ಯಡಿಯೂರಪ್ಪ ಸರ್ಕಾರಕ್ಕೆ ಷಾ ಕಣ್ಗಾವಲು


29-07-2019 247

ಬೆಂಗಳೂರು: ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವ ಅಗತ್ಯವಿದ್ದು, ಹಿಂದಿನ ಪ್ರಮಾದಗಳು ಮರುಕಸಬಾರದೆಂದರೆ ನಿಮ್ಮ ಕುಟುಂಬದ ಸದಸ್ಯರನ್ನು ಆಡಳಿತದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ದೂರ ಇರಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ವೇಳೆ ಆಡಳಿತದಲ್ಲಿ ಕುಟುಂಬದವರ ಹಸ್ತಕ್ಷೇಪ, ಸ್ವಜನಪಕ್ಷಪಾತ, ಮಂತ್ರಿಗಿರಿಗೆ ಲಾಬಿ, ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ಮಧ್ಯಪ್ರವೇಶ ಮಾಡಿದ್ದರಿಂದಲೇ ಪಕ್ಷಕ್ಕೆ ಕೆಟ್ಟ ಹೆಸರು ಬಂತು. ಈ ಬಾರಿ ಇಂತಹ ಪ್ರಮಾದ ಪುನರಾವರ್ತನೆಯಾಗಬಾರದೆಂದರೆ ನಿಮ್ಮ ಕುಟುಂಬದ ಸದಸ್ಯರನ್ನು ಆಡಳಿತದ ವಿಷಯದಲ್ಲಿ ಮೂಗು ತೂರಿಸಲು ಅವಕಾಶ ನೀಡಬಾರದು ಎಂದು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅಮಿತ್ ಶಾ ಅಭಿನಂದನೆ ಸಲ್ಲಿಸಿದ ವೇಳೆ ಆಡಳಿತದಲ್ಲಿ ಕುಟುಂಬದವರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು. ನಿಮ್ಮ ಪುತ್ರ ಹಾಗೂ ಪುತ್ರಿಯರೇ ಇರಲಿ, ಇಲ್ಲವೇ ಅಳಿಯಂದಿರು ಸೇರಿದಂತೆ ಯಾರೊಬ್ಬರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೆ ದೂರವಿಡಬೇಕೆಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಹದಿನೇಳು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಎಲ್ಲಿಯೂ ತಮ್ಮ ಕುಟುಂಬದ ಸದಸ್ಯರನ್ನು ಆಡಳಿತದಲ್ಲಿ ಮೂಗು ತೂರಿಸಲು ಅವಕಾಶ ಕೊಟ್ಟಿಲ್ಲ. ಇದೇ ಮಾದರಿಯನ್ನು ನೀವು ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕುಟುಂಬದವರನ್ನು ನಿಮ್ಮ ಮನೆಗೆ ಸೇರಿಸಲೇಬಾರದು ಎಂಬ ಖಡಕ್ ಸೂಚನೆ ಕೊಟ್ಟಿದೆ ಎಂದು ತಿಳಿದು ಬಂದಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

BS Yediyurappa BJP Amith Shah Session