ಮತ್ತೆ ಹೈಕೋರ್ಟ್ ಮೊರೆ ಹೋಗಲು ಡಿಕೆಶಿ ನಿರ್ಧಾರ

DK Shivkumar

05-09-2019

ಬೆಂಗಳೂರು: ಆಕ್ರಮ ಹಣ ಲಭ್ಯವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಿದ ಆರ್ಥಿಕ ಜಾರಿ ನಿರ್ದೇಶನಾಲಯದ ಕ್ರಮವನ್ನು ರದ್ದುಗೊಳಿಸಲು ಕೋರಿ ಮರಳಿ ಹೈಕೋರ್ಟ್ ಮೊರೆ ಹೋಗಲು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಈ ಸಂಬಂಧ ಶುಕ್ರವಾರ ಡಿಕೆಶಿ ಪರ ವಕೀಲರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಅವರ ಸಮೀಪವರ್ತಿ ಮೂಲಗಳು ತಿಳಿಸಿವೆ.

ಇದೇ ಕಾಲಕ್ಕೆ ಡಿಕೆಶಿ ಬಂಧನವನ್ನು ವಿರೋಧಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಕೂಡಾ ಪ್ರತಿಭಟನೆ ನಡೆದಿದ್ದು ರಾಮನಗರ, ಕನಕಪುರ ಬಂದ್ ಆಚರಣೆಯಾಗಿದ್ದರೆ ಹಲವು ಜಿಲ್ಲೆಗಳಲ್ಲಿ ಇದು ರಾಜಕೀಯ ಪ್ರೇರಿತ ಬಂಧನ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಡಿಕೆಶಿ ಬಂಧನವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದ ವಿಚಲಿತಗೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಉನ್ನತ ಪೋಲೀಸ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದರಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡುತ್ತಿದ್ದರು.

ಕುತೂಹಲದ ಸಂಗತಿ ಎಂದರೆ ಹಲ ರಾಜಕೀಯ ನಾಯಕರು ಕೂಡಾ ಸಿಎಂ ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿ, ಡಿಕೆಶಿ ಬಂಧನ ಸಕಾರಣವಾದದ್ದಾದರೂ ಈ ಪ್ರಕ್ರಿಯೆ ರಾಜಕೀಯವಾಗಿ ಬಿಜೆಪಿಗೆ ಆಘಾತ ನೀಡಿ, ಜೆಡಿಎಸ್ ಪಕ್ಷಕ್ಕೆ ಪುನರ್ಜನ್ಮ ನೀಡಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಇಡಿ ಬಂಧನ ಹಾಗೂ ಇಡಿ ಬಂಧನಕ್ಕೆ ಡಿಕೆಶಿ ಅವರನ್ನು ಸೆಪ್ಟೆಂಬರ್ 13 ರವರೆಗೆ ನೀಡಿದ ವಿಶೇಷ ನ್ಯಾಯಾಲಯದ ಕ್ರಮ ಸಮರ್ಥನೀಯವೇ ಆದರೂ ಡಿಕೆಶಿ ಬಂಧನ ಪ್ರಕರಣ ರಾಜಕೀಯವಾಗಿ ಬಿಜೆಪಿಗೆ ನಷ್ಟ ಉಂಟು ಮಾಡಲಿದೆ ಎಂದವರು ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮಧ್ಯೆ ಡಿಕೆಶಿ ಪ್ರಕರಣದ ಬಗ್ಗೆ ವಿಶೇಷ ಗಮನ ಹರಿಸಿರುವ ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಅವರು, ಇಡೀ ಪ್ರಕರಣ ರಾಜಕೀಯ ಪ್ರೇರಿತವಾದದ್ದು. ಹೀಗಾಗಿ ಯಾವ ಆತಂಕವೂ ಬೇಡ.ಧೈರ್ಯವಾಗಿರಿ. ಪಕ್ಷ ನಿಮ್ಮೊಂದಿಗಿದೆ ಎಂದು ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಅವರಿಗೆ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ಹೇಗಿದೆ?ಎಂದು ವಿಚಾರಿಸಿಕೊಂಡ ಸೋನಿಯಾಗಾಂಧಿ ಈ ಪ್ರಕರಣದ ಕುರಿತು ತಮಗೆ ಸ್ಪಷ್ಟವಾದ ಅರಿವಿದೆ. ಅದೇ ರೀತಿ ಪಕ್ಷ ಕೂಡಾ ಈ ರಾಜಕೀಯ ಪ್ರೇರಿತ ಬಂಧನದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಜತೆಗಿದೆ ಎಂದು ಸೋನಿಯಾಗಾಂಧಿ ಧೈರ್ಯ ತುಂಬಿದರು.

ವಿರೋಧ ಪಕ್ಷಗಳ ನಾಯಕರನ್ನು ಮಟ್ಟ ಹಾಕಲು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.ಇದೇ ರೀತಿ ಡಿ.ಕೆ.ಶಿವಕುಮಾರ್ ಅವರನ್ನೂ ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ.ಈ ಸಂದರ್ಭದಲ್ಲಿ ಪಕ್ಷ ಅವರ ಜತೆಗೆ ನಿಲ್ಲಲಿದೆ ಎಂದು ಅವರು ಹೇಳಿದ್ದಾರೆ.

                        ಇತರರಿಗೆ ರಿಲೀಫ್

ಈ ಮಧ್ಯೆ  ಡಿ.ಕೆ.ಶಿವಕುಮಾರ್ ಅವರಂತೆಯೇ ಬಂಧನಕ್ಕೊಳಗಾಗುವ ಭೀತಿಯಲ್ಲಿದ್ದ ಸಚಿನ್ ನಾರಾಯಣ್,ಸುನೀಲ್ ಶರ್ಮಾ ಸೇರಿದಂತೆ ಮೂರು ಮಂದಿಯನ್ನು ಯಾವ ಕಾರಣಕ್ಕೂ ಬಂಧಿಸದಂತೆ ಹೈಕೋರ್ಟ್ ಇಂದು ಆದೇಶ ನೀಡಿದೆ.

ಸೆಪ್ಟೆಂಬರ್ ಹದಿನಾರರವರೆಗೆ ಅವರನ್ನು ಬಂಧಿಸದಂತೆ ಈ ಹಿಂದೆ ನೀಡಿದ್ದ ಸೂಚನೆಯನ್ನು ಮರಳಿ ಎತ್ತಿ ಹಿಡಿದ ಹೈಕೋರ್ಟ್ ಯಾವ ಕಾರಣಕ್ಕೂ ಇವರನ್ನು ಬಂಧಿಸದಂತೆ ಆರ್ಥಿಕ ಜಾರಿ ನಿರ್ದೇಶನಾಲಯದ ಪರ ವಕೀಲರಿಗೆ ಹೇಳಿತು.

 ಡಿಕೆ ಫ್ಯಾಮಿಲಿ ದಿಲ್ಲಿಗೆ

ಅಂದ ಹಾಗೆ ಡಿ.ಕೆ.ಶಿವಕುಮಾರ್ ಅವರನ್ನು ಸೆಪ್ಟೆಂಬರ್ ಹದಿಮೂರರವರೆಗೆ ಇಡಿ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯ ನೀಡಿದ ಆದೇಶದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿರುವ ಡಿಕೆಶಿ ಕುಟುಂಬದ ಸದಸ್ಯರು ಶುಕ್ರವಾರ ದೆಹಲಿಗೆ ಹೋಗಲಿದ್ದಾರೆ.

ಬಂಧನದಲ್ಲಿರುವ ಡಿಕೆಶಿ ಭೇಟಿಗೆ ಅವರ ಪತ್ನಿ ಹಾಗೂ ಪುತ್ರಿ ದೆಹಲಿಗೆ ತೆರಳುತ್ತಿದ್ದು ಅದೇ ಕಾಲಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಜತೆ ಜೆಡಿಎಸ್ ಕಾರ್ಯಕರ್ತರು ಶುಕ್ರವಾರವೂ ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್:ಇಡಿ ಬಂಧನ ಪ್ರಕರಣದ ಹಿನ್ನೆಲೆಯಲ್ಲಿ ಡಿಕೆಶಿ ಪರವಾಗಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರನ್ನೂ ಬಂಧಿಸಲಾಗಿತ್ತು. ಹಾಗಂತ ಅದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವೇ?ಎಂದು ಪ್ರಶ್ನಿಸಿದ ಅವರು,ಬಂಧನ ಪ್ರಕರಣ ಕಾನೂನು ರೀತಿಯಲ್ಲಿ ಆಗಿದೆ.ಕಾನೂನು ರೀತಿಯಲ್ಲಿ ಮುಂದುವರಿಯಲಿದೆ.ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಅವರು ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

DK Shivkumar ED High court Sonia Gandhi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ