ಸಾಂಕ್ರಾಮಿಕ ರೋಗ ತಡೆಗೆ ಕ್ರಮ : ಶ್ರೀರಾಮುಲು

B Shreeramulu statement

05-09-2019

ಬೆಂಗಳೂರು: ರಾಜ್ಯಾದ್ಯಂತ ಹಬ್ಬುತ್ತಿರುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಸರ್ಕಾರ  ಸೂಚನೆ ನೀಡಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಡೆಂಗ್ಯೂ,ಚಿಕೂನ್ ಗುನ್ಯಾ ಸೇರಿದಂತೆ ಹಲವು ವೈರಲ್ ಜ್ವರಗಳು ಹರಡುತ್ತಿದ್ದು ಇದರ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರಿ ಆಸ್ಪತ್ರೆಗಳು ಈ ವಿಷಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.ಹಾಗೆಯೇ ಖಾಸಗಿ ಆಸ್ಪತ್ರೆಗಳು ಕೂಡಾ ಸಮಸ್ಯೆ ಬಿಗಡಾಯಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ರಕ್ತಪರೀಕ್ಷೆಗೆ ಸಂಬಂಧಿಸಿದಂತೆ ದೆಹಲಿ ಮಾದರಿಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದ ಅವರು,ರಕ್ತ ಪರೀಕ್ಷೆಗೆ ಎಂದು ಒಂದು ಸಲ ರಕ್ತ ಕೊಟ್ಟರೆ ಹದಿನಾರಕ್ಕೂ ಹೆಚ್ಚು ಟೆಸ್ಟ್‍ಗಳನ್ನು ಮಾಡುವುದು ಇದರ ಭಾಗ ಎಂದರು.

ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ರಕ್ತ ಪರೀಕ್ಷೆ ಮಾಡಿಸುವುದು ರೋಗಿಗಳಿಗೆ ಹೊರೆಯಗುತ್ತದೆ ಎಂದ ಅವರು,ಇದರ ಬದಲು ರೋಗಿ ಒಂದು ಸಲ ರಕ್ತದ ಮಾದರಿ ನೀಡಿದರೆ ಹದಿನಾರಕ್ಕೂ ಹೆಚ್ಚು ಬಗೆಯ ಪರೀಕ್ಷೆಗಳನ್ನು ನಡೆಸುವುದು ದೆಹಲಿ ಮಾದರಿ ಎಂದರು.

ಅದನ್ನು ರಾಜ್ಯದಲ್ಲಿ ಜಾರಿಗೆ ತಂದರೆ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.ಸಮಯದ ಉಳಿತಾಯವಾಗುತ್ತದೆ.ಖರ್ಚಿನ ಭಾರವೂ ತಗ್ಗುತ್ತದೆ ಎಂದ ಅವರು,ಆರೋಗ್ಯ ಇಲಾಖೆಯಲ್ಲಿ ಒಂದೆರಡಲ್ಲ,ಹಲವು ಸಮಸ್ಯೆಗಳಿವೆ.ಎಲ್ಲವಕ್ಕೂ ಪರಿಹಾರ ಕಂಡು ಹಿಡಿಯುವುದಾಗಿ ವಿವರ ನೀಡಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಹೆಚ್ಚಳ ಮಾಡುವುದು ತಮ್ಮ ಗುರಿ ಎಂದ ಅವರು,ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಔಷಧ ಖರೀದಿ ವ್ಯವಹಾರದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ಹೇಳಿದ ಅವರು, ಆ ಕುರಿತು ಇನ್ನಷ್ಟು ವಿವರ ಪಡೆಯುತ್ತಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ತಮಗೆ ನೀಡಿದ ಈ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ನುಡಿದ ಅವರು,ರಾಜ್ಯ ಸಚಿವ ಸಂಪುಟ ವಿಸ್ತರಣೆಯ ರೀತಿಯಿಂದ ತಮಗೆ ಯಾವ ಬೇಸರವೂ ಆಗಿಲ್ಲ.ವರಿಷ್ಟರು ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರು.


ಸಂಬಂಧಿತ ಟ್ಯಾಗ್ಗಳು

B Shreeramulu BJP Health minister Fever


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ