ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೋರಿ ಧರಣಿ


25-06-2019 185

ಬೆಂಗಳೂರು: ಪರಿಶಿಷ್ಟ ಪಂಗಡಕ್ಕೆ ಶೇ. 7.5 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮೆರವಣಿಗೆಯಲ್ಲಿ ಬಂದ ವಾಲ್ಮೀಕಿ ಸಮಾಜದ ಸಾವಿರಾರು ಮಂದಿ ವಿಧಾನಸೌಧದ ಬಳಿ ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಾಯಿತು.
ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಿಂದ ಶ್ರೀಗಳಾದ ಪ್ರಸನ್ನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಕಳೆದ 17 ದಿನಗಳಿಂದ ಆರಂಭಗೊಂಡಿದ್ದ ಪಾದಯಾತ್ರೆ ಇಂದು ರಾಜಧಾನಿ ಬೆಂಗಳೂರನ್ನು ಸಮಾಜದ ಬೃಹತ್ ಜನಸಂಖ್ಯೆಯೊಂದಿಗೆ ಪ್ರವೇಶಿಸಿತು. ಪ್ರಸನ್ನಾನಂದ ಸ್ವಾಮೀಜಿಗಳು ವಿಧಾನಸೌಧದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಭಾರೀ ಜನಸ್ತೋಮ ಸೇರಿದ್ದು ಕೂಡಲೇ ಅವರನ್ನು ನಗರದ ಫ್ರೀಡಂ ಪಾರ್ಕ್‍ಗೆ ಕಳುಹಿಸಲಾಯಿತು.
ಅಲ್ಲಿ ಆಯೋಜಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಗಮಿಸಿರುವ ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಾಲ್ಮೀಕಿ ಸಮುದಾಯದ ಅನೇಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಕೇಂದ್ರ ಸರ್ಕಾರದ ಮಾದರಿ ರಾಜ್ಯದಲ್ಲೂ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿ ನೀಡುವವರೆಗೂ ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಸ್ಥಳಕ್ಕೆ ಮುಖ್ಯಮಂತ್ರಿ ಬರಲು ಪಟ್ಟುಹಿಡಿದ ಪ್ರತಿಭಟನಾನಿರತರರು ಪ್ರತಿಭಟನಾನಿರತರು ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ, ಸುತ್ತಮುತ್ತಲಿನ ರಸ್ತೆಗಳಲ್ಲಿ ಕುಳಿತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಸ್ಥಳಕ್ಕೆ ಆಗಮಿಸಿ ಪರಿಶಿಷ್ಟ ಪಂಗಡದವರಿಗೆ ಶೇ. 7.5 ರಷ್ಟು ಮೀಸಲಾತಿ ನೀಡುವ ಕುರಿತು ಭರವಸೆ ನೀಡುವವರೆಗೂ ರಸ್ತೆ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡರು, ರಾಜ್ಯದಲ್ಲಿ ಈ ಹಿಂದೆ 40 ಲಕ್ಷ ಪರಿಶಿಷ್ಟ ಪಂಗಡದ ಜನಸಂಖ್ಯೆ ಇದೆ ಎಂದು ಜನಗಣತಿಯಲ್ಲಿ ತಿಳಿಸಲಾಗಿತ್ತು. ಆದರೆ 2019ರ ವೇಳೆಗೆ ರಾಜ್ಯದಲ್ಲಿ 70 ಲಕ್ಷ ಅಧಿಕ ಸಂಖ್ಯೆ ವಾಲ್ಮೀಕಿ ಸಮುದಾಯದವರಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಪ್ರಬಲ ಸಮಾಜವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರದಿಂದ ನೀಡಬೇಕಾದ ಮೀಸಲಾತಿ ನೀಡದೆ ವಂಚಿಸಲಾಗುತ್ತಿದೆ ಎಂದ ಅವರು, ವಾಲ್ಮೀಕಿ ಸಮಾಜ ಶಿಕ್ಷಣ, ಉದ್ಯೋಗ, ಇನ್ನಿತರ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕೇಂದ್ರದ ಮಾದರಿಯಲ್ಲಿ ಇದುವರೆಗೂ ಶೇ. 7.5 ರಷ್ಟು ಮೀಸಲಾತಿ ಘೋಷಣೆ ಮಾಡಿಲ್ಲ. ಇದರಿಂದ ಸಮಾಜ, ಶಿಕ್ಷಣ ಹಾಗೂ ಉದ್ಯೋಗದಿಂದ ವಂಚಿತಗೊಂಡಿದೆ. ಪ್ರಸ್ತುತ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಪಂಗಡಕ್ಕೆ ಕೇಂದ್ರದ ಮಾದರಿಯಲ್ಲಿ ಶೇ. 7.5 ರಷ್ಟು ಮೀಸಲಾತಿ ಘೋಷಿಸದಿದ್ದರೆ, ಮುಂಬರುವ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಬೇಕಾಗುತ್ತದೆ ಎಂದು ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪಾದಯಾತ್ರೆ ಅಂತ್ಯ
ಶೇ. 7.5 ರಷ್ಟು ಮೀಸಲಾತಿಗೆ ಆಗ್ರಹಿಸಿ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿಗಳು ಕಳೆದ 17 ದಿನಗಳಿಂದ ದಾವಣಗೆರೆಯಿಂದ ಪಾದಯಾತ್ರೆ ಆರಂಭಿಸಿದ್ದರು. ರಾಜನಹಳ್ಳಿ, ಜಗಳೂರು, ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು, ಸಿರಾ, ತುಮಕೂರು, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಶಿಡ್ಲಘಟ್ಟ, ಹೊಸಕೋಟೆ, ಕೆ.ಆರ್. ಪುರಂ ಮೂಲಕ ಬೆಂಗಳೂರು ಪ್ರವೇಶಿಸಿ ನಂತರ, ವಿಧಾನಸೌಧದ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ, ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಪಾದಯಾತ್ರೆ ಅಂತ್ಯಗೊಳಿಸಿದರು.
ಸ್ವಾಮೀಜಿಗಳ 17 ದಿನ ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ ಹಿನ್ನೆಲೆ ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೀಸಲಾತಿಗಾಗಿ ಸ್ವಾಮೀಜಿಗಳು 17 ದಿನಗಳ ಕಾಲ ಪಾದಯಾತ್ರೆ ಮಾಡಲು ಕಾರಣವಾದ ಸರ್ಕಾರ ಮೀಸಲಾತಿ ಘೋಷಿಸದಿದ್ದರೆ, ಅದರ ಪರಿಣಾಮವನ್ನು ಬೇರೆಯದೇ ರೀತಿಯಲ್ಲಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಚಿವ ತುಕಾರಾಂ, ಉಗ್ರಪ್ಪ ಸೇರಿದಂತೆ, ಇನ್ನಿತರ ಜನಪ್ರತಿನಿಧಿಗಳು, ಸಾವಿರಾರು ಸಮಾಜ ಮುಖಂಡರು ಪಾಲ್ಗೊಂಡಿದ್ದರು.
 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

reservation strike bengaluru Valmiki samaja