ರಾಜ್ಯಾದ್ಯಂತ ಹೋರಾಟಕ್ಕೆ ಅಣಿಯಾದ ಕಾಂಗ್ರೆಸ್

Congress

18-09-2019

ಬೆಂಗಳೂರು: ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿ-ಅನಾವೃಷ್ಟಿಯ ಹಿನ್ನೆಲೆಯಲ್ಲಿ ರೈತರ ಸದ್ಯದ ಕೃಷಿ ಸಾಲವನ್ನೂ ಮನ್ನಾ ಮಾಡುವಂತೆ ಒತ್ತಾಯಿಸಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ, ಯಡಿಯೂರಪ್ಪ ನೇತೃತ್ವದ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿಂದು ನಡೆದ ಸಿದ್ಧರಾಮಯ್ಯ ಅಧ್ಯಕ್ಷತೆಯ ಶಾಸಕಾಂಗ ಸಭೆ, ಯಡಿಯೂರಪ್ಪ ಸರ್ಕಾರ ಹೆಜ್ಜೆ ಹೆಜ್ಜೆಗೂ ಎಡವುತ್ತಿದ್ದು ಇದರ ಪರಿಣಾಮವಾಗಿ ನಾಡಿನ ಜನ ಆತಂಕದಲ್ಲಿದ್ದಾರೆ. ಈ ಆತಂಕವನ್ನು ನಿವಾರಿಸಲು ರಾಜ್ಯದೆಲ್ಲೆಡೆ ಹೋರಾಟ ಆರಂಭಿಸಬೇಕು ಎಂದು ತೀರ್ಮಾನ ಮಾಡಿತು.

ನೆರೆ ಹಾಗೂ ಬರಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಮೋದಿಯವರ ಮುಖ ನೋಡಿ ಮತ ಕೊಟ್ಟರೂ ಅನ್ಯಾಯ ಮಾಡಿವೆ ಎಂದು ಸಭೆ ಆಕ್ಷೇಪ ವ್ಯಕ್ತಪಡಿಸಿತು.

ಕೇಂದ್ರ ಸರ್ಕಾರ ತಕ್ಷಣವೇ ನೊಂದ ಜನರ ಕಷ್ಟ ಪರಿಹಾರಕ್ಕೆ ಅಗತ್ಯದ ನೆರವು ನೀಡಬೇಕು. ರಾಜ್ಯ ಸರ್ಕಾರ ಕೂಡಾ ಸಮರೋಪಾದಿಯಲ್ಲಿ ಕೆಲಸ ಮಾಡಿ ಜನರ ನೋವಿಗೆ ಮದ್ದು ನೀಡಬೇಕು ಎಂದು ಒತ್ತಾಯ ಮಾಡಿತು.

ರಾಜ್ಯ ಸರ್ಕಾರ ನೆರೆ ಹಾಗೂ ಬರಪೀಡಿತ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಆದರೆ ವಿಪರ್ಯಾಸವೆಂದರೆ ಪರಿಸ್ಥಿತಿ ವಿಕೋಪಕ್ಕೆ ಹೋದ ಮೇಲೂ ಅದು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಇತ್ತ ಕಡೆ ಸುಳಿಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತು.

ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗಿರುವುದರಿಂದ ರೈತಾಪಿ ವರ್ಗ ಸಂಕಷ್ಟದಲ್ಲಿದ್ದು ತಕ್ಷಣವೇ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಅವರು ಮಾಡಿರುವ ಸಧ್ಯದ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಸಭೆ ಒತ್ತಾಯಿಸಿತು.

ಪ್ರವಾಹ ಹಾಗೂ ಬರಪೀಡಿತ ಸ್ಥಿತಿಯ ಹಿನ್ನೆಲೆಯಲ್ಲಿ ತಕ್ಷಣವೇ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಕರೆಯುವಂತೆ ಸರ್ಕಾರವನ್ನು ಒತ್ತಾಯಿಸಿದ ಸಭೆ, ಆ ಮೂಲಕ ಜನರ ಜತೆ ನಾವಿದ್ದೇವೆ ಎಂಬ ಭರವಸೆ ತುಂಬುವ ಕೆಲಸ ಮಾಡಬೇಕು ಎಂದು ಒತ್ತಾಯ ಮಾಡಿತು.

ಬರಪೀಡಿತ ತಾಲ್ಲೂಕು ಹಾಗೂ ಪ್ರದೇಶಗಳ ವಿವರವನ್ನು ತಕ್ಷಣ ಘೋಷಿಸಬೇಕು ಎಂದು ಶಾಸಕಾಂಗ ಸಭೆ ಒತ್ತಾಯಿಸಿತಲ್ಲದೆ ಪ್ರವಾಹದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿತು.

ರಾಜ್ಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬಿಜೆಪಿ ದ್ವೇಷದ ರಾಜಕೀಯ ಮಾಡುತ್ತಿರುವುದನ್ನು ಖಂಡಿಸಿದ ಸಭೆ, ಉದ್ದೇಶಪೂರ್ವಕವಾಗಿ ಅವರನ್ನು ಇ.ಡಿ.ಬಲೆಗೆ ಸಿಲುಕಿಸಿ ಹಿಂಸೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಒಗ್ಗಟ್ಟಿನಿಂದ ಡಿ.ಕೆ.ಶಿವಕುಮಾರ್ ಅವರ ಪರ ನಿಲ್ಲಲು ತೀರ್ಮಾನಿಸಿದೆ.


ಸಂಬಂಧಿತ ಟ್ಯಾಗ್ಗಳು

BS Yediyurappa Siddaramaih Congress KPCC


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ