ಬಂಡೀಪುರದಲ್ಲಿ ಹಗಲಿನಲ್ಲಿ ಸಂಚಾರ ಬಂದ್ ಇಲ್ಲ!

Bandpura

12-09-2019

ಚಾಮರಾಜನಗರ: ಕರ್ನಾಟಕ ಕೇರಳ ರಾಜ್ಯಗಳ ನಡುವೆ ರಾಜ್ಯದ ಬಂಡೀಪುರ ರಾಷ್ಟ್ರೀಯ ಉದ್ಯಾನವನದೊಳಗಿರುವ ರಾಷ್ಟ್ರೀಯ ಹೆದ್ದಾರಿ 766 ಮತ್ತು 67ರಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ಬಂದ್‍ ಆಗಿದೆಯೇ ವಿನಃ ದಿನಪೂರ್ತಿ ವಾಹನ ಸಂಚಾರ ಬಂದ್ ಮಾಡುವ ಚಿಂತನೆ ಅರಣ್ಯ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಚಾಮರಾಜನಗರಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಟಿ. ಬಾಲಚಂದ್ರ ಸ್ಪಷ್ಟಪಡಿಸಿದ್ದಾರೆ.

 ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಕೇರಳಕ್ಕೆ ಸಂಪರ್ಕ ಹೊಂದಿರುವ ರಾಷ್ಟ್ರೀಯ ಹೆದ್ದಾರಿ ಸುಲ್ತಾನ್ ಬತ್ತೇರಿ ಮಾರ್ಗ 766 ಮತ್ತು ಬಂಡೀಪುರಗೂಡ್ಲೂರು ಮಾರ್ಗ 67ರಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರ ತನಕ ವಾಹನ ಸಂಚಾರವನ್ನು ಮಾತ್ರ ಬಂದ್ ಮಾಡಲಾಗಿದ್ದು, ಈ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಈ ನಡುವೆ ಕೇರಳ ರಾಜ್ಯ ಸರ್ಕಾರವು ರಾತ್ರಿ ವೇಳೆ ವಾಹನ ಸಂಚಾರ ಮುಕ್ತಗೊಳಿಸುವಂತೆ ಸುಪ್ರೀಂಕೋರ್ಟ್ ಗೆ ರಿಟ್‍ಅರ್ಜಿ ಸಲ್ಲಿಸಿದ್ದರಿಂದ ಸುಪ್ರಿಂಕೋರ್ಟ್ ಬದಲಿ ರಸ್ತೆ ಮಾರ್ಗದ ವಿಚಾರವಾಗಿ ಪರಿಶೀಲನೆ ಮಾಡಲು ನಾಲ್ಕು ಇಲಾಖೆಗಳಿಗೆ ಸೂಚನೆ ನೀಡಿದೆ. ಅದರಂತೆ ಸಂಬಂಧಿಸಿದ ಇಲಾಖೆಗಳು ಕರ್ನಾಟಕ-ಕೇರಳದ ನಡುವೆ ವಾಹನ ಸಂಚಾರಕ್ಕೆ ಬದಲಿ ರಸ್ತೆ ಮಾರ್ಗ ಮತ್ತು ಅಂದಾಜಿನ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರದ ಮೂಲಕ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಕೆಯಾಗಲಿದೆ ಎಂದು ಅವರು ಹೇಳಿದರು.

 ಯಾವುದೇ ಕಾರಣಕ್ಕೂ ಕರ್ನಾಟಕ-ಕೇರಳ ನಡುವೆಇರುವ ಬಂಡೀಪುರರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದೊಳಗೆ ರಾತ್ರಿ ವೇಳೆ ವಾಹನ ಸಂಚಾರ ಆರಂಭಿಸಬಾರದು ಹಾಗೂ ಕೇರಳ ರಾಜ್ಯದ ಎನ್‍ಜಿಓ ಸಂಸ್ಥೆಯೊಂದು ಪ್ರಾಣಿಗಳು ಕೇವಲ ಎರಡು ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಮಾಡುತ್ತವೆಎಂದು ವರದಿ ನೀಡಿರುವುದು ಹಾಸ್ಯಾಸ್ಪದವಾಗಿದೆ. ಪ್ರಾಣಿಗಳ ಸ್ವಚ್ಛಂದ ವಿಹಾರ ಮತ್ತು ಸುರಕ್ಷತೆಗಾಗಿ ರಾತ್ರಿ ವೇಳೆ ವಾಹನ ಸಂಚಾರವನ್ನು ಮುಂದುವರೆಸಬಾರದೆಂದು ಮಾಜಿ ವೈಲ್ಡ್‍ಲೈಫ್ ವಾರ್ಡನ್ ನವೀನ್‍ಕುಮಾರ್ ಸರ್ಕಾರಕ್ಕೆ ಮತ್ತು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

ಈ ನಡುವೆ ಕರ್ನಾಟಕ ಮತ್ತು ಕೇರಳ ಮಧ್ಯೆ ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ ಎಂಬ ವದಂತಿ ಹಿನ್ನಲೆಯಲ್ಲಿ ಕೂಲಿ ಕಾರ್ಮಿಕರು ಇತ್ತೀಚೆಗೆ ಪ್ರತಿಭಟನೆ ನಡೆಸಿ ಸಂಚಾರ ನಿರ್ಬಂಧಿಸದಂತೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರಾಣಿಗಳ ಜೀವ ಸಂಕುಲದ ಬಗ್ಗೆ ಅನುಕಂಪ ತೋರದ ಕೇರಳ ಸರ್ಕಾರವು, ಪ್ರಾಣಿಗಳ ಜೀವಕ್ಕಿಂತ ತನ್ನರಾಜ್ಯದ ವಾಣಿಜ್ಯ ಉದ್ಯಮ ಅಭಿವೃದ್ಧಿಗಾಗಿ ರಾತ್ರಿ ವೇಳೆ ಅಭಯಾರಣ್ಯದೊಳಗೆ ವಾಹನ ಸಂಚಾರಕ್ಕೆ ಪಟ್ಟು ಹಿಡಿದಿರುವುದು ದುರಂತವೇ ಸರಿ. ಈ ಬಗ್ಗೆ ಸುಪ್ರೀಂಕೋರ್ಟ್‍ಯಾ ವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


ಸಂಬಂಧಿತ ಟ್ಯಾಗ್ಗಳು

Bandipura National Park Kerala Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ