ಸಿನಿಮೀಯ ರೀತಿಯಲ್ಲಿ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ

Kidnap case

17-09-2019

ಬೆಂಗಳೂರು: ಟಿವಿಎಸ್ ಶೋ ರೂಂನ ಮಾಲೀಕ,ಯಲಹಂಕ ಉಪನಗರದ ಉದ್ಯಮಿ ಸಿದ್ದರಾಜು ಅವರ ಪುತ್ರ ಹೇಮಂತ್ ಹಾಗೂ ಕಾರು ಚಾಲಕ ಕೇಶವ್‌ರೆಡ್ಡಿಯನ್ನು ೨೦ ದಿನಗಳ ಹಿಂದೆ ಅಪಹರಿಸಿ ೩ ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟು ಸವಾಲಾಗಿ ಪರಿಣಮಿಸಿದ್ದ ಮೂವರು ಕುಖ್ಯಾತ ಅಪಹರಣಕಾರರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ತಗುಲಿ ಎರಡೂ ಕಾಲುಗಳಿಗೆ ಗಾಯಗೊಂಡಿರುವ ತಮಿಳುನಾಡಿನ ತಿರುಕೊಯ್ಯೂಲೂರುವಿನ ತಂಗಬಾಲ (೨೪), ಎಡಗಾಲಿಗೆ ಗುಂಡೇಟು ತಗುಲಿರುವ ಉಲ್ಲಾಳದ ಪ್ರಶಾಂತ್ (೨೭) ಹಾಗೂ ಬಲ ಮೊಣಕೈಗೆ ಗುಂಡು ತಗುಲಿರುವ ಯಶವಂತಪುರದ ನವೀನ್(೨೪)ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಹರಣಕಾರರಿಂದ ಗಾಯಗೊಂಡ ಸ್ಥಿತಿಯಲ್ಲಿದ್ದ ಹೇಮಂತ್ ಹಾಗೂ ಕೇಶವ್‌ರೆಡ್ಡಿಯನ್ನು ಸುರಕ್ಷಿತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನೂ ನಾಲ್ವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆ ವೇಳೆ ಲಾಂಗ್‌ನಿಂದ ಬಂಧಿಸಲು ಹೋದ ದೊಡ್ಡಬಳ್ಳಾಪುರದ ಮುಖ್ಯಪೇದೆ ಮಧುಕುಮಾರ್ ಮುರಳಿಧರ್ ಮೇಲೆ ಅಪಹರಣಕಾರರು ಹಲ್ಲೆ ನಡೆಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಲೇಜು ಬಳಿ ಕಿಡ್ನಾಪ್
ಯಲಹಂಕದ ಉಪನಗರದಲ್ಲಿ ಟಿವಿಎಸ್ ಶೋ ರೂಂ ನಡೆಸುತ್ತಿದ್ದ ಮಾತೃ ಬಡಾವಣೆಯ ಸಿದ್ದರಾಜು ಅವರ ಪುತ್ರ ಸಿಂಗನಾಯಕಹಳ್ಳಿಯ ಆರ್‌ಟಿನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಹೇಮಂತ್ (೧೭)ನನ್ನು ಕಳೆದ ಆ. ೨೬ರಂದು ಮಧ್ಯಾಹ್ನ ಕಾರಿನ ಚಾಲಕ ಕೇಶವ್‌ರೆಡ್ಡಿ (೨೪) ಕರೆದುಕೊಂಡು ಬರಲು ಕರೆದುಕೊಂಡು ಬರಲು ಹೋಗಿದ್ದರು.
ಕಾಲೇಜಿನಿಂದ ಹೊರ ಬಂದು ಹೇಮಂತ್, ಕೇಶವರೆಡ್ಡಿ ಅವರ ಕಾರು ಹತ್ತುತ್ತಿರುವಾಗ ಮತ್ತೊಂದು ಕಾರಿನಲ್ಲಿ ಬಂದ ಗುಂಡೇಟು ತಗುಲಿರುವ ಮೂವರು ಸೇರಿ ೭ ಮಂದಿ ಹೇಮಂತ್ ಹಾಗೂ ಕೇಶವ್‌ರೆಡ್ಡಿಯನ್ನು ತಮ್ಮ ಕಾರಿನೊಳಗೆ ಎಳೆದುಕೊಂಡು ಅಪಹರಿಸಿ ಪರಾರಿಯಾಗಿದ್ದರು.
ಕಾಲೇಜಿಗೆ ಹೋಗಿದ್ದ ಮಗನನ್ನು ಕರೆದುಕೊಂಡು ಬರಲು ಹೋದ ಚಾಲಕ ಹಾಗೂ ಪುತ್ರ ನಾಪತ್ತೆಯಾಗಿದ್ದರಿಂದ ಆತಂಕಕ್ಕೊಳಗಾದ ಸಿದ್ದರಾಜು ಅವರು, ಅಂದು ಸಂಜೆ ಪೊಲೀಸರಿಗೆ ದೂರು ನೀಡುವಷ್ಟರಲ್ಲಿ ಅಪಹರಣಕಾರರು ೩ ಕೋಟಿ ಒತ್ತೆ ಹಣಕ್ಕೆ ಬೇಡಿಕೆ ಇಟ್ಟು ಹಣ ಕೊಟ್ಟರೆ ಮಾತ್ರ ಮಗನನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಅಪಹರಣವು ಎಲ್ಲಿ ಪೊಲೀಸರಿಗೆ ಗೊತ್ತಾಗಿ ನಮ್ಮ ಹಿಂದೆ ಬೀಳುತ್ತಾರೆ ಎಂಬ ಕಾರಣಕ್ಕೆ ಅಪಹರಣಕಾರರು ಹೊರ ರಾಜ್ಯಗಳಲ್ಲಿ ಸುತ್ತಾಡ ತೊಡಗಿದ್ದು, ಮೂರ್ನಾಲ್ಕು ದಿನಗಳಾದರೂ ಮಗ ಹಾಗೂ ಚಾಲಕನ ಸುಳಿವನ್ನೇ ಕೊಟ್ಟಿರಲಿಲ್ಲ.
ಮತ್ತಷ್ಟು ಆತಂಕಗೊಂಡ ಸಿದ್ದರಾಜು ಅವರು ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಡಿವೈಎಸ್ಪಿಗಳಾದ ಸಕ್ರಿ, ಮೋಹನ್ ಅವರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಸವಾಲಾಗಿದ್ದ ಕೃತ್ಯ
ಅಪಹರಣಕಾರರು ವಾರಕಳೆದರೂ ಯಾವುದೇ ಸುಳಿವು ಮಾಡದೆ ತಲೆಮರೆಸಿಕೊಂಡು ಪೊಲೀಸ್ ತಂಡಗಳಿಗೆ ಸವಾಲಾಗಿ ಪರಿಣಮಿಸಿದ್ದರು. ೨ ದಿನಗಳ ಹಿಂದೆ ೩ ಕೋಟಿ ರೂ.ಗಳಲ್ಲಿ ೧ ಕೋಟಿ ೮೦ ಲಕ್ಷ ಹಣವನ್ನು ನೀಡಿದರೆ ಬಿಡುಗಡೆ ಮಾಡುವುದಾಗಿ ಅದನ್ನು ಪೊಲೀಸರಿಗೆ ತಿಳಿಸಿದರೆ ಹೇಮಂತ್ ಹಾಗೂ ಕೇಶವ್‌ರೆಡ್ಡಿ ಇಬ್ಬರನ್ನು ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದರು.
ಪ್ರಕರಣದ ಬೆನ್ನು ಹತ್ತಿದ ವಿಶೇಷ ತಂಡಗಳು ಮಾರುವೇಷದ ಕಾರ್ಯಾಚರೆಣೆಗೆ ಮುಂದಾಗಿ ಹಣವನ್ನು ಕೊಡುವುದಾಗಿ ಅಪಹರಣಕಾರರನ್ನು ಕರೆಸಿಕೊಳ್ಳುವ ಯೋಜನೆ ಹಾಕಿಕೊಂಡರು. ಅದರಂತೆ ತಲಘಟ್ಟಪುರದ ಕಡಪಗೆರೆಯ ನೈಸ್ ರಸ್ತೆಯಲ್ಲಿ ಮಧ್ಯರಾತ್ರಿ ೨ರ ವೇಳೆ ಹಣವನ್ನು ಬ್ಯಾಗ್‌ನಲ್ಲಿ ತಂದಿಡುವುದಾಗಿ ಅಪಹರಣಕಾರರಿಗೆ ಮಾಹಿತಿ ನೀಡಲಾಯಿತು.
ಪೊಲೀಸರೇ ಮಾರುವೇಷದಲ್ಲಿ ಸಿದ್ದರಾಜು ಜತೆ ಕಾರಿನಲ್ಲಿ ಹೋಗಿ ಹಣದ ಬ್ಯಾಗ್ ಎಸೆಯುವಾಗ ಅದನ್ನು ನವೀನ್ ತೆಗೆದುಕೊಳ್ಳಲು ಬಂದಿದ್ದಾನೆ. ಆತನನ್ನು ಹಿಡಿಯಲು ಹೋದಾಗ ಮಾರುವೇಷದಲ್ಲಿದ್ದ ಪೊಲೀಸರ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಆತ್ಮ ರಕ್ಷಣೆಗಾಗಿ ಡಿವೈಎಸ್ಪಿ ಸಕ್ರಿ ಅವರು ಒಂದು ಸುತ್ತು ಗುಂಡು ಹಾರಿಸಿದ್ದು, ಅದು ಬಲ ಮೊಣಕೈಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಗುಂಡೇಟಿನಿಂದ ಮಾಹಿತಿ
ಕೂಡಲೇ ಆತನನ್ನು ಬಂಧಿಸಿ ಉಳಿದ ಅಪಹರಣಕಾರರ ಪತ್ತೆಗೆ ಆತನಿಂದಲೇ ಕರೆ ಮಾಡಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ತಂಗಬಾಲ ಹಾಗೂ ಪ್ರಶಾಂತ್ ಮಾಧನಾಯಕನಹಳ್ಳಿಯ ನೀಲಗಿರಿ ತೋಪೊಂದರಲ್ಲಿ ಅಪಹರಿಸಿದ ಹೇಮಂತ್ ಹಾಗೂ ಕೇಶವ್‌ರೆಡ್ಡಿಯನ್ನು ಇರಿಸಿಕೊಂಡಿರುವುದಾಗಿ ತಿಳಿದು ಬಂತು. ಕೂಡಲೇ ಮಾಧನಾಯಕನಹಳ್ಳಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಹಾಗೂ ದೊಡ್ಡಬಳ್ಳಾಪುರ ಇನ್ಸ್‌ಪೆಕ್ಟರ್ ರಾಘವೇಂದ್ರ ಅವರಿದ್ದ ತಂಡ ಸ್ಥಳಕ್ಕೆ ಧಾವಿಸಿ ಬಂಧಿಸಲು ಮುಂದಾಯಿತು. ದೂರದಲ್ಲಿದ್ದ ತಂಗಬಾಲ ಹಾಗೂ ಪ್ರಶಾಂತ್‌ನನ್ನು ಹಿಡಿಯಲು ಹೋದ ಮುಖ್ಯಪೇದೆ ಮುರಳೀಧರ್, ಮಧು ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿದಾಗ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾಗಿದ್ದಾರೆ.
ಗುಂಡಿಕ್ಕಿ ಸೆರೆ
ಈ ವೇಳೆ ಆತ್ಮರಕ್ಷಣೆಗಾಗಿ ಸತ್ಯನಾರಾಯಣ ಹಾಗೂ ಪ್ರಶಾಂತ್ ೩ ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ೨ ಗುಂಡು ತಂಗಬಾಲನ್‌ನ ಎರಡೂ ಕಾಲಿಗೆ ತಗುಲಿ ಕುಸಿದು ಬಿದ್ದರೆ, ಪ್ರಶಾಂತ್‌ನ ಎಡಗಾಲಿಗೆ ಗುಂಡು ತಗುಲಿದೆ. ಇಬ್ಬರನ್ನು ಬಂಧಿಸಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಹರಣಕಾರರ ವಶದಲ್ಲಿದ್ದ ಹೇಮಂತ್ ಹಾಗೂ ಕೇಶವ್‌ರೆಡ್ಡಿಯನ್ನು ರಕ್ಷಿಸಲಾಗಿದೆ. ಆರೋಪಿಗಳ ಚಿಕಿತ್ಸೆ ನಂತರ ವಿಚಾರಣೆ ನಡೆಸಿ, ಮಾಹಿತಿ ಪಡೆದು ಉಳಿದವರ ಬಂಧನಕ್ಕೆ ಶೋಧ ನಡೆಸಲಾಗುವುದು ಎಂದು ಶರತ್‌ಚಂದ್ರ ತಿಳಿಸಿದರು.
ಗುಂಡೇಟು ತಂದಿರುವ ತಂಗಬಾಲ ಗಾರೆ ಕೆಲಸ ಮಾಡುತ್ತಿದ್ದರೆ ಪ್ರಶಾಂತ್ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ೨೦೧೪ರಲ್ಲಿ ದಾಖಲಾಗಿದ್ದ ಅಪಹರಣ ಕೃತ್ಯವೊಂದರಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ನವೀನ್ ಇದೇ ಮೊದಲ ಬಾರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

kidnap Criminal Case Business man Bengaluru police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ