ಶಾಸಕರ ಹೆಚ್ಚುವರಿ ಅನುದಾನಕ್ಕೆ ಕತ್ತರಿ!

Vidhana Soudha

12-09-2019

ಬೆಂಗಳೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ನೀಡಿದ್ದ ಸುಮಾರು 10 ಸಾವಿರ ಕೋಟಿ ರೂ.ಗಳಷ್ಟು ಅನುದಾನವನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ, ಅದರಲ್ಲೂ ಕೆಲವು ಕ್ಷೇತ್ರಗಳ ಮೇಲೆ ತೋರಿದ್ದ ವಿಶೇಷ ಪ್ರೀತಿಗೆ ಕತ್ತರಿ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿರುವ ಯಡಿಯೂರಪ್ಪ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ ಎಂಬ ಅಂಶವನ್ನು ಮುಂದಿಟ್ಟು, ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ವಿವರವನ್ನು ತರಿಸಿಕೊಂಡಿದ್ದಾರೆ. ಹೀಗೆ ಅನುದಾನ ಮಂಜೂರಾದ ಕ್ಷೇತ್ರಗಳ ಪೈಕಿ ಯಾವ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ ಎಂಬ ಅಂಶವನ್ನು ವಿಶೇಷವಾಗಿ ಗಮನಿಸುತ್ತಿರುವ ಬಿಎಸ್‍ವೈ ಹೆಚ್ಚುವರಿ ಅನುದಾನ ಪಡೆದಿರುವ ಕ್ಷೇತ್ರಗಳಿಗೆ ಹಣಕಡಿತ ಮಾಡಲಿದ್ದಾರೆ.

ಕೆಲ ಶಾಸಕರ ಕ್ಷೇತ್ರಗಳಿಗೆ ಹಲವು ಕ್ಷೇತ್ರಗಳಿಗಿಂತ ಮೂರು, ನಾಲ್ಕು ಪಟ್ಟು ಹೆಚ್ಚುವರಿ ಅನುದಾನ ನೀಡಲಾಗಿದ್ದು, ಈ ಹೆಚ್ಚುವರಿ ಅನುದಾನದ ಬಾಬ್ತನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹೀಗೆ ಯಾವ ಯಾವ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ನೀಡಲಾಗಿದೆ? ಮತ್ತು ಅದನ್ನು ಹೇಗೆ ಕಡಿತ ಮಾಡಬೇಕು? ಎಂಬ ಕುರಿತು ಸಿಎಂ ಲೆಕ್ಕ ಹಾಕುತ್ತಿರುವುದರಿಂದ ಉಭಯ ಪಕ್ಷಗಳ ಕೆಲವು ಶಾಸಕರು ಬಿಜೆಪಿಯೆಡೆ ದೌಡಾಯಿಸಲು ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

 ಹೆಚ್ಚುವರಿ ಅನುದಾನ ಸಿಕ್ಕಿರುವುದರಿಂದ ಅಗತ್ಯ ಕೆಲಸ ಮಾಡಿಸಬಹುದು. ಆ ಮೂಲಕ ಕ್ಷೇತ್ರದಲ್ಲಿ ಕೆಲಸಗಳಾಗಿವೆ ಎಂದು ಜನರಿಗೆ ತೋರಿಸಬಹುದು. ಪರಿಣಾಮಕಾರಿಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ತಮಗೆ ಅನುಕೂಲ ಮಾಡಿಕೊಡಲಿದೆ ಎಂಬುದು ಆ ಶಾಸಕರ ಯೋಚನೆಯಾಗಿತ್ತು.

 ಆದರೆ ಹೀಗೆ ಲಭ್ಯವಾದ ಹೆಚ್ಚುವರಿ ಅನುದಾನ ಕಡಿತಗೊಳ್ಳುವುದಷ್ಟೇ ಅಲ್ಲದೆ, ಉಳಿದ ಅನುದಾನದ ಹಣದಲ್ಲೂ ಕಡಿತವಾದರೆ ಮುಂದಿನ ದಿನಗಳು ಕಷ್ಟವಾಗುತ್ತವೆ ಎಂಬ ಲೆಕ್ಕಾಚಾರಕ್ಕೆ ಬಂದಿರುವ ಉಭಯ ಪಕ್ಷಗಳ ಶಾಸಕರು, ಮುಖ್ಯಮಂತ್ರಿಯಡಿಯೂರಪ್ಪಗೆ ದುಂಬಾಲು ಬಿದ್ದಿದ್ದಾರೆಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

MLA BS Yediyurappa Karnataka Government BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ