ಉಪಚುನಾವಣೆಗೆ ಜೆಡಿಎಸ್ ಸಿದ್ಧತೆ!

JDS

12-09-2019

ಬೆಂಗಳೂರು : ಜೆಡಿಎಸ್ ಕಾಂಗ್ರೆಸ್ ಶಾಸಕರ ಅನರ್ಹತೆಯಿಂದಾಗಿ ರಾಜ್ಯದಲ್ಲಿ ಎದುರಾಗಲಿರುವ ಉಪ ಚುನಾವಣೆಗೆ ಜೆಡಿಎಸ್ ಪಕ್ಷ ಸದ್ದುಗದ್ದಲವಿಲ್ಲದೆ ಸಿದ್ಧತಾ ಕಾರ್ಯ ನಡೆಸಿದೆ. ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕರ್ತರ ಹಾಗೂ ಪ್ರಮುಖರ ಸಭೆ ನಡೆದಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪಕ್ಷದ ಸಂಘಟನೆಯ ಹೆಸರಲ್ಲಿ ಉಪ ಚುನಾವಣೆಗೆ ಸಿದ್ದತೆಯನ್ನು ಸದ್ದುಗದ್ದಲವಿಲ್ಲದೆ ನಡೆಸತೊಡಗಿದ್ದಾರೆ.

ಇಂದೂ ಸಹ ಪಕ್ಷದ ಕಚೇರಿಯಲ್ಲಿ ಪಕ್ಷದ ವೆಬ್‍ಸೈಟ್‍ಗೆ ಚಾಲನೆ ನೀಡಿದ ಅವರು ಮುಂದಿನ ದಿನಗಳಲ್ಲಿ ಎದುರಾಗಲಿರುವ ವಿಧಾನಸಭಾ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಂದೆ ಬರಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ತಮ್ಮ ಕುಟುಂಬದವರು ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೆ.ಆರ್.ಪೇಟೆ ಹಾಗೂ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಥಳೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ದೇವೇಗೌಡರು ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ. ರಾಜ್ಯ ಸರ್ಕಾರ ನಮಗೆ ರಕ್ಷಣೆ ನೀಡಬೇಕು ಎಂದು ದೇವೇಗೌಡರು ಕೋರಿದ್ದಾರೆ.

ಮುಂದಿನ ವಿಧಾಸನಭಾ ಉಪ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ದೇವೇಗೌಡರು ಈ ವಿಷಯವನ್ನು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ 17 ಜನ ಶಾಸಕರು ಶಾಸಕತ್ವದಿಂದ ಅನರ್ಹಗೊಂಡಿದ್ದು, ಈ ಪೈಕಿ ಜೆಡಿಎಸ್ ಶಾಸಕರಾಗಿದ್ದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜೆಡಿಎಸ್‍ನ ಕೆ.ಗೋಪಾಲಯ್ಯ, ಹುಣಸೂರು ಕ್ಷೇತ್ರದ ಎಚ್.ವಿಶ್ವನಾಥ್ ಹಾಗೂ ಕೆ.ಆರ್. ಪೇಟೆ ಕ್ಷೇತ್ರದ ನಾರಾಯಣಗೌಡ ಅವರು ಶಾಸಕತ್ವದಿಂದ ಅನರ್ಹಗೊಂಡಿದ್ದು, ಇದರಿಂದಾಗಿ ಈ ಮೂರು ಕ್ಷೇತ್ರಗಳಲ್ಲಿ ಚುನಾವಣೆ ಎದುರಾದರೆ ಈ ಮೂರು ಕ್ಷೇತ್ರಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಶತಾಯಗತಾಯ ಅಲ್ಲಿ ಗೆಲುವು ಸಾಧಿಸಲು ಜೆಡಿಎಸ್ ಪಕ್ಷದ ವತಿಯಿಂದ ಕಾರ್ಯತಂತ್ರ ರೂಪಿಸಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

JDS Devegowda Byelection Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ