ಬಂದ್ ಗಳಿಗೆ ಭವಿಷ್ಯವಿಲ್ಲ..!


11-06-2017 582

ಬಯಲು ಸೀಮೆಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಹಾಗೂ ಉತ್ತರ ಕರ್ನಾಟಕಕ್ಕೆ ನೀರಾವರಿ ಯೋಜನೆಗೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಒಕ್ಕೂಟದ ವತಿಯಿಂದ ಜೂನ್‌ 12 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ಧೋರಣೆ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ ಅಂತಾ ಪ್ರತಿಭಟನೆಯ ನೇತೃತ್ವ ವಹಿಸಿರುವ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಆದರೆ ಕನ್ನಡ ಒಕ್ಕೂಟ ಕರೆ ನೀಡಿರುವ ರಾಜ್ಯ ಬಂದ್ ಗೆ ನಾರಾಯಣ ಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಬೆಂಬಲ ನೀಡಲು ನಿರಾಕರಿಸಿವೆ. ಇನ್ನು ಆಟೋ ಚಾಲಕರು ಸಹ ಬಂದ್ ಗೆ ಬೆಂಬಲ ನೀಡವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಬಂದ್ ಯಶಸ್ವಿಯಾಗೋದು ಅನುಮಾನ ಎನ್ನಲಾಗಿದೆ.

ಅಂದಹಾಗೆ ಜನರಿಗೆ ‘ಬಂದ್’ ಮಾಡಿ ಮಾಡಿ ಸಾಕಾಗಿದೆ. ಎಲ್ಲಾ ವಿಷಯಗಳಿಗೂ ಬಂದ್ ಮಾಡಿ ಪ್ರತಿಭಟನೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಅನ್ನೋ ತೀರ್ಮಾನಕ್ಕೆ ಜನ ಬಂದುಬಿಟ್ಟಿದ್ದಾರೆ. ಅಲ್ಲದೇ ಈ ಬಂದ್ ನಂತಹ ಹಳೆ ಕಾಲದ ಪದ್ಧತಿಗಳಿಂದ ಯಾವುದೇ ಪ್ರಯೋಜನವಾಗದು ಎಂದು ಬಹುತೇಕ ಜನರಿಗೆ ಮನವರಿಕೆಯಾಗಿಬಿಟ್ಟಿದೆ. ಆದರೆ ಇದನ್ನು ಇನ್ನೂ ಸಹ ವಾಟಾಳ್ ನಾಗರಾಜ್ ಅವರು ಅರ್ಥಮಾಡಿಕೊಂಡಂತಿಲ್ಲ.

ಬಹುಶಃ ಆಗಾಗ ಪ್ರತಿಭಟನೆಗಳನ್ನು ಮಾಡುವುದು, ಬಂದ್ ನಡೆಸುವುದು ವಾಟಾಳ್ ನಾಗರಾಜ್ ಅವರಿಗೆ ಅಸ್ತಿತ್ವದ ಪ್ರಶ್ನೆಯಾದಂತಿದೆ. ಹೀಗಾಗಿಯೇ ಅವರು ವರ್ಷಕ್ಕೆ ನಾಲ್ಕಾದರೂ ಪ್ರತಿಭಟನೆ ಬಂದ್ ಗೆ ಕರೆ ನೀಡುತ್ತಾರೆ ಅನ್ನೋದು ಸಾಮಾನ್ಯ ಜನರ ಅಭಿಮತ.

ಇದು ಇಂಟರ್ ನೆಟ್ ಯುಗ. ಬೀದಿಗಿಳಿದು ಪ್ರತಿಭಟನೆ ಮಾಡೋದಕ್ಕಿಂತ ಪ್ರಭಾವಶಾಲಿಯಾದ ಪ್ರತಿಭಟನೆಗಳು ಸಾಮಾಜಿಕ ಜಾಲತಾಣಗಳಲ್ಲೇ ನಡೆಯುತ್ತವೆ. ಹೀಗಾಗಿಯೇ ಬೃಹತ್ ಪ್ರತಿಭಟನೆ ಹಾಗೂ ಬಂದ್ ಗೆ ಕರೆ ನೀಡುವವರು ಹಿಂದೆ ಮುಂದೆ ನೋಡುವಂತಾಗಿದೆ. ಇದನ್ನು ಪ್ರತಿ ಬಾರಿಯೂ ಬಂದ್ ಗೆ ಕರೆ ನೀಡುವ ವಾಟಾಳ್ ನಾಗರಾಜ್ ರಂಥವರು ಅರ್ಥ ಮಾಡಿಕೊಂಡರೆ ಒಳ್ಳೆಯದು ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ.


ಒಂದು ಕಮೆಂಟನ್ನು ಬಿಡಿ