ಬಲಗೊಳ್ಳದ ಪಕ್ಷ ಸಂಘಟನೆ : ಕಾಂಗ್ರೆಸ್ ನಲ್ಲಿ ಬರೀ ಮೌನ!

Congress

27-08-2019

ಬೆಂಗಳೂರು : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ನಡೆಸಲು ಸಂಪೂರ್ಣ ಸಚಿವ ಸಂಪುಟ ರಚನೆಯಾಗದೆ ಆ ಪಕ್ಷದಲ್ಲಿ ಹಲವು ಗೊಂದಲಗಳು ಎದುರಾಗಿದ್ದರೂ ಅಧಿಕೃತ ವಿರೋಧ ಪಕ್ಷವಾದ ಕಾಂಗ್ರೆಸ್‍ನಲ್ಲಿ ಯಾವುದೇ ಚಟುವಟಿಕೆಗಳು ಮೇಲ್ನೋಟಕ್ಕೆ ಕಾಣಬರುತ್ತಿಲ್ಲ. ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮೌನ ವಾತಾವರಣವೇ ಇದೆ ಎಂದು ಹೇಳಬಹುದಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 79 ಸ್ಥಾನಗಳನ್ನು ಗಳಿಸಿದ್ದರೂ 37 ಸ್ಥಾನ ಪಡೆದ ಜೆಡಿಎಸ್‍ಗೆ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟು, ಕಾಂಗ್ರೆಸ್ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಬೇಕಾಯಿತು. ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರಾಗಿದ್ದರೂ ತಮ್ಮ ಪಕ್ಷದ ಶಾಸಕರಿಗೆ ಹಾಗೂ ಪ್ರಮುಖರಿಗೆ ಅಧಿಕಾರದಲ್ಲಿ ಮನ್ನಣೆ ದೊರೆಯದ ಪರಿಣಾಮ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಕುಂದುಂಟಾಯಿತು ಎಂದು ಹೇಳಲಾಗಿದೆ.

ಇದೀಗ ಪಕ್ಷದ ಸಂಘಟನೆಯನ್ನು ಬಲವರ್ಧನೆಗೊಳಿಸಲು ರಾಷ್ಟ್ರೀಯ ಪಕ್ಷದ ಪ್ರಮುಖರು ನಿನ್ನೆ ಬೆಂಗಳೂರಿಗೆ ಬಂದಿದ್ದರೂ ಸಹ ರಾಜ್ಯಮಟ್ಟದ ಯಾವುದೇ ನಾಯಕರು ಅವರಿಗೆ ಸಕಾರಾತ್ಮಕವಾಗಿ ಸ್ಪಂಧಿಸದ ಕಾರಣ ಅವರು ದೆಹಲಿಗೆ ಹಿಂದಿರುಗಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಜ್ಯ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಪ್ರಮುಖರಾದ ಗುಲಾಮ್ ನಬೀ ಆಜಾದ್ ನಿನ್ನೆ ಬೆಂಗಳೂರಿಗೆ ಬಂದಿದ್ದರೂ ಕೂಡ ಅವರ ಕೈಗೆ ಯಾರೂ ದೊರೆತಿಲ್ಲ. ಹಾಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ತಮ್ಮ ಪಕ್ಷೇತರ ಬಾದಾಮಿ ಪ್ರವಾಸಕ್ಕೆ ತೆರಳಿದ್ದರು. ಉಳಿದವರ್ಯಾರೂ ಸಂಪರ್ಕಕ್ಕೆ ಸಿಗದ ಕಾರಣ ಗುಲಾಮ್ ನಬೀ ಆಜಾದ್ ದೆಹಲಿಗೆ ವಾಪಸ್ಸಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಸರ್ಕಾರದಲ್ಲಿ ಇಷ್ಟೆಲ್ಲ ಗೊಂದಲಗಳು ಎದುರಾಗಿದ್ದರೂ ಕಾಂಗ್ರೆಸ್ ಪಕ್ಷದ ಯಾವೊಬ್ಬ ನಾಯಕನೂ ಅದರ ವಿರುದ್ಧ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿಲ್ಲ. ಕೇವಲ ಸಿದ್ದರಾಮಯ್ಯ ಮಾತ್ರ ಬಿಜೆಪಿ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳ್ಯಾರೂ ನೇಮಕವಾಗದ ಕಾರಣ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿಲ್ಲ ಎನ್ನಲಾಗಿದೆ.

ಒಟ್ಟಾರೆ ಕಳೆದ ಒಂದೂವರೆ ವರ್ಷದಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹಿನ್ನೆಡೆಯಾಗುತ್ತಾ ಬಂದಿದೆ ಎನ್ನಲಾಗುತ್ತಿದೆಯಾದರೂ ಆ ಪಕ್ಷದಲ್ಲೀಗ ಮೌನ ವಾತಾವರಣವೇ ಮಡುಗಟ್ಟಿದಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Congress Congress Siddaramaiah KPCC


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ