ಬಿಜೆಪಿಗೆ ರಾಮಲಿಂಗಾರೆಡ್ಡಿ ಎಚ್ಚರಿಕೆ

Ramalingareddy Statement

10-09-2019

ಬೆಂಗಳೂರು: ದೇಶದಲ್ಲಿ ಬಿಜೆಪಿ ಕೆಟ್ಟ ಸಂಪ್ರದಾಯ ಸೃಷ್ಟಿಸಿದ್ದು ಈ ಪದ್ದತಿ ಮುಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ಪರಿಣಮಿಸಲಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಖಾಸಗಿ ಹೊಟೇಲಿನಲ್ಲಿ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಹಾಗೂ ಅವರನ್ನು ಬೆಂಬಲಿಸಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರತಿಪಕ್ಷಗಳನ್ನು ಮುಗಿಸುವ ಕೆಲಸಕ್ಕೆ ಬಿಜೆಪಿ ಕೈಹಾಕಿದೆ. ಬಿಜೆಪಿಯ ಇಂತಹ ಕೆಟ್ಟ ಸಂಪ್ರದಾಯ ಮುಂದಿನ ದಿನಗಳಲ್ಲಿ ಅವರಿಗೆ ಶಾಪವಾಗಿ ಪರಿಣಮಿಸಲಿದೆ. ಕೇಂದ್ರ ಸರ್ಕಾರದ ಸುಪರ್ದಿನಲ್ಲಿರುವ ಐಟಿ, ಇಡಿ, ಸಿಬಿಐ ತನಿಖಾ ಸಂಸ್ಥೆಗಳು ಸ್ವತಂತ್ರ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿ ಸೂಚನೆಯಂತೆ ಕುಣಿಯುತ್ತಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡು ದುರುದ್ದೇಶದಿಂದ ಕಿರುಕುಳ ಕೊಡುತ್ತಿದ್ದಾರೆ. ಈ ವಿಷಯ ಬಗ್ಗೆ ಪಕ್ಷದ ಹಾಗೂ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದೇವೆ. ಡಿಕೆ ಶಿವಕುಮಾರ್ ಬಂಧನ ಖಂಡಿಸಿ ನಾಳೆ ನ್ಯಾಷನಲ್ ಕಾಲೇಜು ಮೈದಾನದಿಂದ ಪ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸುತ್ತೇವೆ ಎಂದರು.
ನಾಳಿನ ಪ್ರತಿಭಟನೆಯಲ್ಲಿ ವಿವಿದ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಒಕ್ಕಲಿಗ ಸಮುದಾಯದ ಮುಖಂಡರು, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಈಗಾಗಲೇ ಕರೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಕೇಂದ್ರಿಯ ತನಿಖಾ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿ ಟಾರ್ಗೆಟ್ ಮಾಡುತ್ತಿದ್ದಾರೆ. ತಮಗೇನು ಐಟಿ, ಇಡಿಯವರ ಬಗ್ಗೆ ಯಾವುದೇ ಭಯವಿಲ್ಲ. ತಪ್ಪು ಮಾಡಿದರೆ ತಾನೇ ಭಯ.ದುರುದ್ದೇಶಪೂರ್ವಕ ಗುರಿಯಾಗಿಸುವುದು ತಪ್ಪು ಎಂದರು.
ದೆಹಲಿಯಲ್ಲಿನ ಸುನೀಲ್ ಶರ್ಮಾ ನಿವಾಸದಲ್ಲಿ 8.5 ಕೋಟಿ ರೂ ಹಣ ಐಟಿ ದಾಳಿ ವೇಳೆ ದೊರೆತಿದೆ, ಶರ್ಮಾ ಅವರೇ ಹಣ ತಮ್ಮದೆಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಇಷ್ಟದರೂ ಡಿ.ಕೆ ಶಿವಕುಮಾರ್ ಅವರ ಹಣವೆಂದು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಅವರು ತಮ್ಮದೇ ಹಣವೆಂದು ಒಪ್ಪಿಕೊಳ್ಳುವಂತೆ ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

DK Shivkumar Ramalingareddy Congress Protest


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ