ರಾಜ್ಯ ರಾಜಕಾರಣಕ್ಕೆ ಐಟಿ ಶಾಕ್- ಬಿಜೆಪಿ ವಿರುದ್ಧ ಕೆಂಡವಾದ ಮೈತ್ರಿನಾಯಕರು 


28-03-2019 351

ಮೋದಿ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಹತ್ತಿಕ್ಕಲು ಐಟಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಸಿಎಂ ಕುಮಾರಸ್ವಾಮಿ ನನ್ನ ಆಪ್ತರ ಮೇಲೆ ಐಟಿ ದಾಳಿ ನಡೆಯಲಿದೆ, ಐಟಿ ಮುಖ್ಯಸ್ಥ ಬಾಲಕೃಷ್ಣ ಬಿಜೆಪಿ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೀಗೆ ಸಿಎಂ ಕುಮಾರಸ್ವಾಮಿ ಆರೋಪ ಮಾಡಿದ ಬೆನ್ನಲ್ಲೇ ನಡೆದ ಐಟಿ ದಾಳಿ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು, ಐಟಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬುಧವಾರ ಸಂಜೆ ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಕುಮಾರಸ್ವಾಮಿ ನನಗೆ ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ. ಗುರುವಾರ ರಾಜ್ಯದಲ್ಲಿ ನನ್ನ ಆಪ್ತರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಯಲಿದೆ ಎಂದಿದ್ದರು. ಈಗಾಗಲೇ ಏರ್‍ಪೋರ್ಟ್‍ನಲ್ಲಿ ಕ್ಯಾಬ್‍ಗಳು ಸಿದ್ಧವಾಗಿದ್ದು, ದೆಹಲಿಯಿಂದ ಆಗಮಿಸುವ ಐಟಿ ಅಧಿಕಾರಿಗಳು ದಾಳಿ ನಡೆಸಲಿದ್ದಾರೆ ಎಂದಿದ್ದರು. ಕುಮಾರಸ್ವಾಮಿ ಆರೋಪ ನಿಜವಾಗಿದ್ದು ಮುಂಜಾನೆ ವೇಳೆಗೆ ಸಿಎಂ ಕುಮಾರಸ್ವಾಮಿ ಆಪ್ತ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ಐಟಿ ದಾಳಿ ನಡೆದಿದೆ. 
ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋದರಿಂದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮೇಲೆ ನಡೆದ ದಾಳಿ ಸಾಕಷ್ಟು ಕುತೂಹಲ ಮೂಡಿಸಿದೆ. ಇದೇ ವೇಳೆ ರೇವಣ್ಣ ಪುತ್ರ ಕಣಕ್ಕಿಳಿದಿರುವ ಹಾಸನದಲ್ಲೂ ರೇಡ್ ನಡೆದಿದ್ದು, ರೇವಣ್ಣ ಆಪ್ತ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. 
ಈ ದಾಳಿಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು  ಕೇಂದ್ರ ಸರ್ಕಾರದ ಪ್ರೇರಿತ ದಾಳಿ ಎಂದು ಆರೋಪಿಸಿದ್ದು, ಐಟಿ ಬಿಜೆಪಿಯ ಎಜೆಂಟ್‍ರಂತೆ ವರ್ತಿಸುತ್ತಿದೆ ಎಂದು ಆರೋಪಿಸಿದೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಎಸ್.ಪುಟ್ಟರಾಜು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ಮಾಡಲಾಗಿದೆ. ಇದರ ವಿರುದ್ಧ ಹೋರಾಟ ನಡೆಸುತ್ತೇನೆ. ಈ ದಾಳಿ ಅನೀರಿಕ್ಷಿತವಲ್ಲ. ಇದರ ಬಗ್ಗೆ ನಮಗೆ ಬಿಜೆಪಿ ನಾಯಕರೇ ಮಾಹಿತಿ ನೀಡಿದ್ದರು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಐಟಿ ದಾಳಿಯ ವಿರುದ್ಧ ನನ್ನ ಹೋರಾಟ ಮುಂದುವರೆಸುತ್ತೇನೆ. ಇವತ್ತು ಸಭೆ ನಡೆಸಿದ ಹೋರಾಟದ ರೂಪುರೇಶೆ ಸ್ಪಷ್ಟವಾಗಲಿದೆ. ಕೇಂದ್ರ ಸರ್ಕಾರ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. 
ಇನ್ನು ಕಾಂಗ್ರೆಸ್ ಐಟಿ ಗೋವಾ ಮತ್ತು ಕರ್ನಾಟಕ ವಲಯ ಉಸ್ತುವಾರಿ ಡಿ.ಜಿ,ಬಾಲಕೃಷ್ಣ ವಿರುದ್ಧ ಕಿಡಿಕಾರಿದ್ದು, ವಿಧಾನಸಭೆ ಚುನಾವಣೆ ವೇಳೆಯಲ್ಲಿ ಈ ಅಧಿಕಾರಿಯನ್ನು ವರ್ಗಾಯಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಆದರೆ ವರ್ಗಾವಣೆ ಮಾಡಿರಲಿಲ್ಲ. ಇದೇ ಅಧಿಕಾರಿ ಈಗ ಸೇಡು ತೀರಿಸಿಕೊಳ್ಳಲು 200 ಕ್ಕೂ ಹೆಚ್ಚು ಅಧಿಕಾರಿಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದೆ. 
ಇನ್ನು ಐಟಿ ದಾಳಿಗೆ ಉತ್ತರಿಸಿರುವ ಸಿಎಂ ಸಹೋದರ ಎಚ್.ಡಿ.ರೇವಣ್ಣ, ಐಟಿ ದಾಳಿಯಿಂದ ಯಾವುದೇ ಶಾಕ್ ಆಗಿಲ್ಲ. ಐಟಿಯನ್ನು ಬಳಸಿ ದೇವೆಗೌಡರನ್ನು ಹೆದರಿಸಬಹುದು ಎಂದುಕೊಂಡಿದ್ದರೇ ಇದು ಬಿಜೆಪಿಯ ಅಂತ್ಯಕಾಲ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಐಟಿ ದಾಳಿ ಹೊಸ ಸಂಚಲನ ಉಂಟುಮಾಡಿದ್ದು, ಜೆಡಿಎಸ್ ಕಾಂಗ್ರೆಸ್ ಐಟಿ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ್ದಾರೆ.  


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Karnataka #Shocking #It Raid #Jds Congress