ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಾಸಕ ರಾಮಲಿಂಗಾರೆಡ್ಡಿ ಹಿಂದೇಟು


20-03-2019 292

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಾಸಕ ರಾಮಲಿಂಗಾರೆಡ್ಡಿ ಹಿಂದೇಟು ಹಾಕಿದ್ದಾರೆ. ಸಂಸತ್ತಿಗೆ ಈಗಲೇ ಹೊಗಲು ತಮಗೆ ಮನಸಿಲ್ಲ ಎನ್ನುವ ಮೂಲಕ ಸ್ಪರ್ಧೆ ಬಗೆಗಿನ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.


ರಾಮಲಿಂಗಾರೆಡ್ಡಿ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‍ನ ಪ್ರಬಲ ನಾಯಕರಾಗಿದ್ದು,  ದಕ್ಷಿಣ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಮಲಿಂಗಾರೆಡ್ಡಿ ಅಜಾತಶತ್ರು  ಎಂದು ಕರೆಸಿಕೊಂಡಿದ್ದಾರೆ. 40 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಅವರು 6  ಬಾರಿ ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 


ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ರಾಮಲಿಂಗಾರೆಡ್ಡಿ ಪಕ್ಷದ ವಿರುದ್ಧ ತೀವ್ರ ಅಸಮಾಧಾನಕ್ಕೊಳಗಾಗಿದ್ದರು. ಆ ಸಂದರ್ಭದಲ್ಲಿ  ರಾಮಲಿಂಗಾರೆಡ್ಡಿ ಅವರನ್ನು ಸಂಸತ್ತಿಗೆ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. 


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಈ ಬಾರಿ ಕೇಂದ್ರ ಸಚಿವ ದಿ.ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರು ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ರಾಮಲಿಂಗಾರೆಡ್ಡಿ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಚಿಂತನೆ ನಡೆಸಿತ್ತು. 

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿಬಿಎಂಪಿ ಸದಸ್ಯನಾಗಬೇಕೆಂದು ಬಯಸಿದ್ದ ತಾವು ವಿಧಾನಸಭೆ ಸದಸ್ಯನಾಗಬೇಕಾಯಿತು. ಹಂತಹಂತವಾಗಿ ರಾಜಕೀಯದಲ್ಲಿ ಮೇಲೇರಲು ತಮಗೆ ಆಸಕ್ತಿಯಿದ್ದು, ಸದ್ಯಕ್ಕೆ ಸಂಸತ್ತಿಗೆ ಹೋಗಲು ಮನಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪುತ್ರಿ ಸೌಮ್ಯಾರೆಡ್ಡಿ ಹೊಸದಾಗಿ ವಿಧಾನಸಭೆ ಪ್ರವೇಶಿಸಿದ್ದರಿಂದ ಅವರು ಸಹ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಪಕ್ಷದ ನಾಯಕರು ತಮ್ಮನ್ನು ಸ್ಪರ್ಧಿಸುವಂತೆ ಹೇಳಿದ್ದರಾದರೂ ತಾವು ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ.ಪರಿಷತ್ ಸದಸ್ಯ ಕೆ.ಗೋವಿಂದರಾಜು, ಮಾಜಿ ಸಚಿವ ಕೃಷ್ಣಪ್ಪ ಅವರ ಹೆಸರುಗಳನ್ನು ಹೈಕಮಾಂಡ್‍ಗೆ ಕಳುಹಿಸಲಾಗಿದ್ದು, ಇಬ್ಬರೊಳಗೆ ಒಬ್ಬರು ಆದಷ್ಟು ಬೇಗ ಅಖೈರುಗೊಳ್ಳಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

#Loksabha 2019 #Election #Ramlinga Reddy #Candidate