ಖಾಸಗಿ ಆಸ್ಪತ್ರೆ ಹಾಗೂ ಶಾಲಾ ಕಟ್ಟಡಗಳಿಗೆ ಕೊಕ್!

Karnataka Government

17-09-2019

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ನಷ್ಟದ ಬಾಬ್ತಿನಿಂದ ಖಾಸಗಿ ಆಸ್ಪತ್ರೆ ಹಾಗೂ ಶಾಲಾ ಕಟ್ಟಡಗಳಿಗೆ ಕೊಕ್ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದ್ದು ಇದರ ಪರಿಣಾಮವಾಗಿ ನಷ್ಟದ ಪ್ರಮಾಣವನ್ನು ಪರಿಷ್ಕರಿಸಿರುವ  ರಾಜ್ಯ ಸರ್ಕಾರ ಇದೀಗ ಅದರ ಪ್ರಮಾಣವನ್ನು 3000 ಕೋಟಿ ರೂಗಳಷ್ಟು ಕಡಿಮೆ ಮಾಡಿದೆ.

ಈ ಮುನ್ನ ಪ್ರವಾಹದಿಂದಾದ ನಷ್ಟದ ಪ್ರಮಾಣ 38,485 ಕೋಟಿ ರೂ ಎಂದು ಕೇಂದ್ರಕ್ಕೆ ವರದಿ ನೀಡಿದ್ದ ರಾಜ್ಯ ಸರ್ಕಾರ ಇದೀಗ ಬದಲಾದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ 35,160 ಕೋಟಿ ರೂ ಎಂದು ವರದಿಯನ್ನು ಪರಿಷ್ಕರಿಸಿದೆ. ಹೀಗೆ ಪರಿಷ್ಕರಿಸಿದ ವರದಿಯನ್ನು ಬುಧವಾರ ದೆಹಲಿಗೆ ಧಾವಿಸಲಿರುವ ಅಧಿಕಾರಿಗಳ ತಂಡ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ.

ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ತಿಳಿಸಿದರಲ್ಲದೆ, ಪ್ರವಾಹದಿಂದಾದ ಹಾನಿ ಹಾಗೂ ಬರಗಾಲದಿಂದ ಐದು ಜಿಲ್ಲೆಗಳಲ್ಲಿ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರಕ್ಕೆ ವರದಿ ನೀಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಒಂದು ಬಿಲಿಯನ್ ಸಾಲ ಘೋಷಿಸುತ್ತಾರೆ. ನೇಪಾಳದ ಭೂಕಂಪಕ್ಕೆ ಪ್ರತಿಯಾಗಿ ನೆರವು ನೀಡುತ್ತಾರೆ. ಆದರೆ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪೀಡಿತ ಪ್ರದೇಶಗಳ ಸಂಕಷ್ಟಕ್ಕೆ ಸ್ಪಂದಿಸದಿರುವುದು ನಿಮಗೆ ಮುಜುಗರ ತರಲಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಕೇಂದ್ರ ಸರ್ಕಾರ ನಮಗೆ ಪರಿಹಾರ ನೀಡುವುದಿಲ್ಲ ಎಂಬ ಭಾವನೆ ಬೇಡ. ಈಗಾಗಲೇ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಹೋಗಿದೆ. ಹಾಗೆಯೇ ನಷ್ಟಕ್ಕೆ ಸಂಭವಿಸಿದಂತೆ ಸ್ಪಷ್ಟೀಕರಣ ಕೇಳುತ್ತಿದೆ ಎಂದು ಹೇಳಿದರು.

ಬರಪರಿಹಾರ ಕಾಮಗಾರಿಗೆ ರಾಜ್ಯ ಸರ್ಕಾರ 431 ಕೋಟಿ ರೂಪಾಯಿ ನೀಡಿದೆ. ಸಂತ್ರಸ್ತರಿಗೆ ತಕ್ಷಣ ಹತ್ತು ಸಾವಿರ ರೂಗಳಂತೆ ಪರಿಹಾರ ನೀಡಲಾಗಿದೆ. ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ನೀಡಲಾಗಿದೆ. ಹಾಗೆಯೇ ಹಾನಿಗೊಳಗಾದ, ಬಿದ್ದ ಮನೆಗಳಿಗೆ ಹಣ ಕೊಡಲು ಕೇಂದ್ರದ ಪ್ರಕೃತಿ ವಿಕೋಪ ನಿಧಿಯಡಿ ಬರುವ ನೆರವನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ಸದ್ಯಕ್ಕೆ ಐವತ್ತು ಸಾವಿರ ಮನೆಗಳು ಪ್ರವಾಹದಿಂದ ಹಾನಿಗೊಳಗಾದ ಕುರಿತು ಮಾಹಿತಿ ಇದೆ. ಸಂತ್ರಸ್ತರು ಇದಕ್ಕೆ ಪೂರಕವಾಗಿ ಅಗತ್ಯದ ದಾಖಲೆಗಳನ್ನು ಒದಗಿಸಿದರೆ ತಕ್ಷಣವೇ ಒಂದು ಲಕ್ಷ ರೂ ನೀಡಲಾಗುವುದು ಎಂದರು.

ಪರಿಹಾರ ಕಾರ್ಯ ಸಮರ್ಪಕವಾಗಿಲ್ಲ ಎಂದು ಯಾರೂ ದೂರು ನೀಡುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಕೆಲಸವನ್ನು ಮುಂದುವರಿಸುವುದಾಗಿ ತಿಳಿಸಿದರು.

ಆಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಿ ಸರ್ಕಾರದ ಬೊಕ್ಕಸಕ್ಕೆ ಹದಿನೈದು ಸಾವಿರ ಕೋಟಿ ರೂಗಳಿಗೂ ಹೆಚ್ಚಿನ ಆದಾಯ ತರುವ ಹಿಂದಿನ ಬಿಜೆಪಿ ಸರ್ಕಾರದ ನಿರ್ಣಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ಅದರ ಸಧ್ಯದ ಸ್ಥಿತಿ ಗತಿಯೇನು?ಎಂಬ ಕುರಿತು ಮಾಹಿತಿ ನೀಡುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಆದೇಶ ನೀಡಿದರು.

ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ನಿಮಗೆ ಕಂದಾಯ ಖಾತೆ ನೀಡಿರುವುದು ಅಸಮಾಧಾನ ತಂದಿದೆಯೇ?ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಈ ಹಿಂದೆ ಹುಚ್ಚಮಾಸ್ತಿಗೌಡ,ಶ್ರೀಕಂಠಯ್ಯ ಅವರಂತಹ ಹಿರಿಯರು ಈ ಖಾತೆಯನ್ನು ನಿರ್ವಹಿಸಿದ್ದಾರೆ ಎಂದರು.

ಯಾರಿಗೆ ಯಾವ ಖಾತೆ ನೀಡಬೇಕು? ಉಪಮುಖ್ಯಮಂತ್ರಿ ಸ್ಥಾನ, ಮಂತ್ರಿ ಸ್ಥಾನ ನೀಡಬೇಕು? ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ. ನಾವು ನಮಗೇನು ಜವಾಬ್ದಾರಿ ಸಿಕ್ಕಿದೆಯೋ? ಅದನ್ನು ನಿರ್ವಹಿಸಬೇಕು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

BS Yediyurappa Flood Central Government PM Modi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ