ಬಿಎಂಟಿಸಿ ಬಸ್ ಗಳಲ್ಲಿನ್ನು ಹಾಡು ಕೇಳುವಂತಿಲ್ಲ!

BMTC

21-09-2019

ಬೆಂಗಳೂರು: ಬೆಂಗಳೂರು ಮಹಾ ಸಾರಿಗೆ ಸಂಸ್ಥೆ(ಬಿಎಂಟಿಸಿ)ಬಸ್ಸುಗಳಲ್ಲಿ ಪ್ರಯಾಣಿಕರು ಇನ್ನು ಮುಂದೆ ಮೊಬೈಲ್‌ನಲ್ಲಿ ಲೌಡ್ ಸ್ವೀಕರ್(ಜೋರು ದನಿ)ಯಲ್ಲಿ ಸಂಗೀತ ಹಾಡು ಕೇಳುವಂತಿಲ್ಲ ಎಂದು ಸುತ್ತೋಲೆ ಹೊರಡಿಸಲಾಗಿದೆ.
ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಬಹುತೇಕ ಪ್ರಯಾಣಿಕರು ಪ್ರಯಾಣದ ವೇಳೆ ಕುಳಿತಿರಲಿ, ನಿಂತಿರಲಿ ಮೊಬೈಲ್‌ಗಳಲ್ಲಿ ಹಾಡುಗಳನ್ನು ಕೇಳುವುದು, ವೀಡಿಯೋಗಳನ್ನು ವೀಕ್ಷಿಸುತ್ತಿದ್ದರಿಂದ ಸಹಪ್ರಯಾಣಿಕರು ಬಸ್ಸಿಗೆ ಹತ್ತಲು ಹಾಗೂ ಇಳಿಯಲು ಮತ್ತು ಪ್ರಯಾಣಿಸುತ್ತಿದ್ದ ವೇಳೆ ಮುಜುಗರಕ್ಕೊಳಗಾಗುತ್ತಿದ್ದಾರೆ ಎನ್ನುವ ಅಂಶ ಪರಿಗಣಿಸಿ ಇಂತಹ ಕ್ರಮಕ್ಕೆ ಸಾರಿಗೆ ಸಂಸ್ಥೆ ಮುಂದಾಗಿದೆ ಹಾಗೂ ಬಸ್‌ನಲ್ಲಿ ಮೊಬೈಲ್ ಬಳಕೆ ಮೋಟಾರು ವಾಹನಕಾಯ್ದೆ ೧೯೮೬ರ ಉಲ್ಲಂಘನೆಯೆಂದೂ ಸಹ ಸಂಸ್ಥೆ ತಿಳಿಸಿದೆ.
ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಸಿ. ಶಿಖಾ ಈ ಸಂಬಂಧ ಸುತ್ತೋಲೆ ಹೊರಡಿಸಿ ಬಸ್ಸುಗಳಲ್ಲಿ ಪ್ರಯಾಣಿಕರು ಏನು ಮಾಡಬಾರದೆಂದು ಸೂಚಿಸಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
ಬಿಎಂಟಿಸಿ ಸಂಸ್ಥೆ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಮೊಬೈಲ್‌ಗಳಲ್ಲಿ ಲೌಡ್‌ಸ್ವೀಕರ್‌ಗಳಲ್ಲಿ ಹಾಡುಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್‌ನಲ್ಲಿ ಹಾಡು ಹಾಕದಂತೆ ಕರ್ತವ್ಯನಿರತ ಚಾಲನಾ ಸಿಬ್ಬಂದಿ ಜನರಿಗೆ ತಿಳುವಳಿಕೆ ನೀಡಬೇಕು.
ಮೊಬೈಲ್ ಬಳಕೆ ಮೂಲಕ ಸಹಪ್ರಯಾಣಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆಗಾಗಿ ಪ್ರಯಾಣಿಕರಿಗೆ ಅಗತ್ಯ ಸೂಚನೆ ಹಾಗೂ ಮಾಹಿತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಬಸ್ಸುಗಳಲ್ಲಿ ಅಗತ್ಯ ಮಾಹಿತಿಯುಳ್ಳ ಸ್ಟಿಕ್ಕರ್‌ಗಳನ್ನು ಅಂಟಿಸಲು ಅಗತ್ಯ ಕ್ರಮಕೈಗೊಳ್ಳಲು ಸಂಸ್ಥೆಯ ಮುಖ್ಯ ತಾಂತ್ರಿಕ ಅಭಿಯಂತರರು ಹಾಗೂ ಕಾರ್ಯವ್ಯವಸ್ಥಾಪಕರಿಗೂ ಸೂಚಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

BMTC Passengers Transfort Mobile


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ