ಬಿಜೆಪಿ ನಾಯಕರ ತಪ್ಪಿಗೆ "ಕೈ" ಸೇರುತ್ತಾ ಬೆಂಗಳೂರು ದಕ್ಷಿಣ


26-03-2019 452

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ. ಇದುವರೆಗಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಅಭ್ಯರ್ಥಿ ಆಯ್ಕೆಗೊಂಡು ಬಿಜೆಪಿ ಪಾಲಿಗೆ ಪಕ್ಕಾ ಗೆಲುವನ್ನು ತಂದುಕೊಡುತ್ತಿದ್ದ ಬಿಜೆಪಿಯ ತವರು. ಆದರೆ ಈ ಬಾರಿ ಮಾತ್ರ ಹಳೆಯ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ ಕೈಪಾಳಯದ ತೆಕ್ಕೆಗೆ ಕ್ಷೇತ್ರ ಸೇರುವ ಸಾಧ್ಯತೆ ವ್ಯಕ್ತವಾಗುತ್ತಿದೆ. ಇದಕ್ಕೆ ಕಾರಣ ಬಿಜೆಪಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆ. 


ಹೌದು ಬ್ರಾಹ್ಮಣರ ಮತವೇ ನಿರ್ಣಾಯಕ ಎನ್ನಿಸಿರುವಂತ ಈ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿ.ಅನಂತಕುಮಾರ್ ಕಳೆದ 6 ಬಾರಿ ಸತತ ಸಂಸದರಾಗಿ ಆಯ್ಕೆಯಾಗುತ್ತ ಬಂದಿದ್ದರು. ಕಳೆದ ಬಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸುತ್ತಲೇ, ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು. 
ಎಲೆಕ್ಷನ್ ಹೊಸ್ತಿಲಿನಲ್ಲಿ  ನಡೆದ ಈ ಘಟನೆ ರಾಜ್ಯ ಬಿಜೆಪಿ ಹಾಗೂ ಅನಂತಕುಮಾರ್ ಕುಟುಂಬವನ್ನು ನಲುಗಿಸಿ ಬಿಟ್ಟಿದೆ. ಅನಂತಕುಮಾರ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಎಲ್ಲರೂ ಒಕ್ಕೊರಲಿನಿಂದ ಹೇಳಿದ ಹೆಸರು ತೇಜಸ್ವಿನಿ ಅನಂತಕುಮಾರ್. ಇದಕ್ಕೂಒಂದು ಕಾರಣವಿದೆ. ಅಧಿಕಾರ ಇಲ್ಲದಿದ್ದಾಗಲೂ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಬಲಗೈ ಅಂತೆ ನಿಂತು ಪಕ್ಷದ ಕಾರ್ಯ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. 

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಒಳ್ಳೆಯ ಹೆಸರಿತ್ತು ಹಾಗೂ ಜನಸಂಪರ್ಕವೂ ಇತ್ತು. ಆದರೆ ತೇಜಸ್ವಿನಿಗೆ ಟಿಕೇಟ್ ನೀಡುವುದಾಗಿ ಹೇಳಿದ್ದ ಬಿಜೆಪಿ ಇದೀಗ ಧೀಡಿರ ಮನಸ್ಸು ಬದಲಾಯಿಸಿದ್ದು, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಸಹೋದರನ ಪುತ್ರ ತೇಜಸ್ವಿ ಸೂರ್ಯಾಗೆ ಟಿಕೇಟ್ ಘೋಷಿಸಿದೆ. ಇದು ಬಿಜೆಪಿ ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡಂತ ನಿರ್ಧಾರ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗಿಡಾಗುತ್ತಿರುವ ಸಂಗತಿ. 
ಒಂದೆಡೆ ಅನಂತಕುಮಾರ್ ಸ್ಥಾನವನ್ನು ತೇಜಸ್ವಿನಿ ಅನಂತಕುಮಾರ್ ಗೆ ನೀಡೋ ಬದಲು ತೇಜಸ್ವಿಗೆ ನೀಡಿರೋದಿಕ್ಕೆ ಅನಂತಕುಮಾರ್ ಬೆಂಬಲಿಗರು ಗಲಾಟೆಗೆ ಮುಂದಾಗಿದ್ದರೇ, ಇನ್ನೊಂದೆಡೆ ತೇಜಸ್ವಿನಿ ಎದುರು ಸೋಲು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆಯಲ್ಲಿದ್ದ ಕಾಂಗ್ರೆಸ್ ಮೈಕೊಡವಿಕೊಂಡು ಎದ್ದು ನಿಂತಿದೆ. 


ತೇಜಸ್ವಿನಿ ಅನಂತಕುಮಾರ್ ಗೆ ಪ್ರಾಮಿಸ್ ಮಾಡಿದ್ದ ಬಿಜೆಪಿ ಪಕ್ಷ, ತನ್ನದೆ ನಾಯಕರೊಬ್ಬರ ಒತ್ತಡಕ್ಕೆ ಮಣಿದು ತೇಜಸ್ವಿನಿಯವರನ್ನು ಸ್ಪರ್ಧೆಯಿಂದ ಹೊರಕ್ಕೆ ಇಟ್ಟಿದೆ ಎಂಬ ಮಾತು ಕೇಳಿಬಂದಿದ್ದು, ಈ ಬಾರಿ ಬೆಂಗಳೂರು ದಕ್ಷಿಣ ಕಮಲದ ತೆಕ್ಕೆಯಿಂದ ಜಾರುವ ಮುನ್ಸೂಚನೆ ದೊರೆತಿದೆ. 


ಈಗ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯಾಗೆ ಇನ್ನು ರಾಜಕೀಯದ ಅನುಭವದ ಕೊರತೆ ಇದೆ. ಅಲ್ಲದೆ ಪಕ್ಷದೊಂದಿಗೆ ಒಡನಾಟವಿದ್ದರೂ ದಕ್ಷಿಣ ಕ್ಷೇತ್ರದಲ್ಲಿ ಅಂತಹ ಹಿಡಿತವೇನು ಇಲ್ಲ. ಇನ್ನೊಂದೆಡೆ ತೇಜಸ್ವಿನಿ ಅನಂತಕುಮಾರ್ ಗೆ ಟಿಕೇಟ್‍ಹಿನ್ನೆಯಲ್ಲಿ ಅನಂತಕುಮಾರ್ ಬೆಂಬಲಿಗರು ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಗರಂ ಆಗಿದ್ದು, ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದನ್ನು ನಿಲ್ಲಿಸಿದರೂ ಅಚ್ಚರಿಯಿಲ್ಲ. ಹೀಗಾಗಿ ತೇಜಸ್ವಿ ಗೆಲುವು ಕಷ್ಟವಾಗಿದ್ದು, ಅತ್ತ ಈಡಿಗ ಸಮುದಾಯಕ್ಕೆ ಸೇರಿದ ಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್‍ನಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಬಿ.ಕೆ.ಹರಿಪ್ರಸಾದ್‍ಗೆ ಈ ಭಾಗದ ಗೌಡ್ರು ಸೇರಿದಂತೆ ಇತರ ಸಮುದಾಯದ ಬೆಂಬಲವಿದ್ದು, ಹರಿಪ್ರಸಾದ್ ಗೆದ್ದು ಬಿಜೆಪಿಯ ಖಾಯಂ ಸ್ಥಾನವನ್ನು  ಕಿತ್ತುಕೊಂಡರೂ ಅಚ್ಚಿ ಏನಿಲ್ಲ. 


ಇನ್ನೊಂದೆಡೆ ಮಂಡ್ಯದಲ್ಲಿ ಅನುಕಂಪದ ಆಧಾರದ ಮೇಲೆ ಕಣಕ್ಕಿಳಿದ ಸುಮಲತಾ ಅಂಬರೀಶ್‍ರನ್ನು ಯಾವುದೇ ಷರತ್ತುಗಳಿಲ್ಲದೇ ಬೆಂಬಲಿಸಲು ಮುಂದಾದ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತಕುಮಾರ ಪರ ಸೃಷ್ಟಿಯಾದ ಅನುಕಂಪದ ಅಲೆಯನ್ನು ಬಳಸಿಕೊಳ್ಳಲು ತೇಜಸ್ವಿನಿ ಅವರನ್ನು ಕಣಕ್ಕಿಳಿಸಲು   ವಿಫಲವಾಗಿದ್ದಂತೂ ನಿಜಕ್ಕೂ ಖೇದಕರ  ಸಂಗತಿಯಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೆಂಗಳೂರು ದಕ್ಷಿಣ ಬಿಜೆಪಿ ಕೈತಪ್ಪುವುದು ನಿಜ ಎಂಬಂತಾಗಿದೆ. 


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Loksabha 2019 #Tejaswini Ananthkumar #Bangalore South #Tejaswi Surya