ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭ!


11-07-2019 180

ಬೆಂಗಳೂರು: ಅತೃಪ್ತರ ರಾಜೀನಾಮೆ ಮುಂದುವರೆದಿದ್ದು ಅವರನ್ನು  ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ದೋಸ್ತಿ ನಾಯಕರ ಹರ ಸಾಹಸದ ನಡುವೆ ನಾಳೆಯಿಂದ ವಿಧಾನಮಂಡಲ ಅಧಿವೇಶನ ಕೂತೂಹಲ ಕೆರಳಿಸಿದೆ.

ಕೂತೂಹಲದ ನಡುವೆ ಆರಂಭಗೊಳ್ಳಲಿರುವ ವಿಧಾಸಸಭೆಯ ಅಧಿವೇಶನವನ್ನು ಮುಂದೂಡುವ ಸಾಧ್ಯತೆಯನ್ನು ಸ್ವೀಕರ್ ರಮೇಶ್‍ಕುಮಾರ್ ತಳ್ಳಿಹಾಕಿದ್ದಾರೆ. ವಿಧಾನಮಂಡಲದ ಅಧಿವೇಶನದ ಹಿನ್ನಲೆಯಲ್ಲಿ  ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ನಾಯಕರು, ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ನಾಳೆಯಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನದ ಮೇಲೆ ರಾಜಕೀಯ ಅಸ್ಥಿರತೆಯ ಕಾರ್ಮೋಡ ಕವಿದಿದೆ.

ಲೋಕಸಭಾ ಚುನಾವಣೆಗೂ ಮುನ್ನ 2019-20ನೇ ಸಾಲಿನ ರಾಜ್ಯಮುಂಗಡಪತ್ರ ಪ್ರಕಟಿಸಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಜುಲೈ ಅಂತ್ಯದವರೆಗೂ ಲೇಖಾನುದಾನ ಪಡೆದಿದ್ದು ಪ್ರಸಕ್ತ ಅಧಿವೇಶನದಲ್ಲಿ ಹಣಕಾಸು ಮಸೂದೆಗೆ ಒಪ್ಪಿಗೆ ಪಡೆಯುವ ಅನಿವಾರ್ಯ ಸ್ಥಿತಿಗೆ ಕುಮಾರಸ್ವಾಮಿನೇತೃತ್ವದ ಸರ್ಕಾರ ಸಿಲುಕಿದೆ. ಹಣಕಾಸು ಮಸೂದೆಗೆ ಒಪ್ಪಿಗೆ ಸಿಗದಿದ್ದರೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವ ಜತೆಗೆ ಸರ್ಕಾರಿ ನೌಕರರಿಗೆ ಸಂಬಳ ನೀಡದ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಯಾವ ರೀತಿ ಅಧಿವೇಶನವನ್ನು ನಿಭಾಯಿಸಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. ಬಿಜೆಪಿ ನಾಯಕರು ದೋಸ್ತಿ ಸರ್ಕಾರವನ್ನು ಪತನಗೊಳಿಸಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ತುದಿಗಾಲ ಮೇಲೆ ನಿಂತಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಇಲ್ಲವೇ ಶಾಸಕರ ಮನವೊಲಿಸಿ ಸರ್ಕಾರವನ್ನು ಮುನ್ನಡೆಸುತ್ತಾರಾ? ಎಂಬ ಕುತೂಹಲ ರಾಜ್ಯದ ಜನರಲ್ಲಿ ಮನೆ ಮಾಡಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Ramesh Kumar Speaker Session Karnataka Government