ಸಚಿವ ಸಂಪುಟದಿಂದ ಉಪಮುಖ್ಯಮಂತ್ರಿ ವಜಾ 


27-03-2019 396

ಇತ್ತ ದೇಶದಾದ್ಯಂತ ಲೋಕಸಭೆ ಚುನಾವಣೆಗೆ ಭರದಿಂದ ಸಿದ್ಧತೆ ನಡೆಯುತ್ತಿದ್ದರೇ, ಅತ್ತ ಗೋವಾದ ರಾಜಕೀಯ ದಿನಕ್ಕೊಂದು ತಿರುವು  ಪಡೆದುಕೊಳ್ಳುತ್ತಿದೆ. ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾದ ಸ್ಥಾನಕ್ಕೆ ಬಿಜೆಪಿ ನಾಯಕ ಪ್ರಮೋದ್ ಸಾವಂತ್ ಆಯ್ಕೆಯಾದ ಬೆನ್ನಲ್ಲೇ ಮತ್ತಷ್ಟು ರಾಜಕೀಯ ಹೈಡ್ರಾಮಾಗಳು ಮುಂದುವರಿದಿವೆ. 

ಮನೋಹರ್ ಪರಿಕ್ಕರ್ ನಿಧನದ ಬಳಿಕ ತೆರವಾದ ಸಿಎಂ ಸ್ಥಾನವನ್ನು ತುಂಬಲು ಎರಡು ಮಿತ್ರ ಪಕ್ಷಗಳ ಸಹಾಯ ಪಡೆದ ಬಿಜೆಪಿ ಗೋವಾದಲ್ಲಿ ತಮ್ಮದೇ ಸರ್ಕಾರ ಸ್ಥಾಪಿಸಿತ್ತು. ಆದರೆ ಈ ಖುಷಿ ಬಹಳ ದಿನಗಳ ಕಾಲ ಉಳಿಯಲಿಲ್ಲ. ನಿಧಾನಕ್ಕೆ ಬೆಂಬಲ ನೀಡಿದ ಪಕ್ಷಗಳಲ್ಲಿ ಕೆಲವರು ಅಸಮಧಾನ ತೋರಲಾರಂಭಿಸಿದ್ದರು. 

ಇಂಥ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ನಿನ್ನೆ ತಡರಾತ್ರಿ ಅಚ್ಚರಿಯ ಬೆಳವಣಿಗೆಗೆ ಗೋವಾ ಸಾಕ್ಷಿಯಾಗಿದೆ. ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೆ ತಮ್ಮ ಪಕ್ಷವನ್ನು ಬಿಜೆಪಿಯೊಳಗೆ ವಿಲೀನಗೊಳಿಸಿದ್ದಾರೆ. ಇದಾಗಿ ಕೆಲವೇ ಗಂಟೆಗಳಲ್ಲಿ ಅಚ್ಚರಿ ಬೆಳವಣಿಗೆಯಲ್ಲಿ ಸಿಎಂ ಪ್ರಮೋದ್‍ಸಾವಂತ್ ತಾವೇ ಉಪಮುಖ್ಯಮಂತ್ರಿಯಾಗಿ ಆಯ್ಕೆಮಾಡಿದ್ದ ಧವಾಲಿಕರ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ. 

ಸುಧೀನ್ ಧವಾಲಿಕರ್ ಅವರನ್ನು ಸಂಪುಟದಿಂದ ಕೈಬಿಡಲಾಗಿದ್ದು, ವಜಾಗೊಳಿಸುವಂತೆ  ಸಿಎಂ ಸಾವಂತ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಇದರ ಅನ್ವಯ ಅವರನ್ನು ಉಪಮುಖ್ಯಮಂತ್ರಿಸ್ಥಾನದಿಂದ ಕೈಬಿಡಲಾಗಿದೆ. ಒಟ್ಟಿನಲ್ಲಿ ಗೋವಾದಲ್ಲಿ ಪ್ರತಿಕ್ಷಣಕ್ಕೊಂದರಂತೆ ರಾಜಕೀಯ ಬೆಳವಣಿಗಳು ಗದಿಗೆದರುತ್ತಿದ್ದು, ಈ ಎಲ್ಲ ಬೆಳವಣಿಗೆಗಳು ಲೋಕಸಭಾ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಕಾದು ನೋಡಬೇಕಿದೆ.  


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Goa #Deputy C.M #Politics #Dismiss