ಒಂದು ಸರ್ಕಾರ ನೂರೊಂದು ಬಾಗಿಲು

Karnataka Government

20-09-2019

ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಹೊಂದುತ್ತಲೇ ಭಾರೀ ಮಹಾತ್ವಾಕಾಂಕ್ಷೆಯೊಂದಿಗೆ ಯಡಿಯೂರಪ್ಪ ರಾಜ್ಯದ ಸಿಎಂ ಆಗಿ ದಿಢೀರ್ ಎಂದು ಪ್ರಮಾಣವಚನ ಸ್ವೀಕರಿಸಿದರು. ಈ ಮಹತ್ವದ ಸನ್ನಿವೇಶಕ್ಕೆ ಸಾಕ್ಷಿಯಾದ ಯಡಿಯೂರಪ್ಪ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮದಿಂದ ಕುಣಿದಾಡಿದರು.

ಆದರೆ, ಈ ಸಂಭ್ರಮ ಹೆಚ್ಚು ಕಾಲ ಉಳಿಯಿಲ್ಲ. ಕಾರಣ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೂ ಮಂತ್ರಿ ಮಂಡಲ ವಿಸ್ತರಣೆ ಮಾಡಲು ಒಂದು ತಿಂಗಳು ಕಾಯಬೇಕಾಯಿತು. ಅದೂ ಕೂಡ ಗಜಪ್ರಸವದ ರೀತಿ ಆಯಿತು. ಅದೇ ಇದೀಗ ಸರ್ಕಾರವನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಈ ಗೊಂದಲ ನಿವಾರಣೆಗೆ ದೇವರ ಮೊರೆ ಹೋಗಿರುವ ಯಡಿಯೂರಪ್ಪ, ಹೋಮ ಹವನಾದಿಗಳನ್ನು ನಡೆಸುತ್ತ ಮೊರೆಯಿಡುತ್ತಿದ್ದಾರೆ.

ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ತಮ್ಮೊಂದಿಗೆ ಹಗಲಿರುಳು ಶ್ರಮಿಸಿದ ಡಾ.ಅಶ್ವತ್ಥ ನಾರಾಯಣ ಅವರನ್ನು ಡಿಸಿಎಂ ಮಾಡಿಸುವಲ್ಲಿ ಯಶಸ್ವಿಯಾದ ಯಡಿಯೂರಪ್ಪ, ಅದಕ್ಕಾಗಿ ಶಾಸಕರೇ ಅಲ್ಲದ ಲಕ್ಷ್ಮಣ ಸವದಿ ಅವರನ್ನು ಮಂತ್ರಿ ಮಾಡಿ ಡಿಸಿಎಂ ಮಾಡಬೇಕಾಯಿತು. ತಮ್ಮ ಹಿರಿತನ, ಅನುಭವ ಹಾಗೂ ಪಕ್ಷ ನಿಷ್ಠೆಯನ್ನು ಪರಿಗಣಿಸದೆ ಸವದಿ ಮತ್ತು ಅಶ್ವತ್ಥ ನಾರಾಯಣ ಅವರನ್ನು ಡಿಸಿಎಂ ಮಾಡಿರುವುದಕ್ಕೆ ಅಸಮಾಧಾನದಿಂದ ಕುದಿಯುತ್ತಿರುವ ಜಗದೀಶ್ ಶೆಟ್ಟರ್, ಈಶ್ವರಪ್ಪ ಮತ್ತು ಆರ್. ಅಶೋಕ್ ಯಾರ ಮಾತೂ ಕೇಳುವ ಪರಿಸ್ಥಿತಿಯಲ್ಲಿಲ್ಲ. ಇನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಹಂಬಲಿಸಿದ್ದ ಸಿ.ಟಿ ರವಿ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಸಿಎಂ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಬೆಳವಣಿಗೆಯಿಂದಾಗಿ ಯಡಿಯೂರಪ್ಪ ಸರ್ಕಾರಕ್ಕೆ ಗೊತ್ತೂ ಇಲ್ಲ.. ಗುರಿಯೂ ಇಲ್ಲ. ಒಂದು ರೀತಿ ಸೂತ್ರ ಹರಿದ ಗಾಳಿಪಟದಂತೆ ಹಾರಾಡುತ್ತಿದೆ. ಪ್ರತಿಪಕ್ಷದಲ್ಲೂ ಇದೇ ರೀತಿಯ ಗೊಂದಲವಿರುವುದರಿಂದ ಯಡಿಯೂರಪ್ಪ ಬಚಾವ್ ಆಗಿದ್ದಾರೆ.

ಒಲ್ಲದ ಮನಸ್ಸಿನಿಂದ ಮಂತ್ರಿಗಳಾಗಿರುವ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಅಶೋಕ್, ಸಿ.ಟಿ ರವಿ ಇವರುಗಳು ಸಿಎಂ ಮಾತಿಗೆ ಯಾವುದೇ ಮನ್ನಣೆ ನೀಡುತ್ತಿಲ್ಲ. ಶ್ರೀರಾಮುಲು ಅವರಂತೂ ಸಂಪುಟ ಸಭೆಯಲ್ಲಿ ಸಿಎಂ ಮುಖ ನೋಡಿದ್ದು ಬಿಟ್ಟರೆ ಇಲ್ಲಿಯವರೆಗೆ ಸಿಎಂ ಜೊತೆ ಯಾವುದೇ ಸಭೆಗೆ ಹಾಜರಾಗಿಲ್ಲ. ಸಭೆ-ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿಲ್ಲ. ಇವರು ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಆದರೂ ಇವರು ಮತ್ತೊಮ್ಮೆ ಮಂತ್ರಿಗಳಾಗಿ ಖಾತೆ ಹಂಚಿಕೆಗಾಗಿ ಕಾಯುತ್ತಿರುವಾಗಲೇ ಸಿಎಂ ಕಚೇರಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಸಿಎಂ ಆಪ್ತವಲಯದ ಷರತ್ತಿಗೊಳಪಟ್ಟು ವರ್ಗಾವಣೆಯಾಗಿ ಬಂದಿರುವ ಅಧಿಕಾರಿಗಳು ತಮ್ಮ ಇಲಾಖೆಯ ಸಚಿವರ ಆದೇಶ ಪಾಲಿಸುವುದಕ್ಕಿಂತ ಸಿಎಂ ಆಪ್ತವಲಯದ ಆದೇಶ ಜಾರಿ ಮಾಡುತ್ತಿದ್ದಾರೆ. ಇದು ಹಲವು ಸಚಿವ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು ಹೈಕಮಾಂಡ್ ಕೃಪಾಕಟಾಕ್ಷದಿಂದ ಮಂತ್ರಿಯಾಗಿ ತನಗೆ ಬೇಕಾದ ಖಾತೆ ಪಡೆದುಕೊಂಡು ಮೈಸೂರು ಉಸ್ತುವಾರಿಯಾಗಿರುವ ವಿ.ಸೋಮಣ್ಣ ಕೂಡ ತಾವಾಯಿತು, ತಮ್ಮ ಮೈಸೂರು ದಸರಾವಾಯಿತು ಎಂಬಂತೆ ಇದ್ದಾರೆ. ಇವರ ಮೇಲೂ ಸಿಎಂ ಗೆ ಯಾವುದೇ ನಿಯಂತ್ರಣವಿಲ್ಲ.

ಶಾಸಕರಲ್ಲದಿದ್ದರೂ ಸಂತೋಷದಿಂದ ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಭಡ್ತಿ ಪಡೆದಿರುವ ಲಕ್ಷ್ಮಣ ಸವದಿ ಸಂಪೂರ್ಣ ಭಿನ್ನ. ಹೈಕಮಾಂಡ್ ಶ್ರೀರಕ್ಷೆ ಇವರ ಮೇಲಿರುವುದರಿಂದ ಸರ್ಕಾರದ ಬಹುತೇಕ ಅಧಿಕಾರಿಗಳು ಇವರ ಆದೇಶ ಪಾಲನೆ ಮಾಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಅವರು ಅತ್ಯಂತ ಪವರ್ ಫುಲ್ ಡಿಸಿಎಂ. ಹಾಗಾಗಿ ಸಿಎಂ ಆದಿಯಾಗಿ ಯಾರೂ ಕೂಡ ಅವರ ತಂಟೆಗೆ ಹೋಗುತ್ತಿಲ್ಲ. ಬಹುತೇಕರು ಅತ್ಯಂತ ಭಯ ಭಕ್ತಿಯಿಂದ ಇವರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಅತ್ಯಂತ ಸಂಭಾವಿತ ರಾಜಕಾರಣಿ ಎಂದೇ ಗುರುತಿಸಲ್ಪಟ್ಟಿರುವ ಡಿಸಿಎಂ ಗೋವಿಂದ ಕಾರಜೋಳ, ಯಾರ ಉಸಾಬರಿಯೂ ಬೇಡ ಎಂದು ತಮ್ಮಷ್ಟಕ್ಕೆ ತಾವಿದ್ದಾರೆ. ಇವರೂ ಕೂಡ ಸಿಎಂ ಸೇರಿದಂತೆ ಯಾರ ಜೊತೆಗೂ ಅಷ್ಟಾಗಿ ಬೆರೆಯದೇ, ಕ್ಷೇತ್ರ ಮತ್ತು ಇಲಾಖೆಗೆ ಮಾತ್ರ ಸೀಮಿತವಾಗಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಇವರ ನಿಯಂತ್ರಣಕ್ಕೆ ಬರುತ್ತಿಲ್ಲ.

ಇದರಿಂದಾಗಿ ಯಾರೂ ಯಾರನ್ನೂ ನಂಬದ, ಯಾರೂ ಯಾರ ಮಾತೂ ಕೇಳದ ಸ್ಥಿತಿ ನಿರ್ಮಾಣವಾಗಿದೆ. ಸಿಎಂ ಯಡಿಯೂರಪ್ಪ ತಮ್ಮ ನೆಚ್ಚಿನ ಭಂಟ ಡಾ. ಅಶ್ವತ್ಥ ನಾರಾಯಣ್ ರಾಜಕೀಯ ಕಾರ್ಯದರ್ಶಿಗಳಾದ ವಿಶ್ವನಾಥ್ ಹಾಗೂ ರೇಣುಕಾಚಾರ್ಯ ಅವರ ಜೊತೆ ಸೇರಿ ಗಂಡಾಂತರಗಳಿಂದ ಪಾರಾಗುವ ಬಗ್ಗೆ ಹಾಗೂ

ತಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತಂತ್ರರಾಗಿರುವ ಜೆಡಿಎಸ್-ಕಾಂಗ್ರೆಸ್ ಶಾಸಕರ ಕಷ್ಟ-ಸುಖ ವಿಚಾರಿಸುತ್ತಿದ್ದಾರೆ.

ಹೀಗಾಗಿ ಆಡಳಿಯ ಯಂತ್ರದ ಬಗ್ಗೆ ಗಮನ ಕೊಡಲು ಯಾರಿಗೂ ಪುರುಸೊತ್ತಿಲ್ಲ. ಎಲ್ಲ ವಲಯಗಳಲ್ಲೂ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಸಿಎಂ ಯಡಿಯೂರಪ್ಪ ಅಲ್ಪಾವಧಿ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದರೂ ಈ ಸಂಬಂಧ ತಮ್ಮ ವ್ಯಾಪ್ತಿಯ ಹಲವು ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಈ ವಿಷಯವನ್ನು ಉಳಿದ ಮಂತ್ರಿಗಳ ಗಮನಕ್ಕೂ ತಂದು ಬಜೆಟ್ ಪೂರ್ವಭಾವಿ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಯಥಾಪ್ರಕಾರ ಡಿಸಿಎಂ ಅಶ್ವತ್ಥ ನಾರಾಯಣ್ ಹೊರತುಪಡಿಸಿ ಬೇರೆ ಯಾರಿಂದಲೂ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಸಭೆಗೂ ಹಾಜರಾಗಲಿಲ್ಲ. ಇದರಿಂದ ಆಘಾತಕ್ಕೊಳಗಾದ ಯಡಿಯೂರಪ್ಪ, ಇದೀಗ ಬಜೆಟ್ ಮಂಡಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು, ಪೂರಕ ಅಂದಾಜಿಗೆ ಮಾತ್ರ ಸಿದ್ಧರಾಗುತ್ತಿದ್ದಾರೆ.

ಹಾಗಾಗಿ ರಾಜ್ಯ ಸರ್ಕಾರ ಮೇಲ್ನೋಟಕ್ಕೆ ಒಂದೇ ಎಂಬಂತೆ ಕಾಣುತ್ತಿದ್ದರೂ ಒಳಹೊಕ್ಕು ನೋಡಿದರೆ ನೂರೊಂದು ಬಾಗಿಲು ಗೋಚರಿಸುತ್ತವೆ. ಸಂಕಷ್ಟದಿಂದ ಪಾರಾಗಲು ಸಿಎಂ ಯಡಿಯೂರಪ್ಪ ಮಾಡುತ್ತಿರುವ ಹೋಮ-ಹವನಗಳಿಂದ ಪ್ರಸನ್ನರಾಗುವ ದೇವರುಗಳು ಯಾವ ದಾರಿ ತೋರಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

https://www.youtube.com/watch?v=xXb754tO9UE


ಸಂಬಂಧಿತ ಟ್ಯಾಗ್ಗಳು

BS Yediyurappa BJP PM Modi Central government


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ