಸಾರಾ ತಾವು ಕೂಡ ನಿತ್ಯಾನಂದರ ಭ್ರಮೆಯಲ್ಲಿ ಸಿಕ್ಕಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಆಶ್ರಮ ಬಿಟ್ಟ ಮೇಲೆ ಸಾಮಾನ್ಯವಾಗಿ ಪಾಶ್ಚಾತ್ಯರು ಇಂಥ ಆರೋಪ ಮಾಡುತ್ತಾರೆ ಎಂದು ಈ ವಿಷಯ ಕಡೆಗಣಿಸುವ ಮೊದಲು ಸಾರಾ ಲ್ಯಾಂಡ್ರಿಯವರು ನಿತ್ಯಾನಂದ ಅವರ ಸಂಘಟನೆಯ ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿದ್ದರು ಎಂಬುದನ್ನು ಗಮನಿಸಬೇಕು. ಅವರು ನಿತ್ಯಾನಂದ ಪರವಾಗಿ ನೂರಾರು ವಿಡಿಯೋಗಳನ್ನು ಯುಟ್ಯೂಬ್ ಗಾಗಿ ತಯಾರಿಸಿದ್ದು ಮಾತ್ರವಲ್ಲದೇ ಉಳಿದ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲೂ ನಿತ್ಯಾನಂದ ಹಾಗೂ ಅವರ ಆಶ್ರಮ ಸಮರ್ಥಿಸಿಕೊಂಡು ನಿತ್ಯಾನಂದರ ವಿರೋಧಿಗಳ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದರು. ಈ ವಿಡಿಯೋದಲ್ಲಿ ನಿತ್ಯಾನಂದ ರಾಸಲೀಲೆಯಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಹೊತ್ತ ನಟಿ ರಂಜಿತಾ, ನಿತ್ಯಾನಂದ ಆಶ್ರಮದ ಒಬ್ಬ ಮುಖ್ಯಸ್ಥರು ಮತ್ತು ಅವರ ನಿರ್ದೇಶನದಲ್ಲೇ ಅನೇಕ ಇಂಥ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ನಿತ್ಯಾನಂದರ ವಿದೇಶಿ ಶಿಷ್ಯರ ಪೈಕಿ ಬಹಳ ಪ್ರಮುಖರಾಗಿ ಹೆಸರಾಗಿದ್ದ ಸಾರಾ ಲ್ಯಾಂಡ್ರಿಯವರು ಅನೇಕ ವಿದೇಶಿಯರನ್ನು ಈ ಆಶ್ರಮಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಅವರೇ ಎಳೆ ಎಳೆಯಾಗಿ ಆರೋಪ ಮಾಡಿರುವುದು ಮಾತ್ರವಲ್ಲದೇ, ಆಶ್ರಮದಲ್ಲೇ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರದಲ್ಲಿ ತಕ್ಷಣ ಕೇಂದ್ರ ಸರ್ಕಾರ ತನಿಖೆ ಮಾಡಿ, ನಿತ್ಯಾನಂದರ ಚಟವಟಿಕೆಗಳನ್ನು ನಿಗ್ರಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Nityananda Godman Children Bidadi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ