ಒಕ್ಕಲಿಗ ಸಮಾಜದವರಿಗೆ ಡಿಸಿಎಂ ಎಚ್ಚರಿಕೆ!

Ashwath Narayana Statement

10-09-2019

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಪ್ರತಿಭಟನೆಗೆ ಮುಂದಾಗಿರುವ ಒಕ್ಕಲಿಗ ಸಮಾಜದ ವಿರುದ್ಧ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಜಾತಿ ಇರುವುದು ಸಮಾಜದ ಉದ್ಧಾರಕ್ಕಾಗಿಯೇ ಹೊರತು ಭ್ರಷ್ಟಾಚಾರ, ಬೇನಾಮಿ ಆಸ್ತಿ ಮಾಡಿದವರ ಪರವಾಗಿ ಕೆಲಸ ಮಾಡಲು ಅಲ್ಲ ಎಂದಿದ್ದಾರೆ.
ನಗರದ ಮಹಾಲಕ್ಷ್ಮೀ ಬಡಾವಣೆಯ ವಾಸವಿ ದೇವಾಲಯದಲ್ಲಿ ನಡೆದ ಹರಿಹರಪುರ ಮಠದ ಸಚ್ಚಿದಾನಂದ ಅಭಿನವ ಭಾರತಿ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಡಿ.ಕೆ ಶಿವಕುಮಾರ್ ಬೆಂಬಲಿಗರು ಹಾಗೂ ಒಕ್ಕಲಿಗ ಸಮುದಾಯ ಪ್ರತಿಭಟನೆ ಆಯೋಜಿಸಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ದೇಶದ ಸಂವಿಧಾನವನ್ನು ಗೌರವಿಸುವುದರ ಜೊತೆ ಕಾನೂನಿನ ಪರಿಪಾಲನೆಯೂ ಮುಖ್ಯ. ಕಾನೂನನ್ನು ವಿರೋಧಿಸುವ ಕೆಲಸ ನಡೆಯಬಾರದು ಎನ್ನುವ ಮೂಲಕ ಪ್ರತಿಭಟನೆಯ ಹೆಸರಿನಲ್ಲಿ ಹಿಂಸೆ ನಡೆದರೆ ಕಾನೂನುಕ್ರಮ ಜರುಗಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿ.ಕೆ ಶಿವಕುಮಾರ್ ಅವರೇ ಈ ನೆಲದ ಕಾನೂನಿನ ಮೇಲೆ ತಮಗೆ ಗೌರವ ಇದೆ ಎಂದಿದ್ದಾರೆ. ಸಮಾಜ ಭ್ರಷ್ಟಾಚಾರದಲ್ಲಿ ತತ್ತರಿಸಿದ್ದು, ಜಾತಿಯನ್ನೂ ಮೀರಿ ಭ್ರಷ್ಟಾಚಾರ ರಹಿತ ಸಮಾಜ‌ ನಿರ್ಮಾಣ ಮಾಡಬೇಕು. ಈ ದಾರಿಯಲ್ಲಿ ಎಲ್ಲರೂ ಒಂದಾಗಿ ನಡೆಯಬೇಕು. ಹೀಗಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡು ಹತಾಶರಾಗಿದ್ದಾರೆ. ಅವರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ ಎಂಬುದನ್ನು ಕುಮಾರಸ್ವಾಮಿ ಅವರನ್ನೇ‌ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಕಾಂಗ್ರೆಸ್ ಹಾಗು ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿಯಾಗಿದ್ದಾರೆ.ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರದ ಅವಧಿಯ ಯಾವುದೇ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿಲ್ಲ. ಹಣ ದುರ್ಬಳಕೆಯನ್ನ ತಡೆಯುವುದು ಮಾತ್ರ ನಮ್ಮ ಉದ್ದೇಶ. ಅನ್ನಭಾಗ್ಯ, ಕೃಷಿಭಾಗ್ಯ, ವೈಟ್ ಟಾಪಿಂಗ್ ಯೋಜನೆಯಲ್ಲಿ ಆಗಿರುವ ಲೋಪ‌ಸರಿಪಡಿಸುವುದು ನಮ್ಮ ‌ಕರ್ತವ್ಯ. ಹೀಗಾಗಿ ಕೆಲವು ಪ್ರಕರಣನ್ನು ತನಿಖೆಗೆ ವಹಿಸಿದ್ದೇವೆಯೇ ಹೊರತು ಯಾವುದೇ ಯೋಜನೆಯನ್ನು ನಿಲ್ಲಿಸುವ ದುರುದ್ದೇಶ ಸರ್ಕಾರಕ್ಕಿಲ್ಲ. ಅವ್ಯವಹಾರ, ತಪ್ಪಾಗಿದ್ದರೆ ಸರಿಪಡಿಸೋದು ಮುಖ್ಯಮಂತ್ರಿಗಳು ಮತ್ತು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.


ಸಂಬಂಧಿತ ಟ್ಯಾಗ್ಗಳು

Ashwath Narayan DCM BJP DK Shivkumar


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ