ಯಡಿಯೂರಪ್ಪ ಮತ್ತು ಪರಮೇಶ್ವರ್ ಬೆಂಬಲಿಗರ ನಡುವೆ ಗಲಾಟೆ


08-07-2019 179

ಬೆಂಗಳೂರು:  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಕ್ಷೇತರ ಶಾಸಕ ಹೆಚ್.ನಾಗೇಶ್ ಮುಂಬೈಗೆ ಹೋಗಲು ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ.

ಹೆಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸೋಮವಾರ ಮಧ್ಯಾಹ್ನ 12ರ ವೇಳೆ ಮುಂಬೈನತ್ತ ಹೊರಡಲು ಹೆಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.

ನಾಗೇಶ್ ಅವರಿಗಾಗಿ ವಿಶೇಷ ವಿಮಾನ ಸಿದ್ಧಪಡಿಸಿಕೊಂಡಿದ್ದ ಯಡಿಯೂರಪ್ಪ ಆಪ್ತ ಸಂತೋಷ್ ನಿಂತಿದ್ದು ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದ ವೇಳೆ ಯಡಿಯೂರಪ್ಪ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಈ ವೇಳೆ ಇಬ್ಬರು ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು  ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದರು.

ಮುಳುಬಾಗಿಲಿನಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ನಾಗೇಶ್ ಅವರಿಗೆ ಬಳಿಕ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಅತೃಪ್ತರ ಗುಂಪು ಸೇರಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

G Parameshwar Yadiyurappa Karnataka government Congress JDS coalition