ಇನ್ನೂ ಅಧಿಕೃತ ನಿವಾಸ ಖಾಲಿ ಮಾಡದ ಅಲೋಕ್ ಕುಮಾರ್

Alok Kumar

29-08-2019

ಬೆಂಗಳೂರು: ವರ್ಗಾವಣೆಗೊಂಡು 27 ದಿನಗಳ ಕಳೆದರೂ ಇನ್ನೂ ನಗರ ಪೊಲೀಸ್ ಆಯುಕ್ತರ ಅಧಿಕೃತ ನಿವಾಸವನ್ನು ರಾಜ್ಯ ಮೀಸಲು ಪೊಲೀಸ್ (ಕೆಎಸ್‍ಆರ್‍ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆಲೋಕ್ ಕುಮಾರ್ ಖಾಲಿ ಮಾಡದಿರುವುದರ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಪತ್ರ ಬರೆದಿದ್ದಾರೆ

ಇನ್‍ಫೆಂಟ್ರಿ ರಸ್ತೆಯ ಕಾಲಾಳುಪಡೆ ರಸ್ತೆಯಲ್ಲಿರುವ ನಗರದ ಪೊಲೀಸ್ ಆಯುಕ್ತರ ಪಕ್ಕದಲ್ಲಿರುವ ಆಯುಕ್ತರ ಅಧಿಕೃತ ನಿವಾಸವನ್ನು ನಗರ ಪೊಲೀಸ್ ಆಯುಕ್ತರ ಹುದ್ದೆಯಲ್ಲಿರುವ ಅಧಿಕಾರಿಗೆ ಮಾತ್ರ ಸೀಮಿತವಾಗಿದ್ದು ಹುದ್ದೆಯಿಂದ ವರ್ಗಾವಣೆಯಾದ ಒಂದು ವಾರದೊಳಗೆ ನಿವಾಸವನ್ನು ಅಧಿಕಾರಿಗಳು ಖಾಲಿ ಮಾಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಆಲೋಕ್ ಕುಮಾರ್ ಸಂಪ್ರದಾಯ ಉಲ್ಲಂಘಿಸಿ ಇನ್ನು ನಗರ ಪೊಲೀಸ್ ಆಯುಕ್ತರ ಅಧಿಕೃತ ನಿವಾಸದಲ್ಲಿ ಠಿಕಾಣಿ ಹೂಡಿರುವುದನ್ನು ಪತ್ರದಲ್ಲಿ ಪ್ರಶ್ನಿಸಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಲಿ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಅವರು ಪತ್ರ ಬರೆದ ಬೆನ್ನಲ್ಲೇ ಆಲೋಕ್ ಕುಮಾರ್ ಮನೆ ಖಾಲಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಆ.2ರಂದು ವರ್ಗಾವಣೆ ಮಾಡಿದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದ ಆಲೋಕ್ ಕುಮಾರ್  ಅರ್ಜಿಯನ್ನು ಆ.14ರಂದು ವಾಪಸ್ ಪಡೆದಿದ್ದರು. ಅಲ್ಲಿಂದ 15ದಿನಗಳು ಕಳೆದರೂ ಇನ್ನೂ ಮೊಂಡಾಟ ಮಾಡಿ ನಗರ ಪೊಲೀಸ್ ಆಯುಕ್ತರ ಅಧಿಕೃತ ನಿವಾಸದಲ್ಲಿ ಉಳಿದುಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಭಾಸ್ಕರರಾವ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕಿ(ಡಿಜಿ ಮತ್ತು ಐಜಿಪಿ) ನೀಲಮಣಿ ರಾಜು ಅವರಿಗೆ  ಪತ್ರ ಬರೆದಿದ್ದಾರೆ.

ಆಯುಕ್ತರ ಕಚೇರಿ ಖಾಲಿ ಮಾಡದಿರುವುದರಿಂದ ತಾವು ಬಸವನಗುಡಿ ಮನೆಯಿಂದ ಕಚೇರಿಗೆ ಬರುವುದು ತಡವಾಗಲಿದ್ದು ಸಮಯವು ವ್ಯರ್ಥವಾಗಲಿದೆ  ತುರ್ತು ಸಂದರ್ಭಗಳಲ್ಲಿ ನಿಯಂತ್ರಣ ಕೊಠಡಿಯನ್ನು ತಲುಪಲು ಕಷ್ಟವಾಗುವುದರಿಂದ ಕೂಡಲೇ ನಿವಾಸ ತೆರವುಗೊಳಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.

ಆಯುಕ್ತರ ಅಧಿಕೃತ ನಿವಾಸದಲ್ಲಿ ಆಯುಕ್ತರಿಗೆ ಮೀಸಲಾದ ಹಾಟ್‍ಲೈನ್‍ಗಳೂ ಇವೆ, ಅದರ ಮೂಲಕ ನಗರ ಪೊಲೀಸ್  ಮುಖ್ಯಸ್ಥರ ತಕ್ಷಣದ ಗಮನ ಅಗತ್ಯವಿರುವ ಪ್ರಮುಖ ಮತ್ತು ಗೌಪ್ಯ ಮಾಹಿತಿಯನ್ನು ನೇರವಾಗಿ ರವಾನಿಸಬಹುದು. ಕಮಿಷನರ್ ಅವರು ರಾಜ್ಯದ ಆಡಳಿತ ಕೇಂದ್ರವಾದ ವಿಧಾನಸೌಧಕ್ಕೆ ಸಮೀಪದಲ್ಲಿದ್ದರೆ ತುರ್ತು ಕೆಲಸಗಳಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಡಿಜಿಪಿಗೆ ಮನವಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೋಕ್‍ಕುಮಾರ್, ಬಂಗಲೆ ಖಾಲಿ ಮಾಡಲು ಸ್ವಲ್ಪ ಸಮಯ ನೀಡುವಂತೆ ಎರಡು ದಿನಗಳ ಹಿಂದೆ ಡಿಜಿ-ಐಜಿಪಿ ಅವರಿಗೆ ಮನವಿ ಮಾಡಿದ್ದೇನೆ. ನಾನು ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ 47 ದಿನಗಳ ನಂತರ ಆಗಸ್ಟ್ 2 ರಂದು ನನ್ನನ್ನು ವರ್ಗಾಯಿಸಲಾಯಿತು. ನಾನು ವರ್ಗಾವಣೆ ಆದೇಶಗಳನ್ನು ಪಡೆದಾಗ ನಾನು ಅಧಿಕೃತ ನಿವಾಸದಲ್ಲಿ ನೆಲೆಸಿದ್ದೇನೆ. ಈಗ, ನನ್ನ ಕುಟುಂಬ ಕೂಡ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನಾವು ಶೀಘ್ರದಲ್ಲೇ ಖಾಲಿ ಮಾಡುತ್ತೇವೆ, ''ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Alok Kumar BhaskarRao ADGP KSRP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ