ಪತಿಯ ಹತ್ಯೆಗೆ ಪತ್ನಿ ಸಂಚು: ಸತ್ಯ ಬಯಲಾದದ್ದೇ ರೋಚಕ!

Crime

11-09-2019

ಬೆಂಗಳೂರು: ಪ್ರಿಯಕರನ ಜತೆಗೂಡಿ ಪತಿಯ ಹತ್ಯೆಗೆ ಸಂಚು ಮಾಡಿದ್ದ ಪತ್ನಿಯ ನಿಜಬಣ್ಣ ಮೊಬೈಲ್ ಕರೆ ಸಂಖ್ಯೆಗಳು ಹಾಗೂ ಆಡಿಯೋ ರೇಕಾರ್ಡಿಂಗ್‍ನಿಂದ  ಬಯಲಾಗಿದ್ದು. ಪ್ರಕರಣ ಪರಿಹಾರ ಕೇಂದ್ರದ ಮೆಟ್ಟಿಲೇರಿ ಕೊನೆಗೆ ದಂಪತಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ.

ತುಮಕೂರಿನ 24 ವರ್ಷದ ಯುವತಿ ಹಾಗೂ ಕೆ.ಆರ್. ಪುರದ 34 ವರ್ಷದ ಸಿವಿಲ್ ಇಂಜಿನಿಯರ್ 6 ವರ್ಷಗಳ ಹಿಂದೆ ಮದುವೆಯಾಗಿ ಕೆ.ಆರ್. ಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ದಂಪತಿಗೆ 4 ವರ್ಷದ ಪುತ್ರನಿದ್ದಾನೆ.

ಗೃಹಿಣಿಯಾಗಿದ್ದ ಪತ್ನಿಗೆ ಮನೆ ಮಾಲೀಕನ 24 ವರ್ಷದ ಪುತ್ರನ ಜತೆ ಸ್ನೇಹ ಬೆಳೆದಿರುವುದು ಪತಿಗೆ ಗೊತ್ತಾಗಿ ಮನೆಯನ್ನು ವಿಜಯನಗರಕ್ಕೆ ಸ್ಥಳಾಂತರ ಮಾಡಿದ್ದ. ಆದರೂ ಪತ್ನಿ, ಪ್ರಿಯಕರನ ಜತೆಗೆ ಮೊಬೈಲ್ ಸಂಭಾಷಣೆ ನಡೆಸುವುದನ್ನು ಬಿಟ್ಟಿರಲಿಲ್ಲ. ಕೊನೆಗೆ ಮೊಬೈಲ್ ಕಸಿದುಕೊಂಡು ಪತ್ನಿಗೆ ಪತಿ ಬುದ್ಧಿವಾದ ಹೇಳಿದ್ದ.

ಆದರೂ ಬಿಡದ ಪತ್ನಿ, ತನ್ನ ಅತ್ತೆಯ ಬಳಿಯಿದ್ದ ಮೊಬೈಲ್‍ನಿಂದ ಪ್ರಿಯಕರನ ಜತೆ ಸಂಪರ್ಕ ಸಾಧಿಸಿದ್ದಳು. ತಿಂಗಳ ನಂತರ ತಾಯಿ, ನಿನ್ನ ಹೆಂಡತಿ ಮನೆ ಕೆಲಸ ಸರಿಯಾಗಿ ಮಾಡುವುದಿಲ್ಲ. ಸದಾ ಕಾಲ ಮೊಬೈಲ್ ಸಂಭಾಷಣೆಯಲ್ಲಿ ನಿರತವಾಗಿರುತ್ತಾಳೆ ಎಂದು ಪುತ್ರನಿಗೆ ದೂರು ಹೇಳಿದ್ದರು. ಆಗ ಪತಿಗೆ, ತನ್ನ ತಾಯಿಯ ಮೊಬೈಲ್ ಅನ್ನು ಪತ್ನಿ ಬಳಸುತ್ತಿರುವುದು ಗೊತ್ತಾಗಿದೆ.

ಆಗ ಪತಿ, ಹೊಸ ಸ್ಮಾರ್ಟ್ ಫೋನ್ ತಂದು ತಾಯಿಗೆ ಕೊಟ್ಟು ಸೊಸೆ ಕೇಳಿದರೆ ಕೊಡುವಂತೆ ಹೇಳಿದ್ದ. ಪತ್ನಿ ಮೊದಲಿನಂತೆ ಅತ್ತೆಯ ಮೊಬೈಲ್ ಪಡೆದು ಪ್ರಿಯಕರನಿಗೆ ಕರೆ ಮಾಡಿ ಮಾತನಾಡುತ್ತಿದ್ದಳು. ಕೆಲಸದಿಂದ ರಾತ್ರಿ ಮನೆಗೆ ವಾಪಸಾಗುತ್ತಿದ್ದ ಪತಿ, ತಾಯಿ ಮೊಬೈಲ್ ಪಡೆದು ಶೌಚಗೃಹಕ್ಕೆ ತೆರಳಿ ಆಡಿಯೋ ರೆಕಾರ್ಡಿಂಗ್ ಆಗಿದ್ದ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ.

ಇತ್ತೀಚೆಗೆ ಪತ್ನಿ, ತನಗೆ ತಂದೆಯನ್ನು ನೋಡುವ ಆಸೆ ಉಂಟಾಗಿದೆ. ತುಮಕೂರಿಗೆ ಕರೆದುಕೊಂಡು ಹೋಗುವಂತೆ ಕೇಳಿದ್ದಳು. ಅಲ್ಲದೆ, ರೈಲು ನಿಲ್ದಾಣಕ್ಕೆ ಬೈಕ್‍ನಲ್ಲಿ ಡ್ರಾಪ್ ಮಾಡುವಂತೆ ಒತ್ತಾಯಿಸಿದ್ದಳು. ಓಲಾ, ಉಬರ್ ಕ್ಯಾಬ್‍ನಲ್ಲಿ ಹೋಗುವಂತೆ ಹೇಳಿದಾಗ, ನೀವೇ ಡ್ರಾಪ್ ಕೊಡಬೇಕೆಂದು ಪಟ್ಟು ಹಿಡಿದಿದ್ದಳು. ಆಕೆ ಈ ನಡೆ ಬಗ್ಗೆ ಅನುಮಾನ ಬಂದು ಹಿಂದಿನ ರಾತ್ರಿಯ ಕಾಲ್ ರೆಕಾರ್ಡಿಂಗ್ ಸಂಭಾಷಣೆ ಕೇಳಿಸಿಕೊಂಡಾಗ ಪ್ರಿಯಕರ ಜತೆಗೂಡಿ ಹತ್ಯೆಗೆ ಸಂಚು ರೂಪಿಸಿರುವುದು ಗೊತ್ತಾಗಿದೆ.

ಮರುದಿನ ಬೆಳಗ್ಗೆ ಪತಿ ಆಕೆಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ರೈಲು ನಿಲ್ದಾಣದ ಬದಲಿಗೆ ವಿಜಯನಗರ ಠಾಣೆಗೆ ಕರೆದೊಯ್ದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಲ್ಲಿಂದ ದಂಪತಿಯನ್ನು ಪರಿಹಾರ ಕೇಂದ್ರಕ್ಕೆ ಕೌನ್ಸೆಲಿಂಗ್‍ಗೆ ಪೊಲೀಸರು ಕಳುಹಿಸಿದ್ದರು. ಮತ್ತೊಂದೆಡೆ ಪ್ರಕರಣ ತನಿಖೆ ಕೈಗೊಂಡು ಪೊಲೀಸರು ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಕೌನ್ಸ್ಸೆಲಿಂಗ್ ಮಾಡಲು ಸಾಧ್ಯವಾಗದಿದ್ದಾಗ ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಬಳಿಕ ದಂಪತಿಗೆ ವಿಚ್ಛೇದನ ಪಡೆಯಲು ನಿರ್ಧರಿಸಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Crime Husband Murder Court


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ