ಗಣೇಶ ಹಬ್ಬದ ವೇಳೆ ಕಟ್ಟೆಚ್ಚರ

Tight security in Karnataka

29-08-2019

ಬೆಂಗಳೂರು: ಇದೇ ಸೋಮವಾರದಿಂದ ನಡೆಯುವ ಗಣೇಶ ಹಬ್ಬದ ಆಚರಣೆ ವೇಳೆ ರಾಜ್ಯದಲ್ಲಿ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ, ಕಟ್ಟೆಚ್ಚರ ವಹಿಸಿ ಭಯೋತ್ಪಾದಕ ಮೇಲೆ ಹದ್ದಿನ ಕಣ್ಣಿಡುವಂತೆ ನೂತನ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು, ಮೈಸೂರು, ಬೆಳಗಾಂ, ಹುಬ್ಬಳ್ಳಿ, ಧಾರವಾಡ, ಮೈಸೂರಿನ ಪೊಲೀಸ್ ಆಯುಕ್ತರು, ರಾಜ್ಯದ ಎಲ್ಲಾ ವಲಯವಾರು, ಐಜಿಪಿಗಳು, ಜಿಲ್ಲಾ ಎಸ್ಪಿಗಳ ಜೊತೆ ವಿಡಿಯೋ ಸಂವಾದ ನಡೆಸಿ  ಗಣೇಶನ ಹಬ್ಬ, ಮೆರವಣಿಗೆ ವೇಳೆ ಅಹಿತಕರ ಘಟನೆಗಳು ನಡೆಯದಂತೆ, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸಿದರು..

ಗಣೇಶನ ಮೆರವಣಿಗೆ ನಡೆಯುವ ಸೂಕ್ಷ್ಮ ಪ್ರದೇಶಗಳಾದ ಹುಬ್ಬಳ್ಳಿ, ಶಿವಮೊಗ್ಗ, ಮಂಗಳೂರು, ಕಾರವಾರ, ಬೆಳಗಾವಿ, ಕೊಪ್ಪಳ, ಇನ್ನಿತರ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಕಟ್ಟೆಚ್ಚರ ವಹಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು, ಕೋಮು ಗಲಭೆಗಳಾಗಲಿ ನಡೆಯದಂತೆ ಎಚ್ಚರಿಕೆ ವಹಿಸಲು ಆದೇಶಿದರು.

ಸುಮಾರು ಮೂರು ಗಂಟೆಗಳ ಕಾಲ, ಕಮಿಷನರ್‍ಗಳು, ಐಜಿಗಳು ಹಾಗೂ ಜಿಲ್ಲಾ ಎಸ್ಪಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಅಲ್ಲಿನ ಮಾಹಿತಿಯನ್ನು ಪಡೆದುಕೊಂಡ ಗೃಹ ಸಚಿವರು, ಗಣೇಶ ಹಬ್ಬದ ಆಚರಣೆ ವೇಳೆ ಕಾನೂನು ಸುವ್ಯವಸ್ಥೆಗೆ ತೊಂದರೆ ಎದುರಾಗದಂತೆ, ಇಂದಿನಿಂದಲೇ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು.

ವಲಯವಾರು ಐಜಿಗಳು, ಜಿಲ್ಲಾ ಎಸ್ಪಿಗಳ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ತಮ್ಮ ವ್ಯಾಪ್ತಿಯ ಜಿಲ್ಲೆಗಳಿಗೆ ವಾರಕ್ಕೆರಡು ಬಾರಿಯಾದರೂ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ಆಗಾಗ ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳು, ಡಿವೈಎಸ್ಪಿ, ಸರ್ಕಲ್ ಇನ್ಸ್‍ಪೆಕ್ಟರ್‍ಗಳ ಸಭೆ ಕರೆದು ಭದ್ರತೆಗಳ ಬಗ್ಗೆ ಚರ್ಚೆ ನಡೆಸಬೇಕೆಂದು ಸೂಚಿಸಿದರು.

ಜಿಲ್ಲಾ ಎಸ್ಪಿಗಳೂ ಕೂಡ ಕಚೇರಿಯಲ್ಲಿ ಕುಳಿತುಕೊಳ್ಳದೆ, ಸೂಕ್ಷ್ಮ ಪ್ರದೇಶಗಳಿಗೆ ಭೇಟಿನೀಡಿ, ಜನರಲ್ಲಿನ ಭಯದ ವಾತಾವರಣ ನಿವಾರಿಸಬೇಕು. ಅಗತ್ಯವಿದ್ದರೆ, ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡು ಭದ್ರತೆಯನ್ನು ಬಿಗಿಗೊಳಿಸಬೇಕು. ಅಪರಾಧ ಕೃತ್ಯಗಳ ಬಗ್ಗೆಯೂ ಪರಾಮರ್ಶೆ ನಡೆಸಬೇಕೆಂದು ಸಲಹೆ ನೀಡಿದರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ನಂತರ, ಉಗ್ರಗಾಮಿಗಳು ರಾಜ್ಯಕ್ಕೆ ನುಸುಳಿರುವ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ರವಾನಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಭಯೋತ್ಪಾದಕರ ಚಟುವಟಿಕೆಗಳು ರಾಜ್ಯದಲ್ಲಿ ತಲೆಎತ್ತದಂತೆ, ನಿಗಾವಹಿಸಬೇಕು.

ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಇನ್ನಿತರ ಹೆಚ್ಚು ಜನಸಂದಣಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವಸ್ತುಗಳ ಬಗ್ಗೆ ತಪಾಸಣೆ ನಡೆಸಬೇಕು. ಅನುಮಾನಾಸ್ಪದವಾಗಿ ಕಂಡುಬಂದವರು ಯಾರೇ ಆಗಿರಲಿ, ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಬೇಕು ಎಂದು ಹೇಳಿದರು.

ಸಂವಾದದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರ್ ಕುಮಾರ್ ಪಾಂಡೆ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ, ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.


ಸಂಬಂಧಿತ ಟ್ಯಾಗ್ಗಳು

Basavaraj Bommai Ganesha Festival Security Terrorist


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ