ರಾಜಕೀಯ ದುರುದ್ದೇಶದಿಂದ ಐಟಿ ದಾಳಿ, ಸಿದ್ದರಾಮಯ್ಯ


29-03-2019 169

ಈಶ್ವರಪ್ಪನತ್ರ ನೋಟ್ ಎಣಿಸುವ ಮಿಷನ್ ಇಲ್ವಾ, ಬಿ.ಎಸ್.ವೈ, ಶ್ರೀರಾಮುಲು ಬಳಿ ದುಡ್ಡು ಇಲ್ವಾ, ನಮ್ಮ ಮೇಲೆ ಐಟಿ ದಾಳಿ ಮಾಡ್ತಾರೆ. ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ಸಮಂಜಸವಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಮೈಸೂರು ನಗರದ ಮಂಡಕಹಳ್ಳಿ ವಿಮಾನನಿಲ್ದಾಣದಲ್ಲಿ ಮಾತನಾಡಿದ ಅವರು, ಐಟಿ ರೈಡಿಗೆ ನಮ್ಮ ವಿರೋಧವಿಲ್ಲ. ಕಳೆದ ತಿಂಗಳು ಮಾಡಬೇಕಿತ್ತು ಅಥವಾ ಮುಂದಿನ ತಿಂಗಳು ಮಾಡಬೇಕಿತ್ತು. ಆದರೆ, ರಾಜಕೀಯ ದುರುದ್ದೇಶದಿಂದ ಐಟಿ ರೈಡ್ ಮಾಡಿ ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪ, ಶ್ರೀರಾಮುಲು, ಈಶ್ವರಪ್ಪ ಅವರ ಬಳಿ ದುಡ್ಡು ಇಲ್ವೇ, ಅವರ ಮೇಲೆ ದಾಳಿ ಮಾಡಲು ಐಟಿ ಇಲಾಖೆ ಯಾಕೆ ಮುಂದಾಗುತ್ತಿಲ್ಲ. ಇವೆಲ್ಲ ರಾಜಕೀಯ ಪ್ರೇರಿತವಾದದ್ದು ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುತ್ತೀನಿ. ಯಾವ ಸ್ಟಾರ್ ಬರುವುದಿಲ್ಲ. ನಾವೇ ಸ್ಟಾರ್ ಪ್ರಚಾರಕರು. ಸ್ಟಾರ್‍ಗಳಿಗೆ ಹಣೆ ಮೇಲೆ ಸ್ಟಾರ್ ಇದ್ಯಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಮೊದಲ ಪೂರ್ವಭಾವಿ ಸಭೆ ನಡೆಯಿತು.

ಈ ಸಭೆಗೆ ಮೈಸೂರು ಜಿಲ್ಲಾ ಜೆಡಿಎಸ್ ಸ್ಥಳೀಯ ಮುಖಂಡರು ಸೇರಿದಂತೆ ಯಾವುದೇ ಶಾಸಕರಾಗಲಿ ಸಚಿವ ಜಿಟಿ ದೇವೇಗೌಡ ಹಾಗೂ ಸಾ.ರಾ. ಮಹೇಶ್ ಸೇರಿದಂತೆ ಬಹುತೇಕರು ಗೈರಾಗಿದ್ದು, ಎರಡು ಪಕ್ಷಗಳ ನಡುವೆ ಇನ್ನೂ ಸಮನ್ವಯದ ಕೊರತೆ ಇದೆ ಅನ್ನೋದನ್ನ ತೋರಿಸುತ್ತಿದೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #Political #It Raid #Siddaramaih