‘ಸಂಚಾರ ನಿಯಮ ಉಲ್ಲಂಘಿಸಿ ಏಕೆ ದಂಡ ಕಟ್ಟುತ್ತೀರಿ’?

Traffic rules violation

09-09-2019

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವುದನ್ನು ವಿರೋಧಿಸಿ ವಾಹನ ಚಾಲಕರು ಪ್ರತಿಭಟನೆ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ಸಂಚಾರ ನಿಯಮ ಉಲ್ಲಂಘನೆ ಮಾಡದಿದ್ದರೆ, ಏಕೆ ದಂಡ ಬೀಳುತ್ತದೆ ಎಂದು ಪ್ರಶ್ನಿಸಿದರು.

ನಗರದಲ್ಲಿನ ರಸ್ತೆ ಹಾಗೂ ಸಂಚಾರ ಶಿಸ್ತು ತರಲು ದುಬಾರಿ ದಂಡ ವಿಧಿಸುವುದು ಅನಿವಾರ್ಯವಾಗಿದೆ. ದುಬಾರಿ ದಂಡದಿಂದ ರಾಜ್ಯದ ಬೊಕ್ಕಸ ತುಂಬಬೇಕಾದ ಅಗತ್ಯವಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕಾಗುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹೊಸಮೋಟಾರು ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 5 ಕೋಟಿ ಕರಪತ್ರಗಳನ್ನು ಮುದ್ರಿಸಿ ಹಂಚಲಾಗುವುದು, ನಗರದ ಪ್ರತಿ ಮನೆಮನೆಗೆ ದಿನಪತ್ರಿಕೆಗಳ ಜೊತೆ ಕರಪತ್ರಗಳನ್ನು ಹಂಚಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಇನ್ನಿತರ ಮಾಧ್ಯಮಗಳ ಮೂಲಕ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಂಚಾರ ನಿಯಮ ಉಲ್ಲಂಘಿಸಿ ಏಕೆ ದಂಡ ಕಟ್ಟುತ್ತೀರ? ಎಂದು ವಾಹನ ಸವಾರರನ್ನು ಪ್ರಶ್ನಿಸಿದ ಅವರು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ತಮ್ಮ ಜೀವದ ಅಪಾಯ ಹಾಗೂ ಬೇರೊಬ್ಬರ ಜೀವಕ್ಕೆ ತರುವುದನ್ನು ತಡೆಗಟ್ಟಿ ಎಂದು ಸಲಹೆ ಮಾಡಿದರು.

ದುಬಾರಿ ದಂಡ ಜಾರಿಗೆ ಬಂದ ನಂತರ, ಅಪಾಯಕಾರಿ ಚಾಲನೆ, ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚಾರ, ವಾಹನ ನಿಲುಗಡೆ ಇಲ್ಲದ ಕಡೆಗಳಲ್ಲಿ ವಾಹನ ನಿಲ್ಲಿಸುವುದು, ಇನ್ನಿತರ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ದಂಡ ವಿಧಿಸಲಾಗುತ್ತಿದೆ ಎಂದರು.

ಎರಡು ದಿನಗಳ ಹಿಂದೆ ಸ್ಕೂಲ್ ವಾಹನದ ಚಾಲಕನೊಬ್ಬ 14 ಮಂದಿ ಮಕ್ಕಳನ್ನು ಕೂರಿಸಿಕೊಂಡು ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಸಂಚರಿಸಿದ್ದ. ಕೂಡಲೇ ಆತನಿಗೆ 14 ಸಾವಿರ ರೂ. ಗಳ ದಂಡ ವಿಧಿಸಲಾಗಿದೆ ಎಂದು ಹೇಳಿದರು.

ಡಿಜಿ ಲಾಕರ್ ಜಾರಿ

ವಾಹನ ತಪಾಸಣೆ ನಡೆಸುವ ಸಂಚಾರ ಪೊಲೀಸರಿಗೆ ವಾಹನ ಚಾಲಕರು ಚಾಲನಾ ಪರವಾನಗಿ, ಇನ್ನಿತರ ದಾಖಲಾತಿಗಳನ್ನು ಡಿಜಿ ಲಾಕರ್‍ನಲ್ಲಿರುವುದನ್ನು ತೋರಿಸಬಹುದು. ಇಲ್ಲದಿದ್ದರೆ, ದಾಖಲಾತಿಗಳ ನಕಲು ಪ್ರತಿಗಳನ್ನು ತೋರಿಸಿದರೆ ಸಾಕು. ಯಾವುದೇ ದಂಡ ವಿಧಿಸುವುದಿಲ್ಲ ಎಂದು ಭಾಸ್ಕರ್ ರಾವ್ ತಿಳಿಸಿದರು.

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸದೆ, ಶಿಸ್ತನ್ನು ಕಾಪಾಡಿಕೊಂಡಿದ್ದರೆ, ಉಳಿದ ದಾಖಲಾತಿಗಳ ಬಗ್ಗೆ ಸದ್ಯಕ್ಕೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದ ಅವರು, ಗಣ್ಯರು ಸಂಚಾರ ಉಲ್ಲಂಘನೆ ಮಾಡಿದರೆ, ಮುಂದಿನ ದಿನಗಳಲ್ಲಿ ಅವರಿಗೂ ದಂಡ ವಿಧಿಸಲಾಗುವುದು ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Traffic Rules Violation Bhaskar Rao Fine


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ