ಇದೇ ನೋಡಿ ಮೋದಿ ಕಥೆ!

Narendra Modi

17-09-2019

80ರ ದಶಕದ ಮಧ್ಯಭಾಗದವರೆಗೆ ಇಡೀ ದೇಶಕ್ಕೆ ಗೊತ್ತಿದ್ದ ಒಂದು ಹೆಸರು ಅಂದ್ರೆ ಇಂದಿರಾ ಗಾಂಧಿ. ಆಕೆ, ನಮ್ಮ ದೇಶ ಆಳುತ್ತಿರುವ ಒಬ್ಬ ಗಟ್ಟಿಗಿತ್ತಿ ಹೆಂಗಸು ಅನ್ನುವುದು ಜನಜನಿತವಾಗಿತ್ತು. ಇಂದಿರಾ ಗಾಂಧಿ ಹುತಾತ್ಮರಾದ 35 ವರ್ಷದ ಬಳಿಕ, ಅವರನ್ನೂ ಮೀರಿಸುವ ರೀತಿಯಲ್ಲಿ ಇಡೀ ದೇಶದ 130 ಕೋಟಿ ಜನರ ಬದುಕಿನ ಮೇಲೆ ಪ್ರಭಾವ ಬೀರುತ್ತಿರುವ ವ್ಯಕ್ತಿ ನರೇಂದ್ರ ಮೋದಿ. 2014ರಲ್ಲಿ ಮೊದಲ ಬಾರಿ ದೇಶದ ಪ್ರಧಾನಿಯಾಗಿ, ಆ ನಂತರ 2019ರಲ್ಲಿ ಮತ್ತೊಮ್ಮೆ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಮೋದಿಯವರನ್ನು ದೇಶದ ಜನರು, ಇನ್ನೂ ಕೂಡ ಕುತೂಹಲ, ವಿಸ್ಮಯ ಮತ್ತು ಒಂದಿಷ್ಟು ಸಂಶಯದಿಂದಲೇ ನೋಡುತ್ತಿದ್ದಾರೆ.

ಇದೇ ಸೆಪ್ಟಂಬರ್ 17, ಪ್ರಧಾನಿ ನರೇಂದ್ರ ಮೋದಿ ಹುಟ್ಟಿದ ದಿನ. ಮೋದಿಯವರು 69ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ಮೋದಿ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವಾರು ವಿಚಾರಗಳೂ ಸೇರಿದಂತೆ, ಈವರೆಗಿನ ಅವರ ಬದುಕು, ಸಾಧನೆ, ವಿವಾದ ಇತ್ಯಾದಿಗಳೆಲ್ಲದರ ಬಗ್ಗೆ ಒಂದು ಸವಿಸ್ತಾರ ಚಿತ್ರಣ.

ಮೋದಿಯವರ ಬಾಲ್ಯ.

ನಿಮಗೆ ಗೊತ್ತಿರುವ ಹಾಗೆ ನರೇಂದ್ರ ಮೋದಿ ಹುಟ್ಟಿದ್ದು ಗುಜರಾತ್ ರಾಜ್ಯದ ಮೆಹ್ಸಾನ ಜಿಲ್ಲೆಯ ಸಣ್ಣ ಪಟ್ಟಣ ವಾಡ್‌ನಗರದಲ್ಲಿ. ಈ ಊರಿಗೆ ಸುಮಾರು 2500 ವರ್ಷಗಳ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇದೆ. ಒಂದುಕಾಲಕ್ಕೆ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವಾಗಿ ವಿಜೃಂಭಿಸುತ್ತಿದ್ದ ವಾಡ್‌ ನಗರದಲ್ಲಿ, 10 ಸಾವಿರ ಬೌದ್ಧ ಭಿಕ್ಷುಗಳು ನೆಲೆಸಿದ್ದರು. ವಾಡ್‌ ನಗರ, ಗುಜರಾತಿನ ದಂತಕತೆಯಾಗಿರುವ ತಾನಾ ಮತ್ತು ರಿರಿ ಎಂಬ ಇಬ್ಬರು ಹಾಡುಗಾರ್ತಿ ಸೋದರಿಯರ ಹುಟ್ಟೂರು. ಕ್ರಿಸ್ತಶಕ 1565ರ ಸುಮಾರಿನಲ್ಲಿ ಜೀವಿಸಿದ್ದ ಇವರಿಬ್ಬರು, ರಾಗ್ ಮಲ್ಹಾರ್ ನಲ್ಲಿ ಹಾಡಿ, ಮತ್ತೊಬ್ಬ ದಂತಕತೆ ಅಕ್ಬರ್ ದೊರೆಯ ಆಸ್ಥಾನದ ನವರತ್ನಗಳಲ್ಲಿ ಒಬ್ಬನಾಗಿದ್ದ ತಾನ್ ಸೇನ್‌ ನನ್ನು ಪರವಶಗೊಳಿಸಿದ್ದರಂತೆ. ಚೀನಾ ದೇಶದ ಯಾತ್ರಿಕ ಹ್ಯುಯೆನ್ ತ್ಸಾಂಗ್ ಕೂಡ ವಾಡ್‌ ನಗರಕ್ಕೆ ಭೇಟಿದ್ದರ ಬಗ್ಗೆ ಉಲ್ಲೇಖಗಳಿವೆ.

ಇಂಥ ವಾಡ್‌ನಗರದಲ್ಲಿ, ದೇಶ ಸ್ವಾತಂತ್ರ್ಯ ಪಡೆದ ಮೂರು ವರ್ಷಗಳ ಬಳಿಕ ಹುಟ್ಟಿದ ನರೇಂದ್ರ ಮೋದಿಯ ಜನ್ಮ ದಿನಾಂಕ 17ನೇ ಸೆಪ್ಟಂಬರ್ 1950. ಮೋದಿಯ ತಂದೆ ದಾಮೋದರ್ ದಾಸ್ ಮೋದಿ, ತಾಯಿ ನಾವೆಲ್ಲರೂ ಒಮ್ಮೊಮ್ಮೆ ಟಿವಿಯಲ್ಲಿ ಕಾಣುವ ಹಿರಿಯ ಜೀವ, ಹೀರಾ ಬಾ. ಈ ದಂಪತಿಗೆ ಒಟ್ಟು 6 ಮಕ್ಕಳು. ನರೇಂದ್ರ ಮೋದಿ ಮೂರನೇ ಮಗ. ಸೋಮಾ ಮೋದಿ ಮತ್ತು ಅಮೃತ್ ಮೋದಿ ಅಣ್ಣಂದಿರು. ಪ್ರಹ್ಲಾದ್ ಮೋದಿ ಮತ್ತು ಪಂಕಜ್ ಮೋದಿ ತಮ್ಮಂದಿರು, ವಾಸಂತಿ, ಮೋದಿಯ ತಂಗಿ.

ಮೋದಿಯ ಕುಟುಂಬ ತೀರಾ ಸಾಧಾರಣ ಹಿನ್ನೆಲೆಯದ್ದಾಗಿದ್ದು, ಬಡತನ ಹಾಸುಹೊಕ್ಕಾಗಿತ್ತು. ತಾಯಿ ಹೀರಾ ಬಾ ಅನುಕೂಲಸ್ಥರ ಮನೆಯಲ್ಲಿ ಪಾತ್ರೆ ಪಗಡಿ ತೊಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಕೆಲಸ ಮಾಡುತ್ತಿದ್ದರು. ಮೋದಿಯ ತಂದೆ ಜೀವನೋಪಾಯಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದರು. ನಾನೂ ಕೂಡ ಅಪ್ಪನಿಗೆ ನೆರವಾಗುತ್ತಿದ್ದೆ ಎಂದು ಮೋದಿಯವರು ಹೇಳಿಕೊಳ್ಳುವುದನ್ನು ನೀವು ಕೇಳಿದ್ದೀರಿ. ಈ ವಿಚಾರವನ್ನು ಟೀಕೆ ಮಾಡಲು ಹೊರಟ ಮಣಿಶಂಕರ್ ಅಯ್ಯರ್, ಎಂಬ ಕಾಂಗ್ರೆಸ್ ಮುಖಂಡನ ಮಾತು ಮತ್ತು ಅದನ್ನೇ ಚುನಾವಣಾ ವಿಷಯವನ್ನಾಗಿಸಿಕೊಂಡು ಚಾಯ್ ಪೆ ಚರ್ಚಾ ನಡೆಸಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮೋದಿ, ಪ್ರಧಾನಿಯಾಗಿದ್ದು ಈಗ ಇತಿಹಾಸ.  

ಮನೆಯಲ್ಲಿ ಬಡತನವಿದ್ದರೂ, ಬಾಲಕ ಮೋದಿಗೆ ಉಡುಗೆ ತೊಡುಗೆ ಅಂದರೆ ತುಂಬಾ ಇಷ್ಟ. ಇಸ್ತ್ರಿ ಪೆಟ್ಟಿಗೆ ಇಲ್ಲದ ಮನೆಯಲ್ಲಿ, ತಾಮ್ರದ ಚೊಂಬಿಗೆ ಬಿಸಿನೀರು ಹಾಕಿ ಬಟ್ಟೆ ಐರ್ನ್ ಮಾಡಿಕೊಳ್ಳುತ್ತಿದ್ದರು. ತಮ್ಮ ಚಿಕ್ಕಪ್ಪ ತಂದುಕೊಟ್ಟಿದ್ದ ಕ್ಯಾನ್‌ ವಾಸ್ ಶೂಗಳಿಗೆ, ಶಾಲೆಯಲ್ಲಿ ಬಳಸಿ ಬಿಸಾಡುತ್ತಿದ್ದ ಸೀಮೆಸುಣ್ಣದ ತುಂಡುಗಳನ್ನು ತಂದು ಪುಡಿಮಾಡಿ ಪಾಲಿಶ್ ಮಾಡಿಕೊಳ್ಳುತ್ತಿದ್ದರು.

ಬಾಲ್ಯದ ಕಷ್ಟಕರ ದಿನಗಳು ಮೋದಿಯ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದವು. ಓದಿನಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದ ನರೇಂದ್ರ, ಗ್ರಂಥಾಲಯದಲ್ಲಿ ಸಾಕಷ್ಟು ಹೊತ್ತು ಕಳೆಯುತ್ತಿದ್ದ. ಶಾಲಾ ದಿನಗಳಿಂದಲೂ ಚರ್ಚಾಪಟುವಾಗಿದ್ದ ಮೋದಿ, ಆಟೋಟಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಈಜುಹೊಡೆಯುವುದರಲ್ಲಿ ಪಳಗಿದ್ದ ಬಾಲಕ ನರೇಂದ್ರ, ವಾಡ್‌ನಗರದ ಶರ್ಮಿಷ್ಠಾ ಸರೋವರದಿಂದ ಮೊಸಳೆ ಮರಿಯೊಂದನ್ನು ಹಿಡಿದು ಮನೆಗೆ ತಂದಿದ್ದನಂತೆ.

ಮೋದಿ ಮನೆಯ ಪರಿಸರದಲ್ಲಿ ಮುಸ್ಲಿಮ್ ಕುಟುಂಬಗಳೂ ಇದ್ದ ಕಾರಣ, ಅವರಿಗೆ ಹಲವಾರು ಮುಸ್ಲಿಮ್ ಗೆಳೆಯರೂ ಇದ್ದರು. ಬಾಲ್ಯದಿಂದಲೇ ಸೇವಾ ಮನೋಭಾವ ರೂಢಿಸಿಕೊಂಡಿದ್ದ ಮೋದಿ, ತಮ್ಮ 9ನೆಯ ವಯಸ್ಸಿನಲ್ಲೇ ತಾಪಿ ನದಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಸ್ನೇಹಿತರೊಂದಿಗೆ ಸೇರಿ ತಿಂಡಿತಿನಿಸು ಮಾರಿ, ಅದರಿಂದ ಬಂದ ಹಣವನ್ನು ಪರಿಹಾರನಿಧಿಗೆ ಕೊಟ್ಟಿದ್ದರು. ಆಗಿನ ಬಾಂಬೆ ಪ್ರಾಂತ್ಯದಿಂದ ಪ್ರತ್ಯೇಕ ಗುಜರಾತ್ ರಚನೆಗಾಗಿ ನಡೆಯುತ್ತಿದ್ದ ಹೋರಾಟದಲ್ಲೂ ಪಾಲ್ಗೊಂಡಿದ್ದ 10ರ ವಯಸ್ಸಿನ ಬಾಲಕ ಮೋದಿ, 1960ರ ಮೇ1 ರಂದು ಗುಜರಾತ್ ರಾಜ್ಯ ಉದಯವಾದಾಗ ಘೋಷಣೆ ಕೂಗುತ್ತಾ ಸಿಹಿ ಹಂಚಿ, ಖುಷಿಪಟ್ಟಿದ್ದ.

1965ರ ಭಾರತ-ಪಾಕಿಸ್ತಾನ್ ಯುದ್ಧದ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯೋಧರಿಗೆ, ವಾಡ್‌ನಗರ ರೈಲು ನಿಲ್ದಾಣದಲ್ಲಿ ಚಹಾ ಕೊಡುತ್ತಿದ್ದ ಬಾಲಕ ಮೋದಿ, ತನ್ನದೇ ಆದ ರೀತಿಯಲ್ಲಿ ದೇಶ ಸೇವೆ ಆರಂಭಿಸಿದ್ದ. ಸೇನೆ ಸೇರಬೇಕು ಎಂಬುದು ಮೋದಿಯ ಕನಸಾಗಿತ್ತು. ಆದರೆ, ಕುಟುಂಬ ಅದಕ್ಕೆ ಒಪ್ಪಿರಲಿಲ್ಲ. ಹೀಗಿದ್ದರೂ ಕೂಡ, ಜಾಮ್‌ ನಗರದಲ್ಲಿದ್ದ ಸೈನಿಕ ಶಾಲೆಗೆ ಸೇರಬಯಸಿದ್ದ ಮೋದಿಗೆ, ಅವಕಾಶ ತಪ್ಪಿಸಿದ್ದು ಫೀಸುಕಟ್ಟಲು ಹಣವಿಲ್ಲದ ಕಾರಣವೇ ಹೊರತು ಮನೆಯವರಲ್ಲ.

1968ರಲ್ಲಿ ಎಸ್‌ಎಸ್ಎಲ್‌ಸಿ ಮುಗಿಸಿದ ಬಳಿಕ ಯಾವುದೋ ಒಂದು ಸೆಳೆತಕ್ಕೆ ಸಿಲುಕಿದಂಥ ಮನಸ್ಥಿತಿಯಲ್ಲಿದ್ದ ನರೇಂದ್ರ, ಮನೆಬಿಟ್ಟು ಹೊರಡಲು ನಿರ್ಧರಿಸಿದ. ಇದು, ಮನೆಯವರಿಗೆ ಆಘಾತ ತಂದರೂ ತನ್ನ ನಿರ್ಧಾರ ಬದಲಿಸಲಿಲ್ಲ. ಮನೆಬಿಟ್ಟ ಮೋದಿ, ರಾಜ್‌ಕೋಟ್‌ನ ರಾಮಕೃಷ್ಣ ಆಶ್ರಮ ಮತ್ತು ಪಶ್ಚಿಮ ಬಂಗಾಳದ ಬೇಲೂರು ಮಠಗಳಲ್ಲೂ ಕೆಲ ಸಮಯ ಇದ್ದರು. ಆಮೇಲೆ ಹಿಮಾಲಯದ ತಪ್ಪಲಿನ ಹೃಷಿಕೇಶ ಹಾಗೂ ಗರುಡಚೆಟ್ಟಿ ಅನ್ನುವ ಸ್ಥಳದಲ್ಲಿ ಸಾಧು ಸಂತರ ಜೊತೆ ಸಾಕಷ್ಟು ದಿನ ಕಾಲ ಕಳೆದರು.

ಸುಮಾರು ಎರಡು ವರ್ಷ ದೇಶ ಸುತ್ತಿದ ಮೋದಿ, ವಾಡ್‌ ನಗರದ ಮನೆಗೆ ವಾಪಸ್ ಬಂದರೂ ಕೂಡ. ಅಲ್ಲಿದ್ದದ್ದು ಕೇವಲ ಎರಡೇ ವಾರ. ಆ ಹೊತ್ತಿನಲ್ಲಿ ನಾನು ಏನಾದರೂ ಸಾಧನೆ ಮಾಡಬೇಕು ಎಂದು ಮೋದಿಗೆ ಅನ್ನಿಸುತ್ತಿದ್ದರೂ ಏನು ಮಾಡಬೇಕು ಅನ್ನುವುದು ಗೊತ್ತಿರಲಿಲ್ಲವಂತೆ. ಮತ್ತೆ ಮನೆ ತೊರೆದು ಹೊರಟ ಮೋದಿ,  ಬಂದುತಲುಪಿದ್ದು ಅಹಮದಾಬಾದ್‌ ನಲ್ಲಿನ ಆರೆಸ್ಸೆಸ್ ಕಚೇರಿಗೆ. ಮೋದಿಯ ಎಂಟನೇ  ವಯಸ್ಸಿನಿಂದಲೇ ಆರೆಸ್ಸೆಸ್ ಸಂಬಂಧ ಆರಂಭವಾಗಿತ್ತು. ವಾಡ್‌ನಗರದಲ್ಲಿ ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದ ನರೇಂದ್ರ ಮೋದಿಯ ಮೇಲೆ ಪ್ರಭಾವ ಬೀರಿದ್ದು ವಕೀಲ್ ಸಾಹೇಬ್ ಎಂದು ಹೆಸರಾಗಿದ್ದ ಲಕ್ಷ್ಮಣ್ ರಾವ್ ಇನಾಮ್‌ದಾರ್ ಎಂಬ ಹಿರಿಯ ಪ್ರಚಾರಕರು.

ಊರುಬಿಟ್ಟು ಅಹಮದಾಬಾದ್ ನಂಥ ದೊಡ್ಡ ನಗರಕ್ಕೆ ಬಂದ ಇಪ್ಪತ್ತು ವರ್ಷದ ತರುಣ ನರೇಂದ್ರ ಮೋದಿ, ಆರೆಸ್ಸೆಸ್ ಎಂದು ಪ್ರಚಲಿತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ತನ್ನನ್ನು ಸಮರ್ಪಿಸಿಕೊಂಡ. ಆರೆಸ್ಸೆಸ್ ಕಚೇರಿಯಲ್ಲಿ ಕಸಗುಡಿಸುವುದು, ಹಿರಿಯರಿಗೆ ಚಹಾ ಮತ್ತು ತಿಂಡಿ ಮಾಡಿಕೊಡುವುದು, ಅವರ ಬಟ್ಟೆ ಒಗೆದುಕೊಡುವುದು ಇತ್ಯಾದಿಗಳೇ ಮೋದಿಯ ಆರಂಭದ ದಿನಗಳ ಕೆಲಸವಾಗಿತ್ತು. 1971ರ ವೇಳೆಗೆ ಪೂರ್ಣ ಪ್ರಮಾಣದ ಪ್ರಚಾರಕರಾದ ಮೋದಿ, ಕಚೇರಿಗೆ ಬರುವ ಅಂಚೆ ನಿರ್ವಹಿಸುವುದು, ಪತ್ರಗಳಿಗೆ ಉತ್ತರ ಬರೆಯುವುದು ಮಾಡುತ್ತಿದ್ದರು. ಆ ನಂತರದ ದಿನಗಳಲ್ಲಿ ಸಂಘ ಮತ್ತು ಪಕ್ಷದ ಕೆಲಸಕ್ಕಾಗಿ ಸಾಕಷ್ಟು ತಿರುಗಾಡುತ್ತಿದ್ದ ಮೋದಿ, ಸ್ಕೂಟರ್, ಬೈಕ್ ಮತ್ತು ಕಾರು ಓಡಿಸುವುದನ್ನೂ ಕಲಿತರು.

ಆ ಬಳಿಕ 1971ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ವಿರೋಧಿಸಿ ಗುಜರಾತ್‌ ನಲ್ಲಿ ಆರಂಭವಾದ ನವನಿರ್ಮಾಣ ಚಳವಳಿಯಲ್ಲೂ ಮೋದಿ ಸಕ್ರಿಯ ಪಾತ್ರ ವಹಿಸಿದ್ದರು. ಇದಾದ ಕೆಲವೇ ವರ್ಷಗಳ ಬಳಿಕ, 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದರು. ವಾಜಪೇಯಿ, ಅಡ್ವಾಣಿ, ಜಾರ್ಜ್ ಫರ್ನಾಂಡಿಸ್ ಸೇರಿದಂತೆ ವಿರೋಧ ಪಕ್ಷದ ಪ್ರಮುಖ ನಾಯಕರುಗಳನ್ನೆಲ್ಲ ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಆ  ಸಂದರ್ಭದಲ್ಲಿ, ಸಿಖ್ ಸರ್ದಾರನಂತೆ, ವೃದ್ಧನಂತೆ ವೇಷ ಧರಿಸಿಕೊಂಡು ಪೊಲೀಸರ ಕಣ್ಣಿಗೆ ಮಣ್ಣೆರೆಚಿದ್ದ ಮೋದಿ, ತುರ್ತುಪರಿಸ್ಥಿತಿ ವಿರೋಧಿಸುವ ಕರಪತ್ರ ಮುದ್ರಣ, ಹಂಚಿಕೆ ಮಾಡಿದ್ದರು. ತುರ್ತುಪರಿಸ್ಥಿತಿಯ ದಿನಗಳ ಬಗೆಗಿನ ತಮ್ಮ ಅನುಭವಗಳ ಬಗ್ಗೆ ಆಪತ್ ಕಾಲ್‌ ಮೆ ಗುಜರಾತ್ ಎಂಬ ಪುಸ್ತಕವನ್ನೂ ಮೋದಿ ಬರೆದಿದ್ದಾರೆ.

ತುರ್ತುಪರಿಸ್ಥಿತಿ ಬಳಿಕ 1977ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸರ್ಕಾರ ಅಧಿಕಾರ ಕಳೆದುಕೊಂಡು ಜನತಾಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಿತು. ಆಗ ಜನಸಂಘದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಕೇಂದ್ರ ಸಚಿವರಾದರು. ಆ ನಂತರದ ದಿನಗಳಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಮೋದಿಯ ಪಾತ್ರ ಪ್ರಮುಖವಾಗತೊಡಗಿತು.

ರಾಜಕಾರಣಿ ಮೋದಿ

1987ರಲ್ಲಿ ಮೋದಿಯನ್ನು ಗುಜರಾತ್ ಬಿಜೆಪಿ ಕಾರ್ಯದರ್ಶಿ ಮಾಡಲಾಯಿತು. 1990ರಲ್ಲಿ ಎಲ್‌.ಕೆ.ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯೆ ವರೆಗಿನ ರಥಯಾತ್ರೆ ಸಂಘಟಿಸುವಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ ಮೋದಿ, ಅಡ್ವಾಣಿಗೆ ಹತ್ತಿರವಾದರು. ಆ ಬಳಿಕ, 1991ರಲ್ಲಿ ಮುರಳಿ ಮನೋಹರ್ ಜೋಷಿಯವರು ಕೈಗೊಂಡ ಕನ್ಯಾಕುಮಾರಿಯಿಂದ-ಕಾಶ್ಮೀರದವರೆಗಿನ ಏಕತಾ ಯಾತ್ರೆಗೂ ಮೋದಿಯೇ ಸಾರಥಿ. ಆ ಸಂದರ್ಭದಲ್ಲೇ ಮೋದಿ, ಕಾಶ್ಮೀರದ ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು.

1990ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲುಣಿಸಿದ ಬಿಜೆಪಿ, 67 ಸ್ಥಾನಗಳಿಸಿ, ಚಿಮನ್ ಭಾಯಿ ಪಟೇಲ್ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿತು. ಆ ಮೂಲಕ ಗುಜರಾತ್‌ ರಾಜ್ಯದಲ್ಲಿ ಗಟ್ಟಿಯಾಗಿ ನೆಲೆಯೂರಿತು. ಬಳಿಕ 1995ರ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಕೇಶೂಭಾಯ್ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಮೋದಿ ಪಾತ್ರ ಮಹತ್ವದ್ದು.

ಆದರೆ, ಗುಜರಾತ್ ಸರ್ಕಾರದಲ್ಲಿ ಹಸ್ತಕ್ಷೇಪ ಮಿತಿಮೀರುತ್ತಿದೆ, ಮೋದಿ ಸೂಪರ್ ಸಿಎಂ ರೀತಿ ಆಡುತ್ತಿದ್ದಾರೆ ಎಂಬ ಆರೋಪದ ಕಾರಣಕ್ಕಾಗಿ ಮೋದಿಯನ್ನು 1995ರಿಂದ 2001ರ ವರೆಗೆ ಗುಜರಾತ್ ನಿಂದ ದೂರವಿಡಲಾಗಿತ್ತು. ಆ ಸಂದರ್ಭದಲ್ಲಿ ಮೋದಿಯ ಕಣ್ಣು ಕಿವಿಯಾಗಿದ್ದ ಅಮಿತ್ ಷಾ, ಗುಜರಾತ್‌ ರಾಜಕಾರಣದ ಎಲ್ಲ ಬೆಳವಣಿಗೆಗಳನ್ನು ಮೋದಿಗೆ ತಿಳಿಸುತ್ತಿದ್ದರು. ಮೋದಿ, ಗುಜರಾತ್ ಸಿಎಂ ಆದ ಬಳಿಕ, ತಮ್ಮ ರಾಜಕೀಯ ಎದುರಾಳಿಗಳನ್ನು ಸದ್ದಿಲ್ಲದೆ ಬದಿಗೆ ಸರಿಸುವ ಕೆಲಸದಲ್ಲೂ ಮೋದಿಗೆ ಸಾಥ್ ನೀಡಿದ್ದೂ ಕೂಡ ಇದೇ ಅಮಿತ್ ಷಾ.

1996ರಲ್ಲಿ ಮೋದಿಯವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆ ಬಳಿಕ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾದ ಮೋದಿ, 1998 ಮತ್ತು 1999ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಲ್ಲಿ  ಪ್ರಮುಖ ಪಾತ್ರವಹಿಸಿದರು.

ಆದರೆ, ಇತ್ತ ಬಿಜೆಪಿಯ ಗುಜರಾತ್ ಘಟಕದಲ್ಲಿನ ಒಳ ಜಗಳದ ಕಾರಣದಿಂದಾಗಿ  1996ರಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿತು. 1998ರ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಆದರೆ, 2001ರ ಜನವರಿ 26ರಂದು ಗುಜರಾತಿನ ಭುಜ್  ಪ್ರದೇಶದಲ್ಲಿ ಸಂಭವಿಸಿದ ತೀವ್ರ ಪ್ರಮಾಣದ ಭೂಕಂಪ ರಾಜ್ಯವನ್ನು ತತ್ತರಿಸುವಂತೆ ಮಾಡಿತ್ತು. ಸೂಕ್ತ ಮತ್ತು ಸಮರ್ಪಕ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ಕೇಶೂಭಾಯ್ ಪಟೇಲ್ ಸರ್ಕಾರ ಅಸಮರ್ಥವಾಗಿತ್ತು, ಕೇಶೂ ಭಾಯ್ ಆರೋಗ್ಯವೂ ಕೈಕೊಟ್ಟಿತ್ತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಬಿಜೆಪಿ ವರಿಷ್ಠರು, ನರೇಂದ್ರ ಮೋದಿಯನ್ನು ಮುಖ್ಯಮಂತ್ರಿ ಮಾಡುವ ತೀರ್ಮಾನ ಕೈಗೊಂಡರು. 2001ರ ಅಕ್ಟೋಬರ್ 7ರಂದು ಮುಖ್ಯಮಂತ್ರಿಯಾಗಿ ಮೋದಿ ಅಧಿಕಾರ ವಹಿಸಿಕೊಂಡರು. ಒಂದುದಿನ ತಾನು ಮುಖ್ಯಮಂತ್ರಿಯಾಗುತ್ತೇನೆ ಎಂದು ಕನಸಿನಲ್ಲೂ ಎಣಿಸಿರದ ಮೋದಿಗೆ ಇದು ಬಯಸದೇ ಬಂದ ಭಾಗ್ಯವಾಗಿತ್ತು.

ಆದರೆ, ಮೋದಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳ ಬಳಿಕ ನಡೆದ ಒಂದು ಘಟನೆ ಗುಜರಾತ್ ಮಾತ್ರವಲ್ಲ, ಇಡೀ ದೇಶವನ್ನೇ ಆಘಾತಕ್ಕೀಡುಮಾಡಿತ್ತು.  2002ರ ಫೆಬ್ರವರಿ 27ರಂದು ಗೋದ್ರಾ ರೈಲು ನಿಲ್ದಾಣದ ಹೊರಭಾಗದಲ್ಲಿ ಚಲಿಸುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಒಂದು ಬೋಗಿ ಹೊತ್ತಿ ಉರಿಯಿತು. ಅದರಲ್ಲಿ ಪ್ರಯಾಣಿಸುತ್ತಿದ್ದ   58 ಜನರು ಸುಟ್ಟು ಭಸ್ಮವಾದರು. ಇವರೆಲ್ಲರೂ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರಾಗಿದ್ದರು. ಆ ನಂತರ ಗುಜರಾತ್ ಬಂದ್‌ ಕರೆ ಕೊಡಲಾಯಿತು. ಬಂದ್‌ ವೇಳೆ, ರಾಜ್ಯದಲ್ಲಿ ವ್ಯಾಪಕ ಗಲಭೆಗಳು ನಡೆದವು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ನೂರಾರು ಜನ ಕೊಲ್ಲಲ್ಪಟ್ಟರು, ಆಸ್ತಿಪಾಸ್ತಿಗೆ ಬೆಂಕಿ ಹಚ್ಚಲಾಯಿತು. ಈ ಗಲಭೆಗಳನ್ನು ನಿಯಂತ್ರಿಸಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ, ಮೋದಿ ವಿಳಂಬ ನೀತಿ ಅನುಸರಿಸಿದರು ಅನ್ನುವ ಬಲವಾದ ಆರೋಪ ಕೇಳಿಬಂತು.

ಗಲಭೆ ಬಳಿಕ, ಗುಜರಾತ್‌ ಗೆ ಭೇಟಿ ನೀಡಿದ ಅಂದಿನ ಪ್ರಧಾನಿ ವಾಜಪೇಯಿ, ಈ ಘಟನೆ ಭಾರತದ ಮೇಲಿನ ಕಪ್ಪುಚುಕ್ಕೆ ಎಂದರು. ಮುಖ್ಯಮಂತ್ರಿಯಾದವನು ರಾಜಧರ್ಮ ಪಾಲಿಸಬೇಕು ಎಂದು ಮೋದಿಗೆ ಸಲಹೆ ನೀಡಿದರು. ಆದರೆ, ಈ ಗಲಭೆಯ ವ್ಯಾಪಕತೆ ಮತ್ತು ಸಾವು ನೋವುಗಳನ್ನು ತಿಳಿದ ವಾಜಪೇಯಿ, ಮೋದಿಯವರನ್ನು ಸಿಎಂ ಸ್ಥಾನದಿಂದ ತೆಗೆಯಬೇಕು ಎಂದು ಮನಸ್ಸು ಮಾಡಿದ್ದರು.

ಆದರೆ, ಲಾಲ್ ಕೃಷ್ಣ ಅಡ್ವಾಣಿ ತಮ್ಮ ಶಿಷ್ಯ ಮೋದಿಪರ ಗಟ್ಟಿಯಾಗಿ ನಿಂತರು. ಇದರಿಂದಾಗಿ, ಸಿಎಂ ಆಗಿ ಉಳಿದ ಮೋದಿ, ಗುರು ಅಡ್ವಾಣಿಯಿಂದ ಕಲಿತ ಪಟ್ಟುಗಳನ್ನು ಬಳಸುತ್ತಾ ಬಿಜೆಪಿಯಲ್ಲಿ ಮೇಲೇರುತ್ತಾ ಬಂದರು. ಒಂದುವೇಳೆ, ಅಂದು ಮೋದಿಯನ್ನು ಕೆಳಗಿಳಿಸುವಲ್ಲಿ ವಾಜಪೇಯಿ ಯಶಸ್ವಿಯಾಗಿದ್ದಲ್ಲಿ, ಭಾರತದ ರಾಜಕೀಯ ಇತಿಹಾಸ ಬೇರೆಯೇ ಆಗಿರುತ್ತಿತ್ತು. ಆ ಬಳಿಕ 2002, 2007 ಮತ್ತು 2012ರಲ್ಲಿ ಸತತ ಮೂರು ಅವಧಿಗೆ ಗುಜರಾತ್‌ ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಮೋದಿ, ತಮ್ಮನ್ನು ತಾವು ಅಭಿವೃದ್ಧಿಯ ಹರಿಕಾರನಂತೆ ಬಿಂಬಿಸಿಕೊಂಡರು.

ಇತ್ತ 2004ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಯುಪಿಎ ಸರ್ಕಾರ, ಹಲವಾರು ಹಗರಣಗಳ  ಆರೋಪ ಎದುರಿಸುತ್ತಿತ್ತು, ಜನಪ್ರಿಯತೆ ಕುಗ್ಗಿತ್ತು, ದೇಶದ ಜನತೆ ಬದಲಾವಣೆ ಬಯಸಿದ್ದರು. ಬಿಜೆಪಿಯಲ್ಲಿ ವಾಜಪೇಯಿ ಅನಾರೋಗ್ಯದ ಕಾರಣ ಬದಿಗೆಸರಿದಿದ್ದರು, ಪ್ರಧಾನಿಯಾಗಬೇಕೆಂಬ ಅಡ್ವಾಣಿ ಬಯಕೆಗೆ ಸೊಪ್ಪು ಹಾಕುವವರ ಸಂಖ್ಯೆ ಬೆರಳೆಣಿಕೆಯಷ್ಟೂ ಇರಲಿಲ್ಲ. ಹೀಗಾಗಿ, ಗುಜರಾತ್‌ ಮುಖ್ಯಮಂತ್ರಿಯಾಗಿದ್ದುಕೊಂಡೇ ಅಂದಿನ ಪ್ರಧಾನಿ ಡಾ.ಮನ್‌ ಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಟೀಕಿಸುತ್ತಿದ್ದ ನರೇಂದ್ರ ಮೋದಿ, ರಾಷ್ಟ್ರ ರಾಜಕಾರಣ ಪ್ರವೇಶಿಸಲು ತಾಲೀಮು ನಡೆಸಿದ್ದರು. ವಿದೇಶಗಳಲ್ಲಿ ಭಾರತೀಯರು ಇರಿಸಿರುವ ಕಪ್ಪು ಹಣವನ್ನು ಭಾರತಕ್ಕೆ ತಂದಲ್ಲಿ, ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳು ಬರುತ್ತದೆ ಎಂದು ಹೇಳಿಕೊಂಡರು. ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಛೇ ದಿನಗಳು ಬರಲಿವೆ ಎಂಬ ಭರವಸೆ ಮೂಡಿಸಿದರು. 56 ಇಂಚಿನ ಎದೆಗಾರಿಕೆ! ಮತ್ತು ಗಟ್ಟಿಮಾತಿನ ಪ್ರಚಾರದ ಬೆನ್ನೇರಿ 2014ರಲ್ಲಿ ದೇಶದ ಪ್ರಧಾನಿಯಾದರು.

ಮೋದಿ ಮತ್ತು ಅಮಿತ್ ಷಾ ಜೋಡಿ

ಇಲ್ಲಿಂದ ಮುಂದಕ್ಕೆ ಹೋಗುವ ಮೊದಲು, ಇವತ್ತಿನ ದಿನಗಳಲ್ಲಿ ಇಡೀ ದೇಶದ ಇಬ್ಬರು ಪ್ರಬಲ ವ್ಯಕ್ತಿಗಳಾಗಿ ಬೆಳೆದಿರುವ ಮೋದಿ ಮತ್ತು ಅಮಿತ್ ಷಾ ಜೋಡಿಯ ಸ್ನೇಹ ಮತ್ತು ಸಂಬಂಧ ಬಗ್ಗೆ ಒಂದಿಷ್ಟು ತಿಳಿಯೋಣ.

ಗುಜರಾತ್‌ ನಲ್ಲಿ ಮೋದಿಯ ಬಲಗೈ ಭಂಟನಾಗಿದ್ದ ಅಮಿತ್ ಷಾ, ಮೋದಿ ಪ್ರಧಾನಿಯಾಗುವಲ್ಲಿಯೂ ಮಹತ್ವದ ಪಾತ್ರವಹಿಸಿದರು. ಮೋದಿಯನ್ನು ಒಂದು ಅದ್ಭುತ ಸೂಪರ್ ಡ್ಯೂಪರ್ ಬ್ರಾಂಡ್ ಆಗಿ ಬಿಂಬಿಸುವಲ್ಲಿ ಅಮಿತ್ ಷಾ ಪಾತ್ರ ಅಮೂಲ್ಯ. ಮೋದಿ ಮತ್ತು ಅಮಿತ್ ಷಾ ಅವರದ್ದು ಭಲೇ ಜೋಡಿ. ಕೆಲವರಂತೂ ಅವರಿಬ್ಬರದ್ದು ಒಂದೇ ಆತ್ಮ ಎರಡು ಶರೀರ ಅನ್ನುತ್ತಾರೆ. ಇವರ ಜೋಡಿ, ಯಾರಿಗಾದರೂ ಗುಡ್ ಮಾರ್ನಿಂಗ್ ಎಂದು ಹೇಳಲು ಹೊರಟರೆ, ಮೋದಿ ಗುಡ್ ಎಂದರೆ, ಷಾ ಮಾರ್ನಿಂಗ್ ಎಂದು ಹೇಳುವಂತಹ ಸಮನ್ವಯ ಇವರಲ್ಲಿದೆಯಂತೆ. ಸುಮಾರು 35 ವರ್ಷಗಳಿಂದಲೂ ತಮ್ಮ ಜೊತೆಗಿರುವ ಅಮಿತ್ ಷಾರನ್ನು ಮೋದಿ ನಂಬುತ್ತಾರೆ ಮತ್ತು ಅಮಿತ್ ಷಾ ತಮ್ಮ ಬಾಸ್‌ ಮೋದಿಗೆ ಸದಾ ನಿಷ್ಠರಾಗಿರುತ್ತಾರೆ.

ಗುಜರಾತ್ ಗಲಭೆ ನಂತರದ ಪರಿಸ್ಥಿತಿ ಇರಬಹುದು, ಅಥವ ಸೊಹ್ರಾಬುದ್ದೀನ್ ಶೇಖ್, ಇಶ್ರತ್ ಜಹಾನ್ ಎನ್‌ಕೌಂಟರ್‌ ಪ್ರಕರಣಗಳ ಸಂಬಂಧ ಆರೋಪವೂ ಸೇರಿದಂತೆ, ಎಲ್ಲವನ್ನೂ ಅರಗಿಸಿಕೊಂಡು ಮುಂದಕ್ಕೆ ಬಂದ ಅಮಿತ್ ಷಾ, ಬಿಜೆಪಿಯ ಅಧ್ಯಕ್ಷ ಹುದ್ದೆಗೇರಿ ಹಲವಾರು ಜಯ ತಂದುಕೊಟ್ಟವರು. ಕಳೆದ 5 ವರ್ಷಗಳ ಕಾಲ ರಾಷ್ಟ್ರಮಟ್ಟದಲ್ಲೂ ತೆರೆಯ ಹಿಂದೆ ಮೋದಿಗಾಗಿ ಶ್ರಮಿಸಿದ ಷಾ, ಇದೀಗ ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿ ಅತ್ಯಂತ ಪ್ರಭಾವಶಾಲಿಯಾಗಿದ್ದಾರೆ. 2019ರಲ್ಲಿ ಅಧಿಕಾರಕ್ಕೆ ಬಂದ ನೂರೇ ದಿನಗಳಲ್ಲಿ ತ್ರಿವಳಿ ತಲಾಖ್ ನಿಷೇಧ  ಮಸೂದೆ ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ನಿರ್ಧಾರ ಕೈಗೊಂಡಿರುವ, ಈ ಚೋಟಾ ಭಾಯ್, ಬಡೇ ಭಾಯ್ ಜೋಡಿ ಮುಂದಿನ ದಿನಗಳಲ್ಲಿ ಏನು ಮಾಡುತ್ತದೆ? ನರೇಂದ್ರ ಮೋದಿ, ಅಮಿತ್ ಷಾರನ್ನು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸುತ್ತಿದ್ದಾರಾ? ಇತ್ಯಾದಿ ಪ್ರಶ್ನೆಗಳು ಕುತೂಹಲ ಸೃಷ್ಟಿಸುತ್ತಿವೆ.

ಮೋದಿ ಮತ್ತು ಮದುವೆ?

ಇನ್ನು ಮೋದಿ-ಅಮಿತ್ ಷಾ ಜೋಡಿಯ ಬಗ್ಗೆ ತಿಳಿದುಕೊಂಡ ನಿಮಗೆ ನರೇಂದ್ರ ಮೋದಿ ಮತ್ತು ಅವರ ಧರ್ಮಪತ್ನಿ ಜಶೋಧಾ ಬೆನ್ ಬಗ್ಗೆ ಹೇಳದಿದ್ದರೆ ಹೇಗೆ?

2001ರಲ್ಲಿ ಗುಜರಾತ್ ಸಿಎಂ ಆದ ಮೋದಿ ಅವಕಾಶ ಸಿಕ್ಕ ವೇದಿಕೆಗಳಲ್ಲೆಲ್ಲ, ತಾನು ಏಕಾಂಗಿ, ತಾನು ಯಾರಿಗಾಗಿಯೂ ಆಸ್ತಿ ಮಾಡಬೇಕಿಲ್ಲ, ಹೀಗಾಗಿ ಯಾರಿಂದಲೂ, ಯಾವುದರಿಂದಲೂ ನನ್ನನ್ನು ಭ್ರಷ್ಟನಾಗಿಸಲು ಸಾಧ್ಯವೇ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಮೋದಿ ಭಕ್ತರು, ನಮ್ಮ ಮೋದಿ ಬ್ರಹ್ಮಚಾರಿ ಎಂದೇ ಕೊಚ್ಚಿಕೊಳ್ಳುತ್ತಿದ್ದರು. ಇದೇರೀತಿ, ಮೋದಿಯೂ ಕೂಡ, 2001ರಿಂದ 2012ರವರೆಗೆ ನಾಲ್ಕು ಬಾರಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಪತ್ನಿ ಎಂಬ ಕಡೆ ಜಾಗ ಖಾಲಿ ಬಿಡುತ್ತಿದ್ದರು. ಆದರೆ, ಮೋದಿ ವಿವಾಹಿತ ಎಂಬ ಸುದ್ದಿ ಹಿಂದಿನಿಂದಲೂ ಹರಿದಾಡುತ್ತಿತ್ತು. 

2012ರ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ, ಕಾಂಗ್ರೆಸ್ ಪಕ್ಷ ಇದೇ ವಿಚಾರ ಬಳಸಿಕೊಂಡು ಮೋದಿಗೆ ಕಳಂಕ ಹೊರಿಸುವ ಪ್ರಯತ್ನ ನಡೆಸಿತ್ತು. ಜಶೋದಾ ಬೆನ್ ಎಂಬ ಮಹಿಳೆಯನ್ನು ಮೋದಿಯಿಂದ ಶೋಷಣೆಗೊಳಗಾದವಳು ಎಂದು ಬಿಂಬಿಸಲು ಪ್ರಯತ್ನಿಸಿತ್ತು.  ಆ ಸಂದರ್ಭದಲ್ಲೂ ಈ ಬಗ್ಗೆ ಮೋದಿ ಏನೂ ಹೇಳಿರಲಿಲ್ಲ. ಆದರೆ, 2014ರಲ್ಲಿ ಲೋಕಸಭೆಗೆ ನಾಮಪತ್ರ ಸಲ್ಲಿಕೆ ವೇಳೆ, ತಮ್ಮ ಪತ್ನಿಯ ಹೆಸರು ಜಶೋಧಾ ಬೆನ್ ಚಿಮನ್ ಲಾಲ್ ಎಂದು ನಮೂದಿಸಿದ್ದರು. ತಮ್ಮ ವೈವಾಹಿಕ ಸ್ಥಿತಿಗತಿ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ದಾಖಲಾಗುವುದನ್ನು ತಪ್ಪಿಸಿಕೊಳ್ಳಲು ಮೋದಿ ಹೀಗೆ ಮಾಡಿದರೆನ್ನಲಾಗಿದೆ.

ಒಟ್ಟಿನಲ್ಲಿ, ನಾನು ಒಂಟಿ ಸಲಗ ಎಂದು ಹೇಳಿಕೊಳ್ಳುತ್ತಿದ್ದ ಮೋದಿ, ವಿವಾಹಿತ ವ್ಯಕ್ತಿ ಎಂದು ಅಧಿಕೃತವಾಗಿ ಒಪ್ಪಿಕೊಂಡಂತಾಯಿತು. ಸರಿ, ಮೋದಿ ಹೀಗೆ ಮಾಡಿದ್ದೇಕೆ? ಸುಮಾರು 50 ವರ್ಷಗಳ ಕಾಲ ತಮ್ಮ ಮದುವೆ ವಿಚಾರ ಬಚ್ಚಿಟ್ಟಿದ್ದೇಕೆ? ಪತ್ನಿಯ ಕೈಬಿಟ್ಟು ಹಿಮಾಲಯಕ್ಕೆ ಹೊರಟಿದ್ದೇಕೆ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಮೋದಿಯ ಅಣ್ಣ ಸೋಮಾಭಾಯಿ ಪ್ರಕಾರ, ಘಂಚಿ(ಗಾಣಿಗ) ಸಮುದಾಯದ ಸಂಪ್ರದಾಯದಂತೆ ಮೋದಿ 13 ವರ್ಷದ ಬಾಲಕನಾಗಿದ್ದಾಗಲೇ ಜಶೋಧಾ ಜೊತೆ ಲಗ್ನ ನಿಶ್ಚಯ ಆಗಿತ್ತಂತೆ. ಆ ಬಳಿಕ 1968ರಲ್ಲಿ ಮೋದಿಗೆ 18 ವರ್ಷವಾದಾಗ ವಿವಾಹ ಕಾರ್ಯ ನೆರವೇರಿಸಿದ್ದರಂತೆ. ಆದರೆ, ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ನರೇಂದ್ರ ಮೋದಿ, ಈ ಒತ್ತಾಯದ ಮದುವೆಯನ್ನು ಧಿಕ್ಕರಿಸಿ, ತಮ್ಮ ಅಂತರಂಗದ ಕರೆಗೆ ಓಗೊಟ್ಟು ಮನೆಯಿಂದ ಹೊರಬಿದ್ದರಂತೆ.

ಇದೆಲ್ಲ ಏನಾದರೂ ಇರಲಿ, ಜಶೋಧಾ ಬೆನ್ ಅವರಿಗೆ ಮೋದಿಯಿಂದ ಅನ್ಯಾಯವಾಗಿದ್ದಂತೂ ನಿಜ. ಬಾಲ ವಧುವಾಗಿ ಗಂಡನ ಮನೆ ಪ್ರವೇಶಿಸಿದ ಜಶೋಧ, ಎಂದಿಗೂ ಪತಿಯ ಜೊತೆ ಸಹಜೀವನ ನಡೆಸಲಿಲ್ಲವಂತೆ. ಆದರೆ, ಮೋದಿ ಬಗ್ಗೆ ಜಶೋಧಾ ಬೇಸರ ವ್ಯಕ್ತ ಪಡಿಸುವುದಿಲ್ಲ. ಇದೇ ನನ್ನ ಹಣೆಬರಹವಾಗಿದ್ದರೆ ಯಾರೇನು ಮಾಡಲು ಸಾಧ್ಯ ಎಂದು ಸುಮ್ಮನಾಗುತ್ತಾರೆ. ಸುಮಾರು 40 ವರ್ಷಗಳ ಹಿಂದೆ, ಮೋದಿಯ ಅಮ್ಮ ಹೀರಾ ಬೆನ್ ಜೊತೆಗೆ, ವಾಡ್‌ನಗರದ ಆರೆಸ್ಸೆಸ್ ಶಾಖೆಯಲ್ಲಿ ಮೋದಿಯನ್ನು ಒಮ್ಮೆ ಭೇಟಿಯಾಗಿದ್ದೆ ಎನ್ನುವ ಜಶೋಧಾ, ಮೋದಿ ಕೈಗೆ ಗಾಯವಾಗಿತ್ತು ನಾನು  ಔಷಧಿ ಹಚ್ಚಿದ್ದೆ ಎಂದು ಹೇಳಿಕೊಂಡು ಸಂಭ್ರಮಪಡುತ್ತಾರೆ.

ಮದುವೆ ವೇಳೆ ಕೇವಲ 8ನೇ ತರಗತಿವರೆಗೆ ಓದಿದ್ದ ಜಶೋಧಾ, ಆ ನಂತರದ ದಿನಗಳಲ್ಲಿ SSLC ಮುಗಿಸಿ, ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಪಡೆದು ಸೇವೆಗೆ ಸೇರಿದ್ದರು. 2009ರಲ್ಲಿ ನಿವೃತ್ತಿ ಹೊಂದಿರುವ ಜಶೋಧ, ಸೋದರ ಅಶೋಕ್ ಕುಟುಂಬದ ಜೊತೆಯಲ್ಲಿ ಉತ್ತರ ಗುಜರಾತಿನ ಉನ್ಜಾ ಪಟ್ಟಣದಲ್ಲಿ ವಾಸವಾಗಿದ್ದಾರೆ. ಪಿಂಚಣಿಯೇ ಅವರ ಜೀವನಕ್ಕೆ ಆಧಾರ.

1987ರಲ್ಲಿ ತಮ್ಮ ಅಣ್ಣ ಸೋಮಾಭಾಯಿ ಜೊತೆಗೆ ಮೋದಿ ನನ್ನನ್ನು ಭೇಟಿಯಾಗಿದ್ದರು.  ತನ್ನನ್ನು ತೊರೆದುಹೋಗಿದ್ದಕ್ಕಾಗಿ ಕ್ಷಮೆ ಕೇಳಿದ್ದ ಮೋದಿ, ಪರಸ್ಪರ ಒಪ್ಪಿಗೆ ಮೇಲೆ ವಿವಾಹ ವಿಚ್ಛೇದನ ಪಡೆಯಲು ಒಪ್ಪುವಂತೆ ಕೋರಿದ್ದರು ಎಂದು ಸಂದರ್ಶನವೊಂದರಲ್ಲಿ ಜಶೋಧ ಹೇಳಿದ್ದಾರೆ. ಡೈವೊರ್ಸ್ ಪಡೆದು ನೀನು ಬೇರೆ ವಿವಾಹವಾಗಬಹುದು ಎಂದೂ ಕೂಡ ಮೋದಿ ಹೇಳಿದ್ದರಂತೆ. ಆದರೆ, ನಾನು ಅದಕ್ಕೆ ಒಪ್ಪಲಿಲ್ಲ, ನಿಮ್ಮ ದಾರಿಯಲ್ಲಿ ನೀವು ನಡೆಯಿರಿ, ನನ್ನ ದಾರಿ ನನಗೆ ಎಂದು ಹೇಳಿದ್ದೆ ಅನ್ನುತ್ತಾರೆ ಜಶೋಧ.

ಮೋದಿ ಪ್ರಧಾನಿಯಾದ ಮೇಲೆ, ಜಶೋಧಾಗೆ ಭದ್ರತೆ ನೀಡಲಾಗಿದೆ. 12 ಜನ ಸಿಬ್ಬಂದಿ ಹಗಲಿರುಳು ಅವರ ಮನೆ ಬಳಿ ಕಾವಲಿರುತ್ತಾರೆ. ಆದರೆ, ಆಟೋರಿಕ್ಷಾ ಮತ್ತು ಬಸ್ಸಿನಲ್ಲಿ ಪ್ರಯಾಣಿಸುವ ಜಶೋಧಾರನ್ನು ಭದ್ರತಾ ಸಿಬ್ಬಂದಿ ತಮ್ಮ ಹವಾನಿಯಂತ್ರಿತ ಕಾರಿನಲ್ಲಿ  ಹಿಂಬಾಲಿಸುವುದೇ ಒಂದು ವಿಪರ್ಯಾಸ.

ತಮ್ಮ ಭಜನೆ ಪುಸ್ತಕದೊಳಗೆ, ಮೋದಿಯ ಸಣ್ಣ ಪೋಟೊ ಇರಿಸಿಕೊಂಡು ಕಾಲಕಳೆಯುತ್ತಿರುವ ಜಶೋಧಾ ಬೆನ್, ಒಮ್ಮೊಮ್ಮೆ ಖಿನ್ನತೆಗೊಳಗಾಗುತ್ತಾರಂತೆ. 130 ಕೋಟಿ ಜನರನ್ನು ಹೊಂದಿರುವ ದೇಶದ ಪ್ರಧಾನಿಯಾಗಿ, ಜಗದ್ವಿಖ್ಯಾತರಾಗಿರುವ ಮೋದಿ ಒಂದುಕಡೆ, ಅಂಥ ವ್ಯಕ್ತಿಯ ಪತ್ನಿಯಾಗಿದ್ದರೂ ಅಜ್ಞಾತಳಂತೆ ಬದುಕುತ್ತಿರುವ ಜಶೋಧಾ ಬೆನ್ ಮತ್ತೊಂದುಕಡೆ. ಇದು ಹೀಗಾಗಬಾರದಿತ್ತಲ್ಲವೇ?

ಮೋದಿ ಮತ್ತು ಅಡ್ವಾಣಿ ಸಂಬಂಧ

ಮೋದಿ ಮತ್ತು ಅಮಿತ್ ಷಾ, ಮೋದಿ ಮತ್ತು ಜಶೋಧಾ ಬೆನ್ ಬಗ್ಗೆ ಹೇಳಿದ ಮೇಲೆ, ಮೋದಿ ಮತ್ತು ಅಡ್ವಾಣಿ ಸಂಬಂಧದ ಬಗ್ಗೆ ಹೇಳದಿದ್ದರೆ ತಪ್ಪಾಗುತ್ತದೆ.

ಆರೆಸ್ಸೆಸ್‌ ನಿಂದ 1987ರಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಬಿಜೆಪಿಗೆ ಕಳಿಸಲ್ಪಟ್ಟ ಮೋದಿಯ ರಾಜಕೀಯ ಜೀವನದ ಆರಂಭದಲ್ಲಿ ಅಡ್ವಾಣಿಯವರೇ ಗುರು. ಆನಂತರ 1990ರ ಸೆಪ್ಟಂಬರ್ ನಲ್ಲಿ ಅಡ್ವಾಣಿ ರಥಯಾತ್ರೆಗೆ ಸಾರಥಿಯಾಗಿದ್ದೇ ಮೋದಿ. ಆ ಬಳಿಕ ಮೋದಿ, ಅಡ್ವಾಣಿಯವರಿಗೆ ಮತ್ತಷ್ಟು ಆಪ್ತರಾದರು. 1991ರ ಲೋಕಸಭಾ ಚುನಾವಣೆಯಲ್ಲಿ, ಗುಜರಾತ್ ನ ಗಾಂಧಿನಗರದಿಂದ ಕಣಕ್ಕಿಳಿಯಲು ಅಡ್ವಾಣಿಯವರಿಗೆ ಸಲಹೆ ನೀಡಿದ್ದು ಕೂಡ ನರೇಂದ್ರ ಮೋದಿಯೇ.  ಹೀಗಾಗಿ, 2001ರಲ್ಲಿ ಮೋದಿಯನ್ನು ಗುಜರಾತ್ ಸಿಎಂ ಆಗಿಸುವಲ್ಲಿಯೂ ಅಡ್ವಾಣಿಯವರ ಪಾತ್ರವೇ ಹಿರಿದಾಗಿತ್ತು. ಗುಜರಾತ್ ಗಲಭೆ ನಂತರದ ದಿನಗಳಲ್ಲಿ ವಾಜಪೇಯಿ ವಿರೋಧದ ನಡುವೆಯೂ ಮೋದಿಯನ್ನು ಸಿಎಂ ಆಗಿ ಉಳಿಸಿದ್ದೇ ಗುರು ಎಲ್‌.ಕೆ.ಅಡ್ವಾಣಿ.

ಆದರೆ, ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರ ಕಳೆದುಕೊಂಡ ನಂತರದಲ್ಲಿ, ಜೂನ್ 2005ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಅಡ್ವಾಣಿ, ಪಾಕ್ ಸೃಷ್ಟಿಗೆ ಕಾರಣರಾದ ಮೊಹಮದ್ ಅಲಿ ಜಿನ್ನಾರನ್ನು ಹೊಗಳಿದ್ದರು. ಇದು ಆರೆಸ್ಸೆಸ್ ಕೆಂಗಣ್ಣಿಗೆ ಗುರಿಯಾದ ಬಳಿಕ, ಅಡ್ವಾಣಿಯವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಇದೇ ಬೆಳವಣಿಗೆಯೇ, ಒಂದು ಕಾಲದಲ್ಲಿ ಉಗ್ರ ಹಿಂದುತ್ವದ ಪ್ರತಿಪಾದಕರೆಂದು ಬಿಂಬಿಸಲಾಗಿದ್ದ ಅಡ್ವಾಣಿಯನ್ನು ಬದಿಗೆಸರಿಸಿ, ಮೋದಿಯನ್ನು ಮುಖ್ಯ ವೇದಿಕೆಗೆ ತಂದಿದ್ದು. ಅಲ್ಲಿಂದಾಚೆಗೆ ಅಡ್ವಾಣಿ ಮತ್ತು ಮೋದಿ ಸಂಬಂಧ ಹಳಸತೊಡಗಿತು. ಅಡ್ವಾಣಿಯವರ ಪರೋಕ್ಷ ವಿರೋಧದ ನಡುವೆಯೂ, 2013ರಲ್ಲಿ ಮೋದಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಾಯಿತು. ಇದರಿಂದ, ಮತ್ತೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ತಾವೇ ಪ್ರಧಾನಿಯಾಗಬಹುದು ಎಂದುಕೊಂಡಿದ್ದ ಅಡ್ವಾಣಿ ಆಸೆ ನುಚ್ಚುನೂರಾಯಿತು.  ಅಲ್ಲಿಗೆ ಶಿಷ್ಯ ಮೋದಿ, ಗುರು ಅಡ್ವಾಣಿಯನ್ನು ಮೀರಿ ಬೆಳೆದಿದ್ದರು. ಮೃದುಗೊಂಡ ಅಡ್ವಾಣಿ ಬದಿಗೆ ಸರಿಸಿದ ಮೇಲೆ, ಗಟ್ಟಿ ಹಿಂದುತ್ವದ ಪ್ರತಿಪಾದಕನಂತೆ ಕಂಡುಬರುತ್ತಿದ್ದ ಮೋದಿ ಬಗ್ಗೆ ಸಂಘ ಪರಿವಾರ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ, ಪ್ರಧಾನಿಯಾದ ನಂತರದ ದಿನಗಳಲ್ಲಿ, ಮೋದಿ  ಆರೆಸ್ಸೆಸ್‌ ಅನ್ನೇ ಮೀರಿ ಬೆಳೆಯತೊಡಗಿದ್ದಾರೆ.

ಇಂಥ ಸನ್ನಿವೇಶದಲ್ಲಿ, ಆರೆಸ್ಸೆಸ್‌ಗೆ ತಮ್ಮವನಾಗಿ ಕಾಣುತ್ತಿರುವುದೇ ಆಮಿತ್ ಷಾ. ಹೀಗಾಗಿಯೇ, ಸಂಘದವರು ಇಂದು ಅಮಿತ್‌ ಷಾ ಬೆನ್ನಿಗೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಸಂಪೂರ್ಣವಾಗಿ ಬದಲಾಗಿಬಿಟ್ಟರೆ ಮತ್ತು ಹಾಗೊಂದುವೇಳೆ ನಾಯಕತ್ವದ ಬದಲಾವಣೆ ಪ್ರಶ್ನೆ ಉದ್ಭವಿಸಿದರೆ, ಅಮಿತ್ ಷಾ ಅವರೇ ಆರೆಸ್ಸೆಸ್‌ ನ ಮೊದಲ ಆಯ್ಕೆ ಆಗಿರುತ್ತಾರೆ ಅನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೋದಿಯವರು ಪ್ರಧಾನಿಯಾದ ಮೇಲೆ ನಾನು ದೆಹಲಿಯ ಹೊರಗಿನವನು, ನಾನು ಚಹಾ ಮಾರುವ ಬಡ ವ್ಯಕ್ತಿಯ ಮಗ ಎಂಬ ಕಾರಣಕ್ಕಾಗಿ ದೆಹಲಿಯ ಲ್ಯೂಟೈನ್ಸ್(Lutyens) ಪ್ರದೇಶದ ಜನ(ಹಿಂದಿನಿಂದಲೂ ಅಧಿಕಾರದ ಗದ್ದುಗೆಯಲ್ಲಿದ್ದವರು) ಮತ್ತು ನನ್ನನ್ನು ಕೀಳಾಗಿ ನೋಡುತ್ತಾರೆ ಎಂದು ಪದೇಪದೇ ಹೇಳಿಕೊಳ್ಳುತ್ತಾರೆ. ಆದರೆ, ಸಾಧಾರಣ ಹಿನ್ನೆಲೆಯ ಮೋದಿ, ತಾವು ಎಷ್ಟರಮಟ್ಟಿಗಿನ ಸರಳತೆ ಅನುಸರಿಸುತ್ತಾರೆ? ಅವರ ಜೀವನ ಶೈಲಿ ಹೇಗಿದೆ ಅನ್ನುವುದು ಕುತೂಹಲ ಹುಟ್ಟಿಸುತ್ತದೆ ಅಲ್ಲವೇ? ಸರಿ ಹಾಗಿದ್ದರೆ, ಅದರ ಬಗ್ಗೆಯೂ ಒಂದಿಷ್ಟು ತಿಳಿಯುವ ಪ್ರಯತ್ನ ಮಾಡೋಣ, ತಪ್ಪೇನೂ ಇಲ್ಲವಲ್ಲ.  

ಭಾರತೀಯ ರಾಜಕೀಯ ರಂಗದಲ್ಲಿ ತಮ್ಮ ಉಡುಪಿಗಾಗಿ ಯಾರಾದರೂ ಅಪಾರ ಪ್ರಶಂಸೆ ಮತ್ತು ಟೀಕೆಗಳನ್ನು ಒಟ್ಟೊಟ್ಟಿಗೆ ಪಡೆದಿದ್ದರೆ, ಅದು ನರೇಂದ್ರ ಮೋದಿ ಮಾತ್ರ. ಮೋದಿಯ ಕುರ್ತಾ ಮತ್ತು ಸೂಟು ಹಾಗೂ ಅವರು ಹಾಕಿಕೊಳ್ಳುವ ಕಾಶ್ಮೀರಿ ಶಾಲುಗಳು ಈಗಲೂ ಸುದ್ದಿ ಮಾಡುತ್ತಲೇ ಇವೆ. ಉಡುಪಿನ ವಿಚಾರದಲ್ಲಿ ಭಾರಿ ಪ್ರಯೋಗಶಾಲಿಯಾಗಿರುವ ಮೋದಿಯವರ ಬಳಿ ನೂರಾರು ಕುರ್ತಾಗಳಿವೆಯಂತೆ, ಅವರಿಗೆ ವಾಚು ಮತ್ತು ಚಪ್ಪಲಿಗಳ ಬಗ್ಗೆಯೂ ತುಂಬಾ ಕ್ರೇಜ್ ಇದೆಯಂತೆ. ಕನ್ನಡಿಯನ್ನು ತುಂಬಾ ಇಷ್ಟಪಡುವ ಮೋದಿ, ಯಾವೊಬ್ಬ ಮಾಡೆಲ್ ನನ್ನೂ ನಾಚಿಸುವಂತೆ ಪೋಸು ಕೊಡುತ್ತಾರೆ.

ತಾವು ಧರಿಸುವ ಎಲ್ಲ ಉಡುಪುಗಳಲ್ಲೂ, ಆತ್ಮವಿಶ್ವಾಸದ ಪ್ರತೀಕವಾಗಿ ಕಂಡುಬರುವ ಮೋದಿ, ಸಂದರ್ಭ ಸನ್ನಿವೇಶಕ್ಕೆ ತಕ್ಕಂತೆ ಉಡುಪು ಧರಿಸುವುದರಲ್ಲಿ ನಿಸ್ಸೀಮರು. ಆದರೆ, 2015ರಲ್ಲಿ ಭಾರತಕ್ಕೆ ಬರಾಕ್ ಒಬಾಮ ಭೇಟಿ ವೇಳೆ, ಮೋದಿಯವರು ತಮ್ಮ ಹೆಸರಿನ ಇಂಪ್ರಿಂಟ್ ಹೊಂದಿರುವ 10 ಲಕ್ಷ ರೂಪಾಯಿ ಬೆಲೆಯ ಸೂಟ್ ಧರಿಸಿದ್ದು ಭಾರೀ ಟೀಕೆಗೊಳಗಾಗಿತ್ತು.

ಮೋದಿಯವರ ಹೇರ್ ಸ್ಟೈಲ್ ಕೂಡ ಸುದ್ದಿ ಮಾಡಿದೆ. 2007ರ ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯದ ಆರಂಭಕ್ಕೆ ಮೊದಲು, ಮೋದಿ ತಮ್ಮ ಬೊಕ್ಕ ಮುಂದಲೆಗೆ ಕೂದಲ ಕಸಿ ಮಾಡಿಸಿಕೊಂಡಿದ್ದರಂತೆ. ಮೋದಿಯವರ ಹಳೆಯ ಫೋಟೊಗಳಲ್ಲಿ ಮುಂದಲೆ ಸಾಕಷ್ಟು ಬೋಳಾಗಿರುವುದು ಮತ್ತು ನಂತರದ ದಿನಗಳಲ್ಲಿ ತುಂಬಿದಂತೆ ಕಾಣುವುದನ್ನು, ಯಾರು ಬೇಕಾದರೂ ಗಮನಿಸಿ ತಿಳಿದುಕೊಳ್ಳಬಹುದು.  ಈ ಬಗ್ಗೆಯೂ ನಾವು ಆಕ್ಷೇಪಣೆ ವ್ಯಕ್ತಪಡಿಸುವ ಅಗತ್ಯವಿಲ್ಲ. ಏಕೆಂದರೆ, ನಮ್ಮ ದೇಶದ ಪ್ರಧಾನಿ ಚೆನ್ನಾಗಿ ಕಾಣಬೇಕು, ಆತ್ಮವಿಶ್ವಾಸಿಯಾಗಿರಬೇಕು ಅನ್ನುವುದೇ ಎಲ್ಲ ಭಾರತೀಯರ ಬಯಕೆ. ಅಂತಾರಾಷ್ಟ್ರೀಯ ಮಾಧ್ಯಮಗಳೂ ಕೂಡ, ಮೋದಿಯವರ ಉಡುಪಿನ ಅದ್ದೂರಿತನದ ಬಗ್ಗೆ ವ್ಯಾಪಕವಾಗಿ ಬರೆದಿವೆ. ಆದರೆ, ಕೇವಲ ಖಾಕಿ ಚಡ್ಡಿ, ತೋಳು ಮಡಿಚಿದ ಬಿಳಿ ಅಂಗಿ ತೊಡುತ್ತಿದ್ದ ಮೋದಿ ಬದಲಾದ ರೀತಿಯೇ ಅನನ್ಯ. ಹಿಂದೆ, ಸಾಧಾರಣ ಕಂದು ಬಣ್ಣದಲ್ಲಿದ್ದ ಮೋದಿಯವರ ಮುಖದ ತ್ವಚೆ, ಇಂದು ಮಿರಿಮಿರಿ ಮಿಂಚುತ್ತಿದೆ. ಇದಕ್ಕೆ ಅವರು ತಿನ್ನುತ್ತಾರೆ ಎನ್ನಲಾದ ದುಬಾರಿ ಬೆಲೆಯ ಅಣಬೆ ಕಾರಣವೋ ಅಥವ ಪ್ರಧಾನಿಯಾಗಿರುವ ಅವರು, ಸದಾ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಹಾಗೂ ಧೂಳು ಮತ್ತು ಪ್ರಖರ ಬಿಸಿಲಿನ ತಾಪದಿಂದ ದೂರವಿರುವುದು ಕಾರಣವೋ ಗೊತ್ತಿಲ್ಲ.

ವರ್ಷಗಳು ಕಳೆದಂತೆ ನರೇಂದ್ರ ಮೋದಿಯವರಲ್ಲಿನ ಬದಲಾವಣೆಗಳು ಕೇವಲ ಉಡುಪು, ಶೈಲಿ ಮತ್ತು ಲುಕ್ ಗೆ ಮಾತ್ರ ಸೀಮಿತವಾಗಿಲ್ಲ. ಗುಜರಾತ್ ಗಲಭೆ ನಂತರದ ದಿನಗಳಲ್ಲಿ ಅಭಿವೃದ್ಧಿಯ ಹರಿಕಾರನಂತೆ ಕಂಡುಬಂದ ಮೋದಿ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದರು. ಅಲ್ಪಸಂಖ್ಯಾತರ ಒಲವನ್ನೂ ಸಂಪಾದಿಸುವತ್ತ ಗಮನ ಹರಿಸಿದರು. ಗುಜರಾತ್ ಗಲಭೆ  ನಿಯಂತ್ರಿಸುವಲ್ಲಿ ಮೋದಿ ವಿಳಂಬ ಮಾಡಿದರು ಎಂಬ ಭಾವನೆಯಲ್ಲಿ ಅಮೆರಿಕ ದೇಶ, 2005ರಲ್ಲಿ ಮೋದಿಗೆ ವೀಸಾ ನೀಡಲು ನಿರಾಕರಿಸಿತ್ತು. ಇದೂಕೂಡ, ಮೋದಿಯವರಲ್ಲಿನ ಬದಲಾವಣೆಗೆ ಮತ್ತೊಂದು ಕಾರಣವಾಗಿರಬಹುದು. ಗುಜರಾತ್ ಗಲಭೆ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ 2011ರ ಸೆಪ್ಟಂಬರ್‌ನಲ್ಲಿ ಮೋದಿಗೆ ಕ್ಲೀನ್ ಚಿಟ್‌ ನೀಡಿತ್ತು. ಇದಾದ ನಾಲ್ಕುದಿನಗಳ ಬಳಿಕ, ಸೆ.17ರಂದು, ಮೋದಿ ತಮ್ಮ ಜನ್ಮದಿನದಿಂದಲೇ ಸದ್ಭಾವನಾ ಅಭಿಯಾನ ಆರಂಭಿಸಿದರು. ರಾಜ್ಯದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭ್ರಾತೃತ್ವ ಶಾಶ್ವತವಾಗಿರಬೇಕು ಎಂಬ ಆಶಯೊಂದಿಗೆ ಮೂರು ದಿನ ಉಪವಾಸ ಆಚರಿಸಿದ ಮೋದಿ, ಎಲ್ಲ ಸಮುದಾಯದ    ಧಾರ್ಮಿಕ ನಾಯಕರನ್ನು ಭೇಟಿ ಮಾಡಿದರು.  ಒಟ್ಟಿನಲ್ಲಿ, ಮೋದಿ ಅಗತ್ಯಕ್ಕೆ ತಕ್ಕಂತೆ, ಪರಿಸ್ಥಿತಿಗೆ ತಕ್ಕಂತೆ ತಮ್ಮನ್ನು ತಾವು ಬದಲಾವಣೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದೇ ಅವರ ಯಶಸ್ಸು ಮತ್ತು ಜನಪ್ರಿಯತೆಯ ಗುಟ್ಟೂ ಆಗಿರಬಹುದು.

ಮೋದಿಯವರ ದಿನಚರಿ

ಮೋದಿಯವರ ದಿನಚರಿಯ ಬಗ್ಗೆ ಹೇಳುವುದಾದರೆ, ಬೆಳಗ್ಗೆ ಎದ್ದ ಬಳಿಕ ಒಂದು ವಾಕ್, ಆಮೇಲೆ ಯೋಗ, ಬಳಿಕ ಶುಂಠಿ ಸೇರಿಸಿದ ಚಹಾ ಸೇವನೆ ಮೋದಿಯ ಅಭ್ಯಾಸ. ಗಾಂಧಿನಗರದ ಮನೆಯಲ್ಲಿ ಮೋದಿಗೆ ಅಡುಗೆ ಮಾಡುತ್ತಿದ್ದ ವ್ಯಕ್ತಿ ಬದರಿ ಮೀನಾರೇ ಈಗಲೂ ಮೋದಿಯ ಅಡುಗೆ ಭಟ್ಟ. ಮೋದಿ ಪಕ್ಕಾ ಸಸ್ಯಾಹಾರಿ ಮತ್ತು ಅವರಿಗೆ ಮದ್ಯಪಾನ, ಧೂಮಪಾನ ಸೇರಿದಂತೆ ಯಾವುದೇ ದುರಭ್ಯಾಸ ಇಲ್ಲ. ಬಿಸಿಬಿಸಿ ಗರಿಗರಿ ರೊಟ್ಟಿ ಮತ್ತು ಕಿಚಡಿ ಮೋದಿಯ ಇಷ್ಟದ ತಿಂಡಿಗಳು. ಅಂದಹಾಗೆ, ಮೋದಿಗೆ ಚೆನ್ನಾಗಿ ಅಡುಗೆ ಮಾಡುವುದೂ ಕೂಡ ಬರುತ್ತದೆ.

ಮೋದಿಯವರ ದಿನ, ನ್ಯೂಸ್ ಪೇಪರ್‌ ಗಳ ಮೇಲೆ ಕಣ್ಣಾಡಿಸುವುದರಿಂದ ಆರಂಭವಾಗಿ, ರಾತ್ರಿಯಲ್ಲಿ ಸುದ್ದಿ ವೀಕ್ಷಿಸುವುದರಿಂದಲೇ ಮುಗಿಯುತ್ತದಂತೆ. ರಾತ್ರಿ ಊಟದ ವೇಳೆ ನಮ್ಮ ನಿಮ್ಮೆಲ್ಲರಂತೆ ಮೋದಿಯೂ ಕೂಡ, ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಬರುವ ಚರ್ಚಾ ಕಾರ್ಯಕ್ರಮಗಳನ್ನು ನೋಡುತ್ತಿರುತ್ತಾರಂತೆ. ಯಾವ ಚಾನಲ್ ಹೆಚ್ಚಾಗಿ ನೋಡುತ್ತಾರೆ ಅನ್ನುವುದು ಮಾತ್ರ ರಹಸ್ಯ. ಇತಿಹಾಸ ಮತ್ತು ರಾಜನೀತಿ  ಮೋದಿಯ ನೆಚ್ಚಿನ ವಿಷಯಗಳಾಗಿದ್ದು ಈಗಲೂ ಅವಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಾರಂತೆ. ಆದರೆ, ತುಂಬಾ ಶಿಸ್ತಿನ ವ್ಯಕ್ತಿಯಾಗಿರುವ ಮೋದಿ, ರಾತ್ರಿ ಎಷ್ಟೇ ತಡವಾಗಿ ಮಲಗಿದರೂ ಕೂಡ ಬೆಳಗ್ಗೆ 5.30ರ ವೇಳೆಗೆ ಎದ್ದುಬಿಡುತ್ತಾರೆ. ನಂಬುಗೆಯ ಶಿಷ್ಯ ಅಮಿತ್ ಷಾರನ್ನು ಬಿಟ್ಟರೆ, ಮೋದಿಗೆ ಪರಮಾಪ್ತ ಅನ್ನಬಹುದಾದ ಸ್ನೇಹಿತರು ಯಾರೂ ಇಲ್ಲವಂತೆ.

ಸ್ವಸ್ಥ ದೇಹದಿಂದ ಸ್ವಸ್ಥ ಮನಸ್ಸು ಅನ್ನುವುದೇ ಮೋದಿಯವರ ಆರೋಗ್ಯ ಸೂತ್ರ. ನವರಾತ್ರಿ ವೇಳೆ 9 ದಿವಸ ಉಪವಾಸ ವ್ರತ ಆಚರಿಸುವ ಮೋದಿ, ವಿದೇಶಿ ಪ್ರವಾಸದಲ್ಲಿದ್ದರೂ ವ್ರತ ತಪ್ಪಿಸುವುದಿಲ್ಲ. ನಾಲ್ಕೈದು ದಿನಗಳ ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕವೂ ಯಾವುದೇ ವಿಶ್ರಾಂತಿ ಪಡೆಯದೇ ನೇರವಾಗಿ ಕಚೇರಿಗೆ ತೆರಳುವ ಮೋದಿ, ವಯಸ್ಸಿನಲ್ಲಿ ತಮಗಿಂತಲೂ ಕಿರಿಯರನ್ನೂ ನಾಚಿಸುವಂತೆ  ಫಿಟ್‌ನೆಸ್ ಕಾಪಾಡಿಕೊಂಡಿದ್ದಾರೆ. ಇತ್ತೀಚೆಗೆ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿರುವ ಮೋದಿ, ವ್ಯಾಯಾಮವನ್ನು ಎಲ್ಲರ ಬದುಕಿನ ಒಂದು ಭಾಗವಾಗಿ ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ, ವಿಶ್ವಸಂಸ್ಥೆಗೆ ಯೋಗದ ಮಹತ್ವವನ್ನು ಮನವರಿಕೆ ಮಾಡಿಕೊಡುವ ಮೂಲಕ, ಇಡೀ ಜಗತ್ತು ಪ್ರತಿವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುವಂತೆ ಮಾಡಿದ್ದಾರೆ, ಭಾರತದ ಗೌರವ ಹೆಚ್ಚಿಸಿದ್ದಾರೆ. ದೇಶದಲ್ಲಿ ಸ್ವಚ್ಛ್ ಭಾರತ್ ಅಭಿಯಾನ ಆರಂಭಿಸಿರುವ ಮೋದಿಗೆ, ಸ್ವಚ್ಛತೆ ಅನ್ನುವುದೇ ಒಂದು ಗಿಳ್ಳಿನಂತೆ ಅನ್ನಬಹುದು. ಅವರು ತಮ್ಮ ಮೇಜು ಮತ್ತು ಪರಿಸರವನ್ನು ತುಂಬಾ ಸ್ವಚ್ಛವಾಗಿ ಇರಿಸಿಕೊಂಡಿರುತ್ತಾರೆ.

ಮೋದಿಯ ಇಂಗ್ಲಿಷ್ ಭಾಷಾ ಜ್ಞಾನ ಉತ್ತಮವಾಗಿದ್ದರೂ, ಅವರು ಇಂಗ್ಲಿಷ್ ನಲ್ಲಿ ಮಾತನಾಡಲು ಶ್ರಮಪಡುತ್ತಾರೆ. ಜೊತೆಗೆ, ಅವರ ಇಂಗ್ಲಿಷ್ ಉಚ್ಚಾರಣೆ ಶೈಲಿಯೂ ಕೇಳಲು ಹಿತವೆನ್ನಿಸುವುದಿಲ್ಲ. ಆದರೆ, ಮಾತೃಭಾಷೆ ಗುಜರಾತಿ ಮತ್ತು ಹಿಂದಿ ಭಾಷೆಯಲ್ಲಿ ಮಾತಿಗಿಳಿದರೆ ಎಂಥವರೂ ತಲೆದೂಗುವಂತೆ ಮಾತಾಡುವ ಅದ್ಭುತ ಮಾತುಗಾರ, ಮೋಡಿಗಾರ, ಜಾದೂಗಾರ   ಎಂದೆಲ್ಲ ಅನ್ನಬಹುದು. 

ಬರವಣಿಗೆಯಲ್ಲೂ ಕೈಯಾಡಿಸಿರುವ ಮೋದಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ಒಂದಷ್ಟು ಕವನಗಳನ್ನೂ ರಚಿಸಿದ್ದಾರೆ. ಮೋದಿ ಒಬ್ಬ ಒಳ್ಳೆಯ ಕಾಪಿ ರೈಟರ್ ಕೂಡ ಹೌದು. ಆಕರ್ಷಕ ಶೀರ್ಷಿಕೆ, ಹೆಸರುಗಳನ್ನು ಕೊಡುವುದರಲ್ಲಿ, ಹೊಸ  ಬ್ರಾಂಡ್‌ ಗಳನ್ನು ಹುಟ್ಟು ಹಾಕುವುದರಲ್ಲಿ, ಮೋದಿ ಸಿದ್ಧ ಹಸ್ತ. ಅದೇರೀತಿ, ಮೋದಿ ಅವರನ್ನು ಕುರಿತು ಹಲವಾರು ಪುಸ್ತಕಗಳು ಬಂದಿವೆ. ಅದರಲ್ಲಿ ಆಂಡಿ ಮರಿನೋ(Andy Marino)ಬರೆದಿರುವ ನರೇಂದ್ರ ಮೋದಿ-ಎ ಪೊಲಿಟಕ್ ಬಯೋಗ್ರಫಿ, ವಿವಿಯನ್ ಫರ್ನಾಂಡಿಸ್(Vivian Fernandez) ಬರೆದಿರುವ ಮೋದಿ, ಮೇಕಿಂಗ್  ಆಫ್ ಎ ಪ್ರೈಮ್ ಮಿನಿಸ್ಟರ್, ಎಂ.ವಿ.ಕಾಮತ್ ಮತ್ತು ಕಾಳಿಂದಿ ರಂಡೇರಿ(Kalindi Randeri) ಅವರ, ದಿ ಮ್ಯಾನ್ ಆಫ್ ದಿ ಮುಮೆಂಟ್, ಕಿಂಗ್ ಶುಕ್ ನಾಗ್( Kingshuk Nag) ಅವರ, ದಿ ನಮೋ ಸ್ಟೋರಿ, ಸುದೇಶ್ ವರ್ಮಾ, ಅವರ ನರೇಂದ್ರ ಮೋದಿ, ದಿ ಗೇಮ್ ಚೇಂಜರ್, ಗಿರೀಶ್ ದಬ್ಕೆ ಅವರ ನರೇಂದ್ರಾಯಣ ಮತ್ತು ಪತ್ರಕರ್ತ ನೀಲಾಂಜನ್ ಮುಖ್ಯೋಪಾದ್ಯಾಯ ಬರೆದಿರುವ, ನರೇಂದ್ರ ಮೋದಿ, ದಿ ಮ್ಯಾನ್ ದಿ ಟೈಮ್ಸ್ ಪುಸ್ತಕಗಳು ಪ್ರಮುಖವಾಗಿವೆ.

ದೇಶದ ಪ್ರಧಾನಿಯಾದ ಯಾವುದೇ ವ್ಯಕ್ತಿಗೆ ಕೈತುಂಬಾ ಕೆಲಸ ಇದ್ದೇ ಇರುತ್ತದೆ. ಆದರೂಕೂಡ, ಈವರೆಗೆ ಭಾರತದ ಪ್ರಧಾನಿಗಳಾಗಿ ಕೆಲಸ ಮಾಡಿದ ಇತರೆಲ್ಲರಿಗೂ ಹೋಲಿಸಿದಲ್ಲಿ,  ನರೇಂದ್ರ ಮೋದಿಯೇ ಅತ್ಯಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುತ್ತಿರುವವರು ಅಂದರೆ ತಪ್ಪಾಗುವುದಿಲ್ಲ.

ಬಹಳಷ್ಟುಬಾರಿ ಮೋದಿಯವರು, ದಿನದ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರಂತೆ. ವಾಜಪೇಯಿ, ಮನ್‌ಮೋಹನ್ ಸಿಂಗ್ ಸೇರಿದಂತೆ ಪ್ರಧಾನಿಗಳಾಗಿದ್ದ ಬಹುತೇಕರು, ತಮ್ಮ ರೇಸ್‌ ಕೋರ್ಸ್ ರಸ್ತೆಯ ಮನೆಯಿಂದಲೇ ಹೆಚ್ಚು ಕೆಲಸ ಮಾಡುತ್ತಿದ್ದರಂತೆ. ಆದರೆ, ಮೋದಿ ಸಾಹೇಬರು, ಬೆಳಗ್ಗೆ 9ಕ್ಕೆ ಮುಂಚೆಯೇ ಸೌತ್ ಬ್ಲಾಕ್‌ ನ ತಮ್ಮ ಕಚೇರಿಯಲ್ಲಿರುತ್ತಾರೆ.

ಪ್ರಧಾನಿ ಮೋದಿಯವರ ಕಾರ್ಯದಕ್ಷತೆ ಅಧಿಕಾರವರ್ಗದ ಮೇಲೂ ಪ್ರಭಾವ ಬೀರಿದೆ, ದೆಹಲಿಯಲ್ಲಿರುವ ಕೇಂದ್ರಸರ್ಕಾರದ ಕಚೇರಿಗಳಲ್ಲಿ ಎಲ್ಲ ಉದ್ಯೋಗಿಗಳು, ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುತ್ತಾರೆ. ನಿಜವಾಗಿಯೂ ಇದು ಸಂತೋಷದ ವಿಚಾರ.

ಸ್ವಜನಪಕ್ಷಪಾತಕ್ಕೆ ಆಸ್ಪದವೇ ಇಲ್ಲದ ಮೋದಿ, ವೈಯಕ್ತಿಕವಾಗಿಯೂ ಭ್ರಷ್ಟಾಚಾರದ ಸೋಂಕು ತಗುಲದಂತೆ ಆಡಳಿತ ನಡೆಸುತ್ತಿದ್ದಾರೆ. ಆದರೆ, ನೋಟು ರದ್ದತಿ, ಜಿಎಸ್‌ಟಿ ಜಾರಿ ಅಥವ ಕಾಶ್ಮಿರಕ್ಕೆ ಸಂಬಂಧಿಸಿದ ನಿರ್ಧಾರಗಳು, ಹೀಗೆ ಬಹುತೇಕ ವಿಚಾರಗಳಲ್ಲಿ ನಾನು ಮಾಡುವುದೇ ಸರಿ, ಅನ್ನುವುದು ಮೋದಿಯವರ ಧೋರಣೆ. ಇಂಥ ಭ್ರಮೆಗಳಿಂದ ಅವರು ಹೊರಬೇಕು. ಇದರ ಜೊತೆಗೆ, ದೇಶದ ಸೇನೆಯ ಬಗ್ಗೆ ಭಾರೀ ಒಲವು ತೋರಿಸುವ ಮೋದಿ, ಅದರ ಶ್ರೇಷ್ಠತೆ ಬಗ್ಗೆ ಒಂದಿಷ್ಟು ಹೆಚ್ಚೇ ಮಾತನಾಡುತ್ತಾರೆ. ಇದು, ಸಾಮಾನ್ಯ ಜನರಲ್ಲಿ ಒಂದುಮಟ್ಟದ ಯುದ್ಧೋನ್ಮಾದ ಮೂಡಿಸುವ ಅಪಾಯವಿದೆ ಅನ್ನುವುದನ್ನು ಅವರು ಅರಿತುಕೊಳ್ಳುವುದು, ದೇಶಕ್ಕೆ ಒಳ್ಳೆಯದು.

ಒಟ್ಟಿನಲ್ಲಿ, ಅಪ್ರತಿಮ ದೇಶ ಪ್ರೇಮಿ, ದಣಿವರಿಯದ ಕೆಲಸಗಾರ, ಅದ್ಭುತ ಮಾತುಗಾರ ಮತ್ತು ದೃಢ ನಿರ್ಧಾರ ಕೈಗೊಳ್ಳುವ ನಾಯಕನಾಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ 69ನೇ ಹುಟ್ಟು ಹಬ್ಬದ ಶುಭಾಶಯಗಳು.


ಸಂಬಂಧಿತ ಟ್ಯಾಗ್ಗಳು

Narendra Modi PM Gujarath Amith Shah


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ