‘ನೆರೆ ಪರಿಹಾರ ನೀಡಿದರೆ ಮಾತ್ರ ಹಾರ ಹಾಕಿ’

R Ashok Statement

05-09-2019

ಬೆಂಗಳೂರು: ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಣ ಹಾಕಿದರೆ ಮಾತ್ರ ನನಗೆ ಹಾರ ತುರಾಯಿ ಹಾಕಿ. ಇಲ್ಲದಿದ್ದರೆ ಹಾರ ತುರಾಯಿ ಹಾಕಲೇಬೇಡಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಮ್ಮ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸಚಿವರಾದ ನಂತರ ಇಂದು ವಿಧಾನಸೌಧದ ಕೊಠಡಿ (317) ಯಲ್ಲಿ ವಿದ್ಯುಕ್ತವಾಗಿ ಪೂಜಾಕಾರ್ಯ ನೆರವೇರಿಸಿದ ಅವರು ತದ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು. ಮೊದಲನೆಯದಾಗಿ ನನಗೆ ಹಾರ ತುರಾಯಿಗಳು ಬೇಡ. ಹಾಗೊಂದು ವೇಳೆ ಹಾಕಲೇಬೇಕು ಎಂದಿದ್ದರೆ ಮೊದಲು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಣ ಹಾಕಿ. ನಂತರ ಹಾರ ತುರಾಯಿ ಹಾಕಿ ಎಂದು ಹೇಳಿದರು.

ಪ್ರವಾಹದಿಂದ ಅಸಂಖ್ಯಾತ ಜನ ನೊಂದಿದ್ದಾರೆ.ಈ ಹಿನ್ನೆಲೆಯಲ್ಲಿ ಬೆಳಗಾವಿಯೊಂದಕ್ಕೇ ಮೂವತ್ತು ಕೋಟಿ ರೂ ಬಿಡುಗಡೆ ಮಾಡಲಾಗಿದೆ.ಇನ್ನೂ ಹಲವು ಜಿಲ್ಲೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು. ನೆರೆ ಪರಿಹಾರ ಕಾರ್ಯಕ್ಕೆ ಹಣದ ತೊಂದರೆಯಾಗಿಲ್ಲ.ಈ ಕೆಲಸಕ್ಕೆ ಯಾವ ರೀತಿಯಲ್ಲೂ ತೊಂದರೆ ಆಗದಂತೆ ಹಣ ಬಿಡುಗಡೆ ಮಾಡಿದ್ದೇವೆ ಎಂದ ಅವರು,ಈ ಪರಿಹಾರ ಕಾರ್ಯದಲ್ಲಿ ಕಂದಾಯ ಇಲಾಖೆ ಸಕ್ರಿಯ ಪಾತ್ರ ವಹಿಸಲಿದೆ ಎಂದರು.

ನಮ್ಮ ಆದ್ಯತೆ ನೆರೆಯಿಂದ ಸಂತ್ರಸ್ತರಾದವರಿಗೆ ಅನುಕೂಲ ಒದಗಿಸಿಕೊಡುವುದು. ಹಣಕಾಸು ಇಲಾಖೆಯೇ ಆಗಲಿ, ಕಂದಾಯ ಇಲಾಖೆಯೇ ಆಗಲಿ.ಈ ವಿಷಯದಲ್ಲಿ ನಿಧಾನಗತಿಯ ಧೋರಣೆ ತೋರುವುದಿಲ್ಲ ಎಂದು ಅವರು ಹೇಳಿದರು.

ಮಹಾರಾಷ್ಟ್ರ ಪುನ: ಕೊಯ್ನಾ ಆಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಿದ್ದು ಈ ಬಗ್ಗೆ ಈ ಗಾಗಲೇ ಜನರಿಗೆ ಸೂಕ್ತ ಎಚ್ಚರಿಕೆ ನೀಡಲಾಗಿದೆ.ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ವತಿಯಿಂದ ಪ್ರವಾಹ ಪೀಡಿತರಿಗೆ ಪುನರ್ವಸತಿ ಕಲ್ಪಿಸಿಕೊಡುವ ವಿಷಯದಲ್ಲಿ ಯಾವ ವಿಳಂಬವೂ ಆಗುತ್ತಿಲ್ಲ ಎಂದ ಅವರು,ಕೇಂದ್ರ ಸರ್ಕಾರ ಕೂಡಾ ಇನ್ನಷ್ಟು ನೆರವು ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದೆ.ಮುಂದೆಯೂ ಸುಭದ್ರವಾಗಿರಲಿದೆ.ಈ ವಿಷಯದಲ್ಲಿ ಯಾರಿಗೂ ಅನುಮಾನ ಬೇಕಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಸಂಬಂಧಿತ ಟ್ಯಾಗ್ಗಳು

R Ashok BJP Flood Minister


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ