ಸರ್ಕಾರದಿಂದ ಸೋಲಾರ್ ಪಾರ್ಕ್ ನೀತಿ ಪರಿಷ್ಕರಣೆ

Solar Park

06-09-2019

ಬೆಂಗಳೂರು: ರಾಜ್ಯದಲ್ಲಿ ಹೆಚ್ಚು ವಿದ್ಯುತ್‍ನ್ನು ಉತ್ಪಾದಿಸಲು ಪೂರಕವಾಗಿ ಸೋಲಾರ್ ಪಾರ್ಕ್ ನೀತಿಯನ್ನು ಸರ್ಕಾರ ಪರಿಷ್ಕರಿಸಿದ್ದು ಇನ್ನು ಮುಂದೆ 25 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದವರಿಗೂ ಕೇಂದ್ರದಿಂದ ಶೇಕಡಾ 20 ರಷ್ಟು ಸಬ್ಸಿಡಿ ಸಿಗಲಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಒಪ್ಪಿಗೆ ನೀಡಲಾಗಿದ್ದು ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು. ಒಂದು ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದಿಸಲು ಐದು ಎಕರೆ ಭೂಮಿ ಬೇಕು. ಹೀಗಿರುವಾಗ ನೂರು  ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕನಿಷ್ಟ ಐನೂರು ಎಕರೆ ಭೂಮಿ ಬೇಕು. ಆದರೆ ಇಷ್ಟು ಪ್ರಮಾಣದ ಭೂಮಿ ಪಡೆದು ವಿದ್ಯುತ್ ಉತ್ಪಾದಿಸಿದರೆ ಅದಕ್ಕೆ ಸೋಲಾರ್ ಪಾರ್ಕ್ ಎಂದು ಪರಿಗಣಿಸಲಾಗುತ್ತದೆ.

ಆದರೆ ಸೋಲಾರ್ ನೀತಿ ಹೀಗೇ ಇದ್ದರೆ ಭಾರೀ ಹಣವಂತರು ಮಾತ್ರ ಸೋಲಾರ್ ಪಾರ್ಕ್‍ಗಳನ್ನು ನಿರ್ಮಿಸಬಹುದು. ಉಳಿದವರು ಸೋಲಾರ್ ಪಾರ್ಕ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸೋಲಾರ್ ನೀತಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದ್ದು ಇನ್ನು ಮುಂದೆ ನೂರಿಪ್ಪತ್ತೈದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದರೂ ಅದನ್ನು ಸೋಲಾರ್ ಪಾರ್ಕ್ ಎಂದು ಪರಿಗಣಿಸಲಾಗುವುದು.

ಹೀಗಾಗಿ ಇವರಿಗೂ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಶೇಕಡಾ ಇಪ್ಪತ್ತರಷ್ಟು ಸಬ್ಸಿಡಿ ಸಿಗಲಿದೆ. ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತುಗಳು ಲಭ್ಯವಾಗಲಿವೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

ಹಾಗೆಯೇ ವಿದ್ಯುತ್ ಉತ್ಪಾದಿಸುವವರು ಖಾಸಗಿಯವರಿಗೆ,ಕಾರ್ಪೋರೇಟ್ ಸಂಸ್ಥೆಗಳಿಗೂ ಅದನ್ನು ಮಾರಬಹುದು.ಯಾಕೆಂದರೆ ಸಧ್ಯದ ಸ್ಥಿತಿಯಲ್ಲಿ ವಿದ್ಯುತ್‍ನ ಲಭ್ಯತೆ ಹೆಚ್ಚಿದೆ.ಭವಿಷ್ಯದಲ್ಲಿ ವಿದ್ಯುತ್ ಕೊರತೆಯಾದರೆ ಅವರು ನಮಗೇ ವಿದ್ಯುತ್ ನೀಡಬೇಕು ಎಂದು ಹೇಳಬಹುದು ಎಂದು ವಿವರ ನೀಡಿದರು.

ಹೈದ್ರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಇನ್ನು ಮುಂದೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂದು ಕರೆಯಲಾಗುವುದು ಎಂದ ಅವರು, ಈ ಕುರಿತ ಪ್ರಸ್ತಾಪಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು.

ವಿಶ್ವೇಶ್ವರ ಜಲನಿಗಮ ಹೊರಗಿನಿಂದ 735 ಕೋಟಿ ಸಂಪನ್ಮೂಲ ಸಂಗ್ರಹಿಸಲು ಇಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.ಹಾಗೆಯೆ ಕಾವೇರಿ ನೀರಾವರಿ ನಿಗಮದ ವತಿಯಿಂದ 250 ಕೋಟಿ ರೂ ಸಂಗ್ರಹಿಸಲು ಅನುಮತಿ ನೀಡಲಾಗಿದೆ ಎಂದರು.

ಪುರಸಭೆ,ನಗರಸಭೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಮಾದರಿಯೊಂದನ್ನು ಸಿದ್ದಗೊಳಿಸಿ ಕಳಿಸಿಕೊಡಲಾಗಿದ್ದು ಆಯಾ ಸ್ಥಳೀಯ ಸಂಸ್ಥೆಗಳು ಕಸ ಸಂಗ್ರಹಣೆಗೆ ಸಂಬಂಧಿಸಿದಂತೆ ಶುಲ್ಕ ನಿಗದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.

ರಾಜ್ಯದ ಪೋಲೀಸರಿಗೆ ಔರಾದ್ಕರ್ ಸಮಿತಿ ನೀಡಿದ ಶಿಫಾರಸಿನ ಪ್ರಕಾರ ವೇತನವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿತ್ತು.ಇದೀಗ ಅದರೊಂದಿಗೆ ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸೇರ್ಪಡೆ ಮಾಡಿ ಅಗಸ್ಟ್ ಒಂದರಿಂದ ಪೂರ್ವಾನ್ವಯವಾಗುವಂತೆ ವೇತನ ಹೆಚ್ಚಳ ಮಾಡಲಾಗುವುದು ಎಂದರು.

ಇದರಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ 382.26 ಕೋಟಿ ರೂಗಳಷ್ಟು ಹೆಚ್ಚುವರಿ ಹೊರೆಯಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೊಪ್ಪಳ-ಗಿಣಿಗೇರಾ ರೈಲ್ವೇ ನಿಲ್ದಾಣದ ಅಭಿವೃದ್ಧಿಗೆ 13.88 ಕೋಟಿ ರೂ ಹಣ ನೀಡಲು ನಿರ್ಧರಿಸಲಾಗಿದ್ದು ಉಳಿದ ಶೇಕಡಾ ಐವತ್ತರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದರು. ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಕುಸಿದಾಗ ರೈತರ ನೆರವಿಗೆ ಬರಲು ಸಹಕಾರ ಇಲಾಖೆಯ ವತಿಯಿಂದ ಉಪಸಮಿತಿಯೊಂದನ್ನು ರಚಿಸಲಾಗಿದ್ದು ಇದರ ಕಾರ್ಯವ್ಯಾಪ್ತಿಯ ಕುರಿತು ತೀರ್ಮಾನಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿರುವುದಾಗಿ ವಿವರ ನೀಡಿದರು.


ಸಂಬಂಧಿತ ಟ್ಯಾಗ್ಗಳು

Solar Park Power Government Madhuswamy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ