ಬಡ್ತಿ ಮೀಸಲಾತಿಯ ದುಷ್ಪರಿಣಾಮಗಳನ್ನು ತಡೆಯಲು ಸುಗ್ರೀವಾಜ್ಞೆ ಹೊರಡಿಸಿ !


12-06-2017 392

ಬೆಂಗಳೂರು:- ಪರಿಶಿಷ್ಟ ಜಾತಿ  ಮತ್ತು ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಧಕ್ಕೆ ತಂದಿರುವ ಸುಪ್ರೀಂ ಕೋರ್ಟ್ ತೀರ್ಪಿನ ದುಷ್ಪರಿಣಾಮ ತಡೆಯಲು ರಾಜ್ಯ ಸರ್ಕಾರ ಕೂಡಲೇ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ನಾಳೆ ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಟೌನ್‌ಹಾಲ್ ಎದುರು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದೆ. ಪ್ರತಿಭಟನೆಯಲ್ಲಿ ೨ ಸಾವಿರಕ್ಕೂ ಅಧಿಕ ಸರ್ಕಾರಿ ನೌಕರರೂ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ನಾಯಕರು ಭಾಗವಹಿಸಲಿದ್ದಾರೆ ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಸಂಯೋಜಕ ಎನ್ ಮುನಿಸ್ವಾಮಿ ತಿಳಿಸಿದ್ದಾರೆ. ಜಾತಿ ರಹಿತ, ವರ್ಗ ರಹಿತ, ಲಿಂಗ ಭೇದ ರಹಿತವಾಗಿ ಸಮಾನತೆಯ ಸಮಾಜವನ್ನು ಕಟ್ಟಲು ರಾಜ್ಯದ ಇತಿಹಾದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟ ರಚಿಸಿದ್ದು, ಒಕ್ಕೂಟದ ಆಶ್ರಯದಲ್ಲಿ ವಿವಿಧ ದಲಿತ ಸಂಘಟನೆಗಳ ವಿವಿಧ ರಾಜ್ಯ ಮುಖಂಡರ ನೇತೃತ್ವದಲ್ಲಿ ಮೊದಲಬಾರಿಗೆ ಪರಿಶಿಷ್ಟ ಜಾತಿ ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಧಕ್ಕೆ ತಂದಿರುವ ಸುಪ್ರೀಂ ಕೋರ್ಟ್ ತೀರ್ಪಿನ ದುಷ್ಪರಿಣಾಮಗಳನ್ನು ತಡೆಯಲು ಈ ಕೂಡಲೇ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ರಾಜ್ಯ ಮಟ್ಟದ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಸಾವಿರಾರು ಪರಿಶಿಷ್ಟ ಜಾತಿ ಪಂಗಡದ ಸರ್ಕಾರಿ ನೌಕರರು ಹಿಂಬಡ್ತಿಗೆ ಒಳಗಾಗುವ ಸಾಧ್ಯತೆಗಳಿವೆ. ಈ ಅನ್ಯಾಯವನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಈ ಕೂಡಲೇ ಹೊರಡಿಸಬೇಕು ಮತ್ತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪುನರ್ ಪರಿಶಿಲನಾ ಅರ್ಜಿಯನ್ನು ಸಲ್ಲಿಸಿದ್ದು, ಅಲ್ಲಿ ವಾದ ಮಂಡಿಸಲು ಸಮರ್ಥ ವಕೀಲರನ್ನು ನೇಮಿಸಬೇಕು. ಕೇಂದ್ರ ಸರಕಾರವು ಲೋಕಸಭೆಯಲ್ಲಿ ಸಂವಿಧಾನಕ್ಕೆ ೧೧೭ ನೇ ತಿದ್ದುಪಡಿ ಅನುಮೋದಿಸಿ ಶಾಶ್ವತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.