ಫೇಸ್ ಬುಕ್ ಗೆಳೆಯನಿಗಾಗಿ ಭೋಪಾಲ್ ಗೆ ಹೋದ ಬಾಲಕಿ!

She went Bhopal for her Facebook friend

28-08-2019

ಬೆಂಗಳೂರು: ಉದ್ಯಮಿಯೊಬ್ಬರ ಓದುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಫೇಸ್‍ಬುಕ್ ಗೆಳೆಯನಿಗೆ ಅಚ್ಚರಿ ನೀಡಲು ಶುಕ್ರವಾರ ವಿಮಾನದಲ್ಲಿ ಭೋಪಾಲ್‍ಗೆ ತೆರಳಿ ಆತನೊಂದಿಗೆ ಜಗಳ ಮಾಡಿಕೊಳ್ಳಲು ಹೋಗಿ ಶನಿವಾರ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ತಂದೆಯ ಜೊತೆ ಜಗಳ ಮಾಡಿಕೊಂಡು ಮನೆಯಲ್ಲಿ ಹೇಳದೇ ಕೇಳದೇ ಫೇಸ್‍ಬುಕ್ ಗೆಳೆಯನ ನೋಡಲು ಭೋಪಾಲ್‍ಗೆ ಹೋಗಿ ಸಿಕ್ಕಿಬಿದ್ದ 10 ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಅಲ್ಲಿನ ಪೊಲೀಸರು ಸುರಕ್ಷಿತವಾಗಿ ನಗರದ ಮನೆಗೆ ಸೋಮವಾರ ಕಳುಹಿಸಿಕೊಟ್ಟಿದ್ದಾರೆ.

ನಗರದ ಉದ್ಯಮಿಯೊಬ್ಬರ ಪುತ್ರಿಯಾಗಿರುವ ಬಾಲಕಿಯು ಫೇಸ್‍ಬುಕ್‍ನಲ್ಲಿ ಪರಿಚಿತನಾಗಿದ್ದ ಗೆಳೆಯನನ್ನು ನೋಡಲು ಕಳೆದ ಆ.25ರಂದು ಭೋಪಾಲ್‍ಗೆ ಹೋಗಿ ವಿಳಾಸ ಪತ್ತೆಹಚ್ಚಿ ಆತನ ಮನೆಯ ಬಳಿ ಹೋಗಿದ್ದು ಆಕೆಯನ್ನು ದೂರದಿಂದಲೇ ನೋಡಿದ ಬಾಲಕ ಅಲ್ಲಿಂದ ಕರೆದುಕೊಂಡು ಹಬೀಬ್‍ಗಂಜ್‍ನ ಹೋಟೆಲಿನಲ್ಲಿ ರೂಮ್ ಮಾಡಿ ಬಿಟ್ಟಿದ್ದಾನೆ.

ಕೌನ್ಸಿಲಿಂಗ್

ನನ್ನ ಜೊತೆಗಿರುವಂತೆ ಬಾಲಕಿ ಕೇಳಿಕೊಂಡಾಗ ಒಪ್ಪದ ಗೆಳೆಯ ಬುದ್ಧಿಮಾತು ಹೇಳಿ ಊರಿಗೆ ಹೋಗುವಂತೆ ವಿನಂತಿಸಿಕೊಂಡಿದ್ದು ಕೋಪಗೊಂಡ ಆಕೆ ಗಲಾಟೆ ಮಾಡಿದ್ದಾಳೆ.ಗಲಾಟೆ ಕೇಳಿ ಬಂದ ಗಸ್ತು ತಿರುಗುತ್ತಿದ್ದ ಪೊಲೀಸರು  ವಿಚಾರಣೆ ನಡೆಸಿದಾಗ ಬಾಲಕಿಯು ಅಪ್ರಾಪ್ತಳಾಗಿದ್ದು ಮನೆಬಿಟ್ಟು ಬಂದಿರುವುದು ಗೊತ್ತಾಗಿದೆ.

ಕೂಡಲೇ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಕರೆದುಕೊಂಡು ಹೋಗಿ ಕೌನ್ಸಿಲಿಂಗ್ ಮಾಡಿದಾಗ ಫೇಸ್‍ಬುಕ್ ಗೆಳೆಯನ ನಡತೆಯನ್ನು ಪರೀಕ್ಷಿಸಲು ಬಂದಿದ್ದು ಆತನ ಮನೆ ಬಳಿ ಹೋದಾಗ ಮನೆಯಲ್ಲಿರಲು ಅವಕಾಶ ನೀಡದೇ ಹೋಟೆಲ್ ಬುಕ್ ಮಾಡಿ ಇರಿಸಿದ್ದು ನನ್ನ ಜೊತೆಗಿರಲು ನಿರಾಕರಿಸಿ ಮನಗೆ ವಾಪಸ್ ಹೋಗು ಎಂದು ಮನವೊಲಿಸಲು ಪ್ರಯತ್ನ ಮಾಡಿದ್ದು ಆಕ್ರೋಶಗೊಂಡು ಆತನ ಜೊತೆ ಜಗಳ ಮಾಡಿದೆ ಎಂದು ತಿಳಿಸಿದ್ದಾಳೆ.

ಬಾಲಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮಂದಿ  ಸ್ನೇಹಿತರಿದ್ದಾರೆ. ಹಾಗೇ ಈತನೊಂದಿಗೂ ಸ್ನೇಹ ಬೆಳೆದಿತ್ತು. ಮನೆಯಲ್ಲಿ ಯಾವುದೋ ಕಾರಣಕ್ಕೆ ತಂದೆಯೊಂದಿಗೆ ಜಗಳವಾದ ಮೇಲೆ ಮನೆಬಿಟ್ಟು ಬರುವ ಯೋಚನೆ ಮಾಡಿದಳು. ಈ ಹುಡುಗನಿದ್ದಲ್ಲೇ ಬರಬೇಕು ಎಂದು ತೀರ್ಮಾನಿಸಿ ವಿಮಾನ ಖರ್ಚಿಗೆ ಹಣ ಗಳಿಸಲು ಶಾಲೆಯಿಂದ ಬಂದ ಕೂಡಲೇ ಕಾಲ್‍ಸೆಂಟರ್‍ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಈ ಎಲ್ಲ ವಿಚಾರಗಳನ್ನೂ ನಮಗೆ ತಿಳಿಸಿದ್ದಾಳೆ ಎಂದು ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ರಾಜೀವ್ ಜೈನ್ ತಿಳಿಸಿದ್ದಾರೆ.

ಬುದ್ದಿ ಹೇಳಿದೆವು

ಇದು ಸರಿಯಲ್ಲ. ಹೀಗೆ ಮನೆಯಿಂದ ಓಡಿಬರಬಾರದು ಎಂದು ಬುದ್ಧಿವಾದ ಹೇಳಿದ್ದೇವೆ. ನಂತರ ಆಕೆಯ ಪಾಲಕರಿಗೆ ಫೋನ್ ಡಿ ವಿಷಯವನ್ನು ತಿಳಿಸಿದೆವು. ತಮ್ಮ ಮಗಳು ಕೋಪಗೊಂಡು ಆಂಟಿ ಮನೆಗೆ ಹೋಗಿರಬೇಕು ಎಂದು ಅವರು ಭಾವಿಸಿ ಸುಮ್ಮನಿದ್ದರು. ಆದರೆ ನಾವು ಎಲ್ಲವನ್ನೂ ತಿಳಿಸಿದ್ದೇವೆ. ಆಕೆಯ ತಂದೆಯನ್ನು ಭೋಪಾಲ್‍ಗೆ ಕರೆಸಿ ಬಾಲಕಿಯನ್ನು ವಾಪಸ್ ಕಳಿಸಿದ್ದೇವೆ. ಅಲ್ಲದೆ, ಆಕೆಯ ಜತೆ ಹೆಚ್ಚಿನ ಸಮಯ ಕಳೆಯುವಂತೆ ಅವರಿಗೂ ತಿಳಿಸಿದ್ದೇವೆ. ಬಾಲಕಿಗೂ ತನ್ನ ತಪ್ಪಿನ ಅರಿವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬಾಲಕಿಯ ತಂದೆ ಯಶಸ್ವಿ ಉದ್ಯಮಿ. ಈಗಿನಿಂದಲೇ ಆಕೆ ಪಬ್‍ಗೆ ಹೋಗುತ್ತಾಳೆ. ಅದನ್ನು ಆಕೆಯ ತಂದೆ ಒಪ್ಪುತ್ತಿರಲಿಲ್ಲ. ಇದೇ ವಿಚಾರಕ್ಕೆ ಶುಕ್ರವಾರ ದೊಡ್ಡ ಜಗಳವಾಗಿತ್ತು. ಮರುದಿನ ಬೆಳಗ್ಗಿನ ವಿಮಾನದಲ್ಲಿ ಭೋಪಾಲ್ ಗೆ ಬಂದಿದ್ದಾಳೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bhopal Business Man Facebook Twitter


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ